ನವದೆಹಲಿ: ಅಕ್ಟೋಬರ್ 1ರಿಂದ ಹೊಸ ಸೀಸನ್ ಆರಂಭವಾದ ಬೆನ್ನಲ್ಲೇ ಕೇಂದ್ರ ಸರ್ಕಾರವು (Central Government), ಸಕ್ಕರೆ ರಫ್ತು (Sugar Export) ಮೇಲಿನ ನಿರ್ಬಂಧವನ್ನು (Export Ban) ಮತ್ತೆ ಮುಂದುವರಿಸಿದೆ. ದೇಶಿಯವಾಗಿ ಉತ್ಪನ್ನದಲ್ಲಿ ಕುಸಿತ ಮತ್ತು ಜಾಗತಿಕವಾಗಿ ಕೊರತೆಯಾಗುವ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಕಳೆದ ಏಳು ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಸಕ್ಕರೆ ಮಾರಾಟ ಸಂಪೂರ್ಣವಾಗಿ ಸ್ಥಗಿತವಾಗಲಿದೆ.
ಸಕ್ಕರೆಯಲ್ಲಿ ವಿಶ್ವದ ಎರಡನೇ ಅತಿದೊಡ್ಡ ಉತ್ಪಾದಕವಾಗಿರುವ ಭಾರತವು ಈಗಾಗಲೇ, 2023ರ ಅಕ್ಟೋಬರ್ 31ರವರೆಗೆ ಸ್ವಿಟ್ನರ್ ರಫ್ತು ಮೇಲೆ ನಿಷೇಧ ಹೇರಿದೆ. ಈ ನಿಷೇಧವನ್ನು ಮುಂದಿನ ಆದೇಶದವರೆಗೂ ಅನಿರ್ದಿಷ್ಟಾವಧಿಗೆ ವಿಸ್ತರಣೆ ಮಾಡಲಾಗಿದೆ ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯದ ಅಧಿಸೂಚನೆ ತಿಳಿಸಿದೆ.
2023-24ನೇ ಸಾಲಿನಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಲಭ್ಯತೆಯನ್ನು ಹೆಚ್ಚಿಸುವುದಕ್ಕಾಗಿ ರಫ್ತು ಮೇಲೆ ನಿಷೇಧ ಹೇರಲಾಗಿದೆ. ಈ ಮೂಲಕ ಹಬ್ಬಗಳ ಸೀಸನ್‌ನಲ್ಲಿ ಸಕ್ಕರೆಯ ಬೆಲೆಯನ್ನು ನಿಯಂತ್ರಣ ಮಾಡುವುದು ಸರ್ಕಾರ ಗುರಿಯಾಗಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ ದೇಶಿ ಮಾರುಕಟ್ಟೆಯಲ್ಲಿ ಸಕ್ಕರೆಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಆದರೆ, ಕೇಂದ್ರ ಸರ್ಕಾರವು ಕೈಗೊಂಡಿರುವ ನಿರ್ಧಾರವು, ಜಾಗತಿಕ ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಯಾಕೆಂದರೆ, ಜಾಗತಿಕ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯನ್ನು ಭಾರತವೇ ಪೂರೈಸುತ್ತಿದೆ.
ಈ ಸುದ್ದಿಯನ್ನೂ ಓದಿ: Sugar Production : ರಾಜ್ಯದಲ್ಲಿ ಸಕ್ಕರೆ ಉತ್ಪಾದನೆ ಈ ಬಾರಿ 42.30% ಕುಸಿತ ಭೀತಿ
ಜನರ 22 ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಒಂದಾಗಿರುವ ಸಕ್ಕರೆಯು, ಅದರ ಬೆಲೆ ಏರಿಕೆಯು ಗ್ರಾಹಕರ ಮೇಲೆ ವಿಪರೀತ ಪರಿಣಾಮ ಬೀರುತ್ತದೆ. ಜಾಗತಿಕ ಹವಾಮಾನ ವೈಪರೀತ್ಯವಾದ ಎಲ್ ನಿನೊದಿಂದಾಗಿ ಈ ವರ್ಷ ಸಕ್ಕರೆ ಉತ್ಪಾದನೆಯಲ್ಲಿ ಕೊರತೆಯಾಗಿದೆ. ಜತೆಗೆ ಕಬ್ಬು, ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳ ಉತ್ಪಾದನೆಯು ಕೂಡ ಕುಂಠಿತವಾಗುವ ಸಾಧ್ಯತೆ ಇದೆ. ಹಾಗಾಗಿ, ಈ ಪರಿಸ್ಥಿತಿಯು ಆಹಾರ ಬೆಲೆಗಳ ಮೇಲೆ ಒತ್ತಡವನ್ನು ಸೃಷ್ಟಿಸಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಸಕ್ಕರೆ ದಾಸ್ತಾನು ತಡೆಯುವುದಕ್ಕಾಗಿ ಕೇಂದ್ರ ಆಹಾರ ಸಚಿವಾಲಯವು ಕಳೆದ ತಿಂಗಳ, ಸಕ್ಕರೆ ನಿಯಂತ್ರಣ ಆದೇಶದ ಷರತ್ತು 5ರ ಅಡಿಯಲ್ಲಿ ವ್ಯಾಪಾರಿಗಳು, ಸಗಟು ವ್ಯಾಪಾರಿಗಳು, ದೊಡ್ಡ ಸರಪಳಿ ಚಿಲ್ಲರೆ ವ್ಯಾಪಾರಿಗಳು ಮತ್ತು ಸೂಪರ್‌ಮಾರ್ಕೆಟ್‌ಗಳು ಸೇರಿದಂತೆ ಪ್ರತಿ ಖರೀದಿದಾರರಿಗೆ ಮೇ-ಆಗಸ್ಟ್‌ನಲ್ಲಿ ಮಾರಾಟವಾದ ಸಕ್ಕರೆಯ ಪ್ರಮಾಣವನ್ನು ಘೋಷಿಸಲು ಗಿರಣಿಗಾರರಿಗೆ ಕೋರಿತ್ತು. ಈವರೆಗೂ ಯಾರು ತಮ್ಮ ಲೆಕ್ಕಪರಿಶೋಧನೆಯನ್ನು ಸಲ್ಲಿಸಿಲ್ಲ ಅಂಥ ಮಿಲ್‌ಗಳಿಗೆ ಕಳೆದ ವಾರವಷ್ಟೇ ಕೇಂದ್ರ ಸರ್ಕಾರವು ಎಚ್ಚರಿಕೆಯನ್ನೂ ನೀಡಿತ್ತು. ಸಕ್ಕರೆಯನ್ನು ನಿರ್ಬಂಧಿತ ವರ್ಗಕ್ಕೆ ಸೇರಿಸಿದ್ದರಿಂದ ಕೇಂದ್ರ ಸರ್ಕಾರವು ಸಂಪೂರ್ಣವಾಗಿ ಅದರ ವ್ಯಾಪಾರ ಮತ್ತು ರಫ್ತು ಮೇಲೆ ನಿಯಂತ್ರಣವನ್ನು ಹೊಂದಿರುತ್ತದೆ.