ಭುವನೇಶ್ವರ: ದೇಶಾದ್ಯಂತ ಇದುವರೆಗೆ ಟೊಮ್ಯಾಟೊದ್ದೇ ಸುದ್ದಿಯಾಗಿತ್ತು. ಟೊಮ್ಯಾಟೊ ಒಂದು ಕೆ.ಜಿ.ಗೆ 200 ರೂ. ಆಗಿದ್ದು, ಟೊಮ್ಯಾಟೊ ಕಳ್ಳತನ, ಅವುಗಳನ್ನು ಕಾಯಲು ಬೌನ್ಸರ್‌ಗಳ ನೇಮಕ, ಸಿಸಿಟಿವಿ ಅಳವಡಿಸಿದ್ದು ಸುದ್ದಿಯಾಗಿತ್ತು. ಆದರೆ, ಈಗ ಮಾವಿನ ಹಣ್ಣು ಸುದ್ದಿಯಾಗುತ್ತಿದೆ. ಹೌದು, ಒಡಿಶಾದ ರಕ್ಷಾಕರ್ ಭೋಯಿ ಎಂಬ ರೈತ ಬೆಳೆದ ಮಾವು ಒಂದು ಕೆ.ಜಿ.ಗೆ 2.75 ಲಕ್ಷ ರೂ.ನಿಂದ 3 ಲಕ್ಷ ರೂ. ಆಗಿದ್ದು, ಇದು ವಿಶ್ವದಲ್ಲೇ ದುಬಾರಿ ಬೆಲೆಯ ಮಾವು ಎಂಬ ಖ್ಯಾತಿ ಪಡೆದಿದೆ.
ಒಡಿಶಾದ ಕಾಳಹಂಡಿ ಜಿಲ್ಲೆಯ ಕಂಡುಲ್ಗುಡ ಗ್ರಾಮದ ರಕ್ಷಾಕರ್ ಭೋಯಿ ಅವರು ಮಾವು ಬೆಳೆದು ಈಗ ಕೋಟ್ಯಧೀಶರಾಗಿದ್ದಾರೆ. ಇವರು ಮಿಯಾಜಾಕಿ ಎಂಬ ಜಪಾನ್ ಮೂಲದ ತಳಿಯ ಮಾವು ಬೆಳೆದಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಇದರ ಬೆಲೆ ಒಂದು ಕೆ.ಜಿ.ಗೆ 3 ಲಕ್ಷ ರೂ.ವರೆಗೆ ಇದೆ. ಇವರು ಅರಣ್ಯ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಮಿಯಾಜಾಕಿ ಎಂಬ ತಳಿಯ ಮಾವಿನ ಬೀಜಗಳನ್ನು ಪಡೆದು ತಮ್ಮ ತೋಟದಲ್ಲಿ ಬೆಳೆದಿದ್ದಾರೆ. ಈಗ ಅವರ ಮಾವಿಗೆ ವಜ್ರದ ಬೆಲೆ ಇದೆ.
ಮಿಯಾಜಾಕಿ ಮಾವು ನೋಡಲು ತುಂಬ ಅದ್ಭುತವಾಗಿರುವ ಜತೆಗೆ ವಿಭಿನ್ನ ರುಚಿ ಹೊಂದಿದೆ. ಬೇರೆ ಮಾವಿಗಿಂತ ಇದು ಸಂಪೂರ್ಣವಾಗಿ ಭಿನ್ನವಾಗಿದೆ. ವಿಟಮಿನ್ ಎ ಹಾಗೂ ಸಿ ಈ ಮಾವಿನಲ್ಲಿ ಹೆಚ್ಚಿದೆ. ಮನುಷ್ಯನ ರೋಗಗಳಿಂದ ಮುಕ್ತಿಗೊಳಿಸಿ, ಇಡೀ ದೇಹವನ್ನು ಆರೋಗ್ಯವಾಗಿಡಲು ಈ ಮಾವು ನೆರವಾಗಿದೆ. ಹಾಗಾಗಿ ಇದು ಜಗತ್ತಿನ ದುಬಾರಿ ಮಾವು ಎನಿಸಿದೆ” ಎಂದು ರೈತ ರಕ್ಷಾಂಕರ್ ಭೋಯಿ ತಿಳಿಸಿದ್ದಾರೆ.
ಇದನ್ನೂ ಓದಿ: Tomatoes Stolen: 250 ಕೆ.ಜಿ ಟೊಮ್ಯಾಟೊ ಸಹಿತ ವಾಹನ ಹೈಜಾಕ್ ಮಾಡಿದ್ದ ಕಿಲಾಡಿ ಜೋಡಿ ಅರೆಸ್ಟ್
ಈ ಮಾವಿನಹಣ್ಣುಗಳು ವ್ಯಾಪಕ ರೋಗ ನಿರೋಧಕ ಶಕ್ತಿಯನ್ನು ಹೊಂದಿವೆ. ಬೀಟಾ-ಕ್ಯಾರೋಟಿನ್ ಮತ್ತು ಫೋಲಿಕ್ ಆಮ್ಲವನ್ನು ಒಳಗೊಂಡಿವೆ. ಇದು ಕಣ್ಣಿನ ಆರೋಗ್ಯಕ್ಕೆ ಹೆಚ್ಚು ಉಪಯೋಗಕಾರಿಯಾಗಿದೆ. ದೃಷ್ಟಿ ಹೀನತೆಯನ್ನು ತಪ್ಪಿಸುವಲ್ಲಿ ಈ ಮಾವು ಪರಿಣಾಮಕಾರಿಯಾಗಿದೆ ಎಂದು ಹೇಳಲಾಗುತ್ತಿದೆ. ಮಿಯಾಜಾಕಿ ಮಾವನ್ನು ಭಾರತ, ಬಾಂಗ್ಲಾದೇಶ, ಥಾಯ್ಲೆಂಡ್ ಮತ್ತು ಫಿಲಿಪ್ಪಿನ್ಸ್ ರಾಷ್ಟ್ರಗಳಲ್ಲಿ ಬೆಳೆಯಲಾಗುತ್ತದೆ.