ಲಂಡನ್: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಆಕ್ಷೇಪಾರ್ಹ ವಿಚಾರಗಳಿರುವ ಬಿಬಿಸಿಯ ಇಂಡಿಯಾ: ದಿ ಮೋದಿ ಕ್ವಶ್ಚನ್ (India: The Modi Question) ಡಾಕ್ಯುಮೆಂಟರಿ (BBC Documentary) ಕುರಿತು ಭಾರತದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸೇರಿ ಹಲವು ಸಂಸದರು ಕೂಡ ಡಾಕ್ಯುಮೆಂಟರಿ ವಿರುದ್ಧ ಮಾತನಾಡಿದ್ದಾರೆ. ಇದರ ಬೆನ್ನಲ್ಲೇ, ಬ್ರಿಟನ್‌ನಲ್ಲಿರುವ ಸಾವಿರಾರು ಅನಿವಾಸಿ ಭಾರತೀಯರು ಭಾನುವಾರ (ಜನವರಿ 29) ಬ್ರಿಟನ್‌ನ ಹಲವು ನಗರಗಳಲ್ಲಿ ಬಿಬಿಸಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಬ್ರಿಟನ್‌ನ ಲಂಡನ್, ಮ್ಯಾಂಚೆಸ್ಟರ್, ಬರ್ಮಿಂಗ್‌ಹ್ಯಾಮ್, ಗ್ಲಾಸ್ಗೋ ಹಾಗೂ ನ್ಯೂಕ್ಯಾಸಲ್ ಸೇರಿ ಹಲವು ನಗರಗಳ ಬೀದಿ ಬೀದಿಗಳಲ್ಲಿ ಅನಿವಾಸಿ ಭಾರತೀಯರು ಪ್ರತಿಭಟನೆ ನಡೆಸುವ ಮೂಲಕ ಬಿಬಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಚಲೋ ಬಿಬಿಸಿ’, ‘ಬಾಯ್ಕಾಟ್ ಬಿಬಿಸಿ’ ಎಂಬ ಘೋಷಣೆಗಳನ್ನು ಕೂಗಿ, ಬಿತ್ತಿಪತ್ರಗಳನ್ನು ಹಿಡಿದು ಬಿಬಿಸಿ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಬಿಬಿಸಿಯು ಹಿಂದು ವಿರೋಧಿ, ಮೋದಿ ವಿರೋಧಿ ಎಂದೂ ಘೋಷಣೆ ಕೂಗಿದ್ದಾರೆ.
ಇಂಡಿಯನ್ ಡಯಸ್ಪೊರಾ ಯುಕೆ (IDUK), ಫ್ರೆಂಡ್ಸ್ ಆಫ್ ಇಂಡಿಯಾ ಸೊಸೈಟಿ ಇಂಟರ್‌ನ್ಯಾಷನಲ್ (FISI) ಯುಕೆ, ಇನ್‌ಸೈಟ್ ಯುಕೆ ಹಾಗೂ ಹಿಂದು ಫೋರಂ ಆಫ್ ಬ್ರಿಟನ್ (HFB) ಸೇರಿ ಹಲವು ಸಂಘಟನೆಗಳು ಸಾವಿರಾರು ಅನಿವಾಸಿ ಭಾರತೀಯರನ್ನು ಒಗ್ಗೂಡಿಸಿ ಪ್ರತಿಭಟನೆ ನಡೆಸಿದ್ದಾರೆ.
ಗಲ್ಲಿ ಗಲ್ಲಿಗಳಲ್ಲಿ ಬಿಬಿಸಿ ವಿರುದ್ಧ ಘೋಷಣೆ
ಬ್ರಿಟನ್‌ನ ಪ್ರಮುಖ ನಗರಗಳಲ್ಲಿ ಬಿಬಿಸಿ ವಿರುದ್ಧ ಘೋಷಣೆ ಕೂಗುವ ಮೂಲಕ ಅನಿವಾಸಿ ಭಾರತೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಯ್ಕಾಟ್ ಬಿಬಿಸಿ, ಬ್ರಿಟಿಷ್ ಬಯಾಸ್ ಕಾರ್ಪೊರೇಷನ್, ಶೇಮ್ ಆನ್ ಬಿಬಿಸಿ, ಸ್ಟಾಪ್ ದಿ ಹಿಂದುಫೋಬಿಕ್ ನರೇಟಿವ್ ಎಂಬ ಘೋಷಣೆ ಕೂಗಿದ್ದಾರೆ. ಹಾಗೆಯೇ, ಭಾರತ್ ಮಾತಾ ಕಿ ಜೈ ಎಂಬ ಘೋಷಣೆಯನ್ನೂ ಮೊಳಗಿಸಿದ್ದಾರೆ.
ಭಾರತದ ನ್ಯಾಯಾಲಯವೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿದೆ. ಹೀಗಿದ್ದರೂ, ಮೋದಿ ಅವರ ಕುರಿತು ಬಿಬಿಸಿ ತೀರ್ಪು ನೀಡಿರುವುದು ಸರಿಯಲ್ಲ. ಏಕಪಕ್ಷೀಯವಾಗಿ ಮೋದಿ ವಿರುದ್ಧ ಡಾಕ್ಯುಮೆಂಟರಿ ನಿರ್ಮಿಸಲಾಗಿದೆ. ಸಾರ್ವಜನಿಕ ಮಾಧ್ಯಮವಾಗಿ ವಿಫಲವಾಗಿರುವ ಬಿಬಿಸಿ ವಿರುದ್ಧ ಜಾಗತಿಕ ಮಟ್ಟದಲ್ಲಿ ತನಿಖೆ ನಡೆಯಬೇಕು” ಎಂದು FISI ಯುಕೆ ಸಂಘಟನೆಯ ಜಯು ಶಾ ಆಗ್ರಹಿಸಿದ್ದಾರೆ.
ಇದನ್ನೂ ಓದಿ: BBC Documentary: ದೇಶದ ಜನರ ಮಧ್ಯೆ ಒಡಕು ಮೂಡಿಸಲು ಯತ್ನ, ಸಾಕ್ಷ್ಯಚಿತ್ರದ ಬೆನ್ನಲ್ಲೇ ಮೋದಿ ಹೇಳಿಕೆ