ನವದೆಹಲಿ: ಭಾರತದಲ್ಲಿ ಕಾಫಿ (Coffee) ಕುಡಿಯದವರೇ ಇರಲಿಕ್ಕಿಲ್ಲ. ಬೆಳಗ್ಗೆ ಎದ್ದ ತಕ್ಷಣ ಕಾಫಿ ಕೊಡೇ ಎಂದು ಹೆಂಡತಿಯನ್ನು ಕೇಳುವುದರಿಂದ ಹಿಡಿದು, ಗೆಳೆಯರು ಸಿಕ್ಕ ತಕ್ಷಣ ಬಾರೋ ಕಾಫಿ ಕುಡಿಯೋಣ ಎನ್ನುವತನಕ ನಮ್ಮ ಜೀವನದ ಜತೆ ಕಾಫಿ ಬೆರೆತಿದೆ. ಅದರಲ್ಲೂ, ದಕ್ಷಿಣ ಭಾರತದಲ್ಲಂತೂ ಫಿಲ್ಟರ್ ಕಾಫಿಯು (South Indian Filter Coffee) ಜನರ ಜೀವನದ ಅವಿಭಾಜ್ಯ ಅಂಗವಾಗಿದೆ. ಇದಕ್ಕೆ ನಿದರ್ಶನ ಎಂಬಂತೆ, ದಕ್ಷಿಣ ಭಾರತದ ಫಿಲ್ಟರ್ ಕಾಫಿಯು (Indian Coffee) ಜಗತ್ತಿನ ಅಗ್ರ 28 ಕಾಫಿಗಳಲ್ಲಿ ದ್ವಿತೀಯ ಸ್ಥಾನ ಪಡೆದಿದೆ.
ಖ್ಯಾತ ಆಹಾರ ಹಾಗೂ ಪ್ರವಾಸದ ಕುರಿತು ಮಾರ್ಗದರ್ಶನ ನೀಡುವ ವೇದಿಕೆಯಾದ ಟೇಸ್ಟ್‌ಅಟ್ಲಾಸ್ (TasteAtlas) ಎಂಬ ಸಂಸ್ಥೆಯು ಜಗತ್ತಿನ 38 ಅಗ್ರ ಕಾಫಿಗಳ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ, ದಕ್ಷಿಣ ಭಾರತದ ಫಿಲ್ಟರ್ ಕಾಫಿಯು ಎರಡನೇ ಸ್ಥಾನ ಪಡೆದಿದೆ. ಕ್ಯೂಬಾದ ಕೆಫೆ ಕ್ಯೂಬಾನೋ ಕಾಫಿಯು ಅಗ್ರಸ್ಥಾನ ಪಡೆದಿದೆ. ಡಾರ್ಕ್ ರೋಸ್ಟ್ ಕಾಫಿ ಹಾಗೂ ಸಕ್ಕರೆ ಬಳಸಿ ಕ್ಯೂಬಾದ ಕ್ಯೂಬಾನೋ ಕಾಫಿಯನ್ನು ತಯಾರಿಸಲಾಗುತ್ತದೆ. ಇದು ಕ್ಯೂಬಾ ಸೇರಿ ಜಗತ್ತಿನಾದ್ಯಂತ ಖ್ಯಾತಿ ಗಳಿಸಿದೆ.
ರೇಟಿಂಗ್ ಆಧಾರದ ಮೇಲೆ ಕಾಫಿಗೆ ರ‍್ಯಾಂಕ್ ನೀಡಲಾಗಿದೆ. ಕ್ಯೂಬಾದ ಕೆಫೆ ಕ್ಯೂಬಾನೊ, ಭಾರತದ ಫಿಲ್ಟರ್ ಕಾಫಿ, ಗ್ರೀಸ್‌ನ ಎಕ್ಸ್‌ಪ್ರೆಸ್ಸೋ ಫೆಡ್ಡೋಗೆ 4.5 ರೇಟಿಂಗ್ ಸಿಕ್ಕಿದ್ದು, ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದಿವೆ. ಗ್ರೀಸ್‌ನ ಫ್ರೆಡ್ಡೋ ಕ್ಯಾಪಚಿನೋ 4.4, ಸ್ಪೇನ್‌ನ ಕೆಫೆ ಬೊಂಬೊನ್ 4.4, ಇಟಲಿಯ ಕ್ಯಾಪಚಿನೋ 4.3, ಟರ್ಕಿಯ ಟರ್ಕಿಶ್ ಕಾಫಿ 4.3, ಇಟಲಿಯ ರೆಸ್ಟ್ರಿಟ್ಟೋ 4.3, ಗ್ರೀಸ್‌ನ ಫ್ರೇಪ್ ಕಾಫಿ 4.3 ಹಾಗೂ ವಿಯೇಟ್ನಾಂನ ವಿಯೇಟ್ಮಾಮೀಸ್ ಐಸ್ಡ್ ಕಾಫಿಯು 4.3 ರೇಟಿಂಗ್ ಪಡೆದು ಟಾಪ್ 10 ಕಾಫಿಗಳ ಪಟ್ಟಿ ಸೇರಿವೆ.
ಇದನ್ನೂ ಓದಿ: Tea And Coffee With Meals: ಊಟ ತಿಂಡಿ ಜೊತೆಜೊತೆಗೆ ಚಹಾ ಕಾಫಿ ಹೀರುವ ಅಭ್ಯಾಸ ಒಳ್ಳೆಯದೇ, ಕೆಟ್ಟದ್ದೇ?
ಫಿಲ್ಟರ್ ಕಾಫಿಯ ವೈಶಿಷ್ಟ್ಯ
ದಕ್ಷಿಣ ಭಾರತದ ಫಿಲ್ಟರ್ ಕಾಫಿಗೆ ಹಲವು ಹೆಸರುಗಳಿವೆ. ಡಿಗ್ರಿ ಕಾಫಿ, ಮೀಟರ್ ಕಾಫಿ, ಮೈಸೂರು ಕಾಫಿ ಹಾಗೂ ಮದ್ರಾಸ್ ಕಾಫಿ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ. ಸ್ಟೇನ್‌ಲೆಸ್ ಸ್ಟೀಲ್‌ನಿಂದ ತಯಾರಿಸಿದ ಫಿಲ್ಟರ್ ಯಂತ್ರವನ್ನು ಬಳಸಿ ಕಾಫಿ ತಯಾರಿಸಲಾಗುತ್ತದೆ. ಕಾಫಿ ಯಂತ್ರದಲ್ಲಿ ಎರಡು ವಿಭಾಗಗಳು ಇರುತ್ತವೆ. ಮೇಲ್ಭಾಗದಲ್ಲಿ ರಂಧ್ರ ಇದ್ದರೆ, ಕೆಳ ಭಾಗದಲ್ಲಿ ಕಾಫಿ ಸಂಗ್ರಹಿಸುವ ವಿಭಾಗ ಇರುತ್ತದೆ. ಕುದಿಸಿದ ಕಾಫಿಯು ನಿಧಾನವಾಗಿ ತೊಟ್ಟಿಕ್ಕುತ್ತದೆ. ಬಳಿಕ ಅದನ್ನು ಕಾಫಿಯಾಗಿ ಬಳಸಲಾಗುತ್ತದೆ. ದಕ್ಷಿಣ ಭಾರತದ ಕಾಫಿ ತಯಾರಿಕೆಯ ವಿಧಾನವೂ ಖ್ಯಾತಿ ಗಳಿಸಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ