ಶ್ರೀನಗರ: ಭಾರತೀಯ ಸೇನೆಯ ಮೇಲೆ ದಾಳಿ ಮಾಡಲು ಬಂದು, ಗಾಯಗೊಂಡಿದ್ದ ಪಾಕ್ ಉಗ್ರನನ್ನು ಯೋಧರೇ ಸೇನಾ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆಗೆ ಅಗತ್ಯವಾಗಿದ್ದ ರಕ್ತವನ್ನೂ ದಾನ ಮಾಡಿ, ಬದುಕುಳಿಸಿದ ಘಟನೆ ಕಾಶ್ಮೀರದಲ್ಲಿ ನಡೆದಿದೆ.
ಪಾಕಿಸ್ತಾನ ಸೇನೆಯ ಕರ್ನಲ್ ಒಬ್ಬರು ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲೆಂದೇ ತಬರಾಕ್ ಹುಸೇನ್ ಎಂಬ ಉಗ್ರನನ್ನು ಕಳುಹಿಸಿಕೊಟ್ಟಿದ್ದರು. ಈತ ಆಗಸ್ಟ್ ೨೧ರಂದು ರಾತ್ರಿ ರಾಜೌರಿ ಭಾಗದ ಗಡಿನಿಯಂತ್ರಣ ರೇಖೆಯಲ್ಲಿ ಭಾರತಕ್ಕೆ ನುಸುಳುವ ಯತ್ನ ನಡೆಸಿದ್ದ. ಈ ಸಂದರ್ಭದಲ್ಲಿ ಗುಂಡಿನ ದಾಳಿ ನಡೆಸಿದ್ದ ಭಾರತೀಯ ಸೇನೆಯ ಯೋಧರು, ಆತನನ್ನು ಜೀವಂತವಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಯೋಧರು ಹಾರಿಸಿದ ಗುಂಡು ಆತನ ತೋಳು ಮತ್ತು ತೊಡೆಗೆ ಬಿದ್ದು, ಆತ ಗಂಭೀರ ಗಾಯಗೊಂಡಿದ್ದ. ಕೂಡಲೇ ಆತನನ್ನು ಸೇನಾ ಆಸ್ಪತ್ರೆಗೆ ಸೇರಿಸಿದ ಯೋಧರು, ಆತನಿಗೆ ಚಿಕಿತ್ಸೆ ಕೊಡಿಸಿದ್ದರು. ಶಸ್ತ್ರಚಿಕಿತ್ಸೆ ಮಾಡುವಾಗ ಆತನಿಗೆ ರಕ್ತ ಬೇಕಾಗಿತ್ತು. ಭಾರತೀಯ ಸೇನೆಯ ಯೋಧರೇ ಆತನಿಗೆ ರಕ್ತವನ್ನೂ ದಾನ ಮಾಡಿದ್ದಾರೆ.
“ಆತನದು ಅಪರೂಪವಾದ ʼಒ ನೆಗೆಟಿವ್ʼ ಗ್ರೂಪ್ ಆಗಿತ್ತು. ನಮ್ಮ ಯೋಧರು ರಕ್ತವನ್ನೂ ನೀಡಿದರು. ಆತ ನಮ್ಮ ರಕ್ತ ಬಸಿಯಲು ಬಂದಿದ್ದರೂ, ಆತನನ್ನು ಉಗ್ರ ಎಂದು ಪರಿಗಣಿಸದೇ ಸಾಮಾನ್ಯ ರೋಗಿಯಂತೆ ಆತನಿಗೆ ಚಿಕಿತ್ಸೆ ಕೊಡಿಸಿ, ಆತನಿಗೆ ಜೀವ ಉಳಿಸಿಕೊಳ್ಳಲು ನೆರವಾಗಿದ್ದೇವೆʼʼ ಎಂದು ಸೇನೆಯ ಬ್ರಿಗೇಡಿಯರ್ ನೈರ್ ತಿಳಿಸಿದ್ದಾರೆ.
ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹುಸೇನ್ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಈತ ಪಾಕಿಸ್ತಾನದ ಕುತಂತ್ರದ ಕುರಿತು ಮಾಹಿತಿ ಕೂಡ ನೀಡಿದ್ದಾನೆ.
೩೦ ಸಾವಿರ ಕೊಟ್ಟು ಕಳುಹಿಸಿದ್ದರು!
ಭಾರತೀಯ ಸೇನೆಯ ಮೇಲೆ ದಾಳಿ ನಡೆಸಲು ಪಾಕಿಸ್ತಾನ ಸೇನೆಯೇ ಉಗ್ರರನ್ನು ಭಾರತಕ್ಕೆ ನುಗ್ಗಿಸುತ್ತಿರುವುದು ಪದೇ ಪದೇ ಸಾಬೀತಾಗುತ್ತಿದೆ. ಭಾನುವಾರ ಬಂಧಿಸಲ್ಪಟ್ಟ ಉಗ್ರ ತಬರಾಕ್ ಹುಸೇನ್ “ಭಾರತೀಯ ಸೇನೆಯ ಮೇಲೆ ಆತ್ಮಾಹುತಿ ದಾಳಿ ನಡೆಸಲು ಪಾಕ್ ಸೇನೆಯ ಕರ್ನಲ್ 30 ಸಾವಿರ ರೂ. ನೀಡಿ ತಮ್ಮನ್ನು ಕಳುಹಿಸಿದ್ದರುʼʼ ಎಂದು ಹೇಳಿಕೆ ನೀಡಿದ್ದಾನೆ.
ಪಾಕ್ ಸೇನೆಯ ಕರ್ನಲ್ ಯೂನಸ್ ತನಗೆ ಮತ್ತು ಇನ್ನಿತರ ಐವರಿಗೆ ಆತ್ಮಾಹುತಿ ದಾಳಿ ನಡೆಸಲು ಹಣ ನೀಡಿ ಕಳುಹಿಸಿಕೊಟ್ಟಿದ್ದಾರೆ ಎಂದು ಬಾಯ್ಬಿಟ್ಟಿದ್ದಾನೆ. ದಾಳಿ ನಡೆಸಲು ತಾನು ಭಾರತೀಯ ಸೇನೆಯ ಮೂರ್ನಾಲ್ಕು ನೆಲೆಗಳ ಕುರಿತು ಮಾಹಿತಿ ಸಂಗ್ರಹಿಸಿದ್ದಾಗಿ ಹುಸೇನ್ ಹೇಳಿಕೆ ನೀಡಿದ್ದಾನೆ.
“ನಾನು ಇನ್ನೂ ನಾಲ್ಕೈದು ಜನರೊಂದಿಗೆ ಭಾರತಕ್ಕೆ ನುಸುಳಲು ಬಂದಿದ್ದೆ. ನಮಗೆ ಪಾಕ್ ಸೇನೆಯ ಕರ್ನಲ್ ೩೦ ಸಾವಿರ ರೂ. ನೀಡಿ, ಭಾರತೀಯ ಸೇನೆಯ ನೆಲೆಗಳನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ದಾಳಿ ನಡೆಸುವಂತೆ ಸೂಚಿಸಲಾಗಿತ್ತು. ದಾಳಿ ನಡೆಸುವ ನೆಲೆಗಳ ಬಗ್ಗೆ ಮಾಹಿತಿ ನೀಡಲಾಗಿತ್ತುʼʼ ಎಂದು ವಿವರಿಸಿದ್ದಾನೆ.
ಇದನ್ನೂ ಓದಿ| JeM Terrorist | ಪಾಕ್ ಉಗ್ರರ ಆಣತಿಯಂತೆ ಆತ್ಮಾಹುತಿ ಬಾಂಬರ್‌ಗಳನ್ನು ಸಜ್ಜುಗೊಳಿಸುತ್ತಿದ್ದ ಬಂಧಿತ ಭಯೋತ್ಪಾದಕರು