ಬರ್ನ್: ಪ್ರತಿಯೊಬ್ಬರಿಗೂ ಜೀವನದಲ್ಲಿ ಸ್ವಂತದ್ದೊಂದು ಮನೆ ಹೊಂದಬೇಕು ಎಂಬ ಕನಸಿರುತ್ತದೆ. ತುಂಬ ದೊಡ್ಡದಿರದಿದ್ದರೂ ಸ್ವಂತದ್ದೊಂದು ಸೂರು ಇರಬೇಕು ಎಂದು ಕನಸು ಕಾಣುತ್ತಾರೆ. ಅದಕ್ಕಾಗಿ ಶ್ರಮ ವಹಿಸುತ್ತಾರೆ. ಆದರೆ, ಕೆಲವರು ಮಾತ್ರ ಐಷಾರಾಮಿ ಮನೆಗೆ ಒಡೆಯರಾಗುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ಭಾರತ ಮೂಲದ ಉದ್ಯಮಿ ಪಂಕಜ್ ಓಸ್ವಾಲ್ (Pankaj Oswal) ಅವರು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ 1,649 ಕೋಟಿ ರೂಪಾಯಿ ಕೊಟ್ಟು ಐಷಾರಾಮಿ ಮನೆ ಖರೀದಿಸಿದ್ದಾರೆ. ಪಂಕಜ್ ಓಸ್ವಾಲ್ ಹಾಗೂ ಪತ್ನಿ ರಾಧಿಕಾ ಓಸ್ವಾಲ್ ಅವರ ಮನೆಯ ಕನಸು ಈಗ ನನಸಾಗಿದೆ.
ಜಗತ್ತಿನಲ್ಲೇ ಅತಿ ದುಬಾರಿ ಎನಿಸಿರುವ, 4.3 ಲಕ್ಷ ಚದರ ಅಡಿ ಇರುವ ಬೃಹತ್ ಹಾಗೂ ಐಷಾರಾಮಿ ಮನೆಯನ್ನು ದಂಪತಿ ಖರೀದಿಸಿದ್ದಾರೆ. ಓಸ್ವಾಲ್ ಅವರು ಭಾರತ ಮೂಲದ ಉದ್ಯಮಿಯಾಗಿದ್ದು, ಓಸ್ವಾಲ್ ಗ್ರೂಪ್ ಜಾಗತಿಕ ಮಟ್ಟದ ಕಂಪನಿಯಾಗಿದೆ. ಪೆಟ್ರೋಕೆಮಿಕಲ್ಸ್, ರಿಯಲ್ ಎಸ್ಟೇಟ್, ರಸಗೊಬ್ಬರ ಹಾಗೂ ಗಣಿಗಾರಿಕೆ ಇವರ ಪ್ರಮುಖ ಉದ್ಯಮಗಳಾಗಿವೆ. ಓಸ್ವಾಲ್ ಕುಟುಂಬವು 2013ರಲ್ಲಿ ಆಸ್ಟ್ರೇಲಿಯಾ ತೊರೆದು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನೆಲೆಸಿದೆ.
ಓಸ್ವಾಲ್ ಪುತ್ರಿ ರಿದ್ಧಿಯ ಇನ್‌ಸ್ಟಾಗ್ರಾಂ ಪೋಸ್ಟ್
ಮನೆಯಲ್ಲಿ ಅಂಥಾದ್ದೇನಿದೆ?
ಸ್ವಿಟ್ಜರ್‌ಲ್ಯಾಂಡ್‌ನ ಗಿಂಗಿಸ್ ಎಂಬ ಗ್ರಾಮದಲ್ಲಿರುವ ಐಷಾರಾಮಿ ಮನೆಗೆ ಶತಮಾನದ ಇತಿಹಾಸವಿದೆ. ಸ್ವಿಸ್ ಉದ್ಯಮಿಯೊಬ್ಬರು ಇದನ್ನು 1902ರಲ್ಲಿ ನಿರ್ಮಿಸಿದ್ದು, ಬಳಿಕ ಗ್ರೀಕ್ ಹಡಗು ಉದ್ಯಮಿ ಅರಿಸ್ಟಾಟಲ್ ಓನಾಸಿಸ್ ಅವರು ಖರೀದಿಸಿದ್ದರು. ಇಂತಹ ಐತಿಹಾಸಿಕ ಹಿನ್ನೆಲೆ ಇರುವ ಮನೆಯನ್ನು ಓಸ್ವಾಲ್ ಅವರು ಖರೀದಿಸಿದ್ದು, ರಿನೋವೇಷನ್‌ಗೆ ವರ್ಷಗಟ್ಟಲೆ ತೆಗೆದುಕೊಂಡಿದ್ದಾರೆ. ಮನೆಯಲ್ಲಿ 12 ಬೆಡ್‌ರೂಮ್, 17 ಬಾತ್‌ರೂಮ್, ಒಂದು ಸ್ವಿಮ್ಮಿಂಗ್ ಪೂಲ್, ಟೆನಿಸ್ ಕೋರ್ಟ್, ಹೆಲಿಪ್ಯಾಡ್, ಸ್ಪಾ, ವೈನ್ ಸೆಲ್ಲರ್ ಸೇರಿ ಹಲವು ಸೌಲಭ್ಯಗಳಿವೆ.
ಇದನ್ನೂ ಓದಿ: Samantha Ruth Prabhu : ಹೈದರಾಬಾದ್‌ನಲ್ಲಿ 7.8 ಕೋಟಿ ರೂ. ಮೌಲ್ಯದ ಐಷಾರಾಮಿ ಮನೆ ಖರೀದಿಸಿದ ಸಮಂತಾ
ಭಾರತೀಯತೆ ಮೆರೆದ ಉದ್ಯಮಿ
ವಿದೇಶಕ್ಕೆ ತೆರಳಿ, ಜಾಗತಿಕ ಮಟ್ಟದ ಕಂಪನಿಗೆ ಒಡೆಯರಾದರೂ ಓಸ್ವಾಲ್ ದಂಪತಿಯು ಭಾರತೀಯತೆಯನ್ನು ಮರೆತಿಲ್ಲ. ಭಾರತೀಯ ಶೈಲಿಯಲ್ಲಿಯೇ ಮನೆಯನ್ನು ಮರು ನವೀಕರಣ ಮಾಡಿದ್ದಾರೆ. ಜೈಪುರದ ಅಂಬರ್ ಅರಮನೆಯನ್ನು ಗಮನದಲ್ಲಿಟ್ಟುಕೊಂಡು ಮನೆಯನ್ನು ರಿನೋವೇಟ್ ಮಾಡಿದ್ದಾರೆ. ಹಾಗೆಯೇ, ಮನೆಗೆ ತಮ್ಮ ಇಬ್ಬರು ಪುತ್ರಿಯರಾದ ವಸುಂಧರಾ ಹಾಗೂ ರಿದ್ಧಿ ಎಂದು ಹೆಸರಿಟ್ಟಿದ್ದಾರೆ. ಪುತ್ರಿ ರಿದ್ಧಿಯು ಇನ್‌ಸ್ಟಾಗ್ರಾಂನಲ್ಲಿ ಮನೆಯ ಫೋಟೊ ಹಂಚಿಕೊಂಡಿದ್ದಾರೆ. ಇವರ ಮನೆಯ ಫೋಟೊಗಳು ವೈರಲ್ ಆಗಿವೆ.