ಹೊಸದಿಲ್ಲಿ: ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ (Apollo Hospital) ನಡೆದಿರುವ ʼಕಿಡ್ನಿ ಮಾರಾಟ ಹಗರಣ’ದ (Cash for Kidney) ತನಿಖೆಗೆ ಭಾರತೀಯ ಆರೋಗ್ಯ ಸಚಿವಾಲಯ (Health ministry) ಆದೇಶಿಸಿದೆ. ಈ ಕುರಿತು ಮಾಧ್ಯಮಗಳ ಸತತ ವರದಿಗಳ ನಂತರ ಸರ್ಕಾರ ಎಚ್ಚೆತ್ತುಕೊಂಡಿದೆ.
ಅಂಗಾಂಗ ಕಸಿಗಾಗಿ ತಮ್ಮ ಮೂತ್ರಪಿಂಡಗಳನ್ನು ಕೆಲವು ಮ್ಯಾನ್ಮಾರ್ ಪ್ರಜೆಗಳು ಈ ಆಸ್ಪತ್ರೆಯಲ್ಲಿ ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂಬುದು ಆರೋಪ. ಭಾರತೀಯ ಆರೋಗ್ಯ ಸಚಿವಾಲಯದ ಅಡಿಯಲ್ಲಿ ಬರುವ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (NOTTO) ದೆಹಲಿಯ ಆರೋಗ್ಯ ಕಾರ್ಯದರ್ಶಿ ಎಸ್.ಬಿ.ದೀಪಕ್ ಕುಮಾರ್ ಅವರಿಗೆ ಈ ಕುರಿತು ಪರೀಕ್ಷಿಸಿ, ಸೂಕ್ತ ಕ್ರಮ ತೆಗೆದುಕೊಳ್ಳಲು ಮತ್ತು ಕ್ರಮ ತೆಗೆದುಕೊಂಡ ವರದಿಯನ್ನು ಒಂದು ವಾರದಲ್ಲಿ ಒದಗಿಸುವಂತೆ ಇಲಾಖೆ ಸೂಚಿಸಿದೆ.
ಈ ಬಗ್ಗೆ ತನಿಖೆ ನಡೆಸಲು ಮತ್ತು ದಾನಿಗಳು ಮತ್ತು ರೋಗಿಗಳ ವಿವರಗಳನ್ನು ಪರಿಶೀಲಿಸುವ ಸಮಿತಿಯನ್ನು ರಚಿಸಲಾಗುತ್ತಿದೆ ಎಂದು ಕುಮಾರ್ ಹೇಳಿದ್ದಾರೆ. ದೆಹಲಿಯ ಅಪೋಲೋ ಆಸ್ಪತ್ರೆಯು ದೊಡ್ಡ ಆಸ್ಪತ್ರೆಗಳ ಗ್ರೂಪ್‌ನ ಒಂದು ಭಾಗವಾಗಿದೆ. ಅಪೋಲೋ ಆಸ್ಪತ್ರೆಗಳು ಭಾರತದ ಅನೇಕ ನಗರಗಳಲ್ಲಿ ಉಪಸ್ಥಿತಿಯನ್ನು ಹೊಂದಿವೆ.
ದೆಹಲಿಯಲ್ಲಿ ಎರಡು ಅಪೋಲೋ ಆಸ್ಪತ್ರೆಗಳಿವೆ. ಇವುಗಳನ್ನು ನಿರ್ವಹಿಸುವ ಇಂದ್ರಪ್ರಸ್ಥ ಮೆಡಿಕಲ್ ಕಾರ್ಪ್ ಸಂಸ್ಥೆ, ಹಗರಣದ ಆರೋಪಗಳನ್ನು ತಿರಸ್ಕರಿಸಿದೆ. “ಇದು ಸಂಪೂರ್ಣವಾಗಿ ಸುಳ್ಳು, ಆಧಾರರಹಿತ ಮತ್ತು ತಪ್ಪುದಾರಿಗೆಳೆಯುವ ಆರೋಪ” ಎಂದಿದೆ. ಆಸ್ಪತ್ರೆಯು ಪ್ರತಿಯೊಂದು ಕಾನೂನು ಮತ್ತು ನೈತಿಕ ಸೂತ್ರಗಳನ್ನು ಪಾಲಿಸುತ್ತಿದ್ದು, ಸರ್ಕಾರ ನಿಗದಿಪಡಿಸಿದ ಮಾರ್ಗಸೂಚಿಗಳಿಗೆ ಬದ್ಧವಾಗಿದೆ ಎಂದು ಹೇಳಿದೆ.
ಅಪೊಲೊ ಕಿಡ್ನಿ ಮಾರಾಟ ಹಗರಣದಲ್ಲಿ ಭಾಗಿಯಾಗಿದೆ ಎಂದು ಬ್ರಿಟನ್‌ನ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿತ್ತು. ಮ್ಯಾನ್ಮಾರ್‌ನಿಂದ ಯುವಕರನ್ನು ದೆಹಲಿಗೆ ಕರೆತರಲಾಗುತ್ತಿದೆ. ಶ್ರೀಮಂತ ಬರ್ಮಾ ರೋಗಿಗಳಿಗೆ ಕಸಿ ಮಾಡಲು (kidney transplant) ತಮ್ಮ ಮೂತ್ರಪಿಂಡಗಳನ್ನು ಮಾರಾಟ ಮಾಡುವಂತೆ ಇವರನ್ನು ಮನವೊಲಿಸಲಾಗುತ್ತಿದೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ.
ಅಪೋಲೋ ಹಾಸ್ಪಿಟಲ್ಸ್ ಸರಣಿ, ಚೆನ್ನೈಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ ಮತ್ತು ದೇಶಾದ್ಯಂತ 70ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಹೊಂದಿದೆ. ಕಂಪನಿಯು ಈ ಹಿಂದೆ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಆಸ್ಪತ್ರೆ ಸರಪಳಿಯು 2022ರಲ್ಲಿ 1641 ಅಂಗಾಂಗ ಕಸಿ ಮಾಡಿದೆ. ಈ ಆಸ್ಪತ್ರೆಗಳಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಅನೇಕ ವಿದೇಶಿ ರೋಗಿಗಳೂ ಬರುತ್ತಾರೆ.
ಇದನ್ನೂ ಓದಿ: kidney disease: ಕೊರೊನಾ ಕಾಣಿಸಿಕೊಂಡವರಲ್ಲಿ ಕಾಡುತ್ತಿದೆ ಕಿಡ್ನಿ ಸಮಸ್ಯೆ; ನಿರ್ಲಕ್ಷ್ಯ ಮಾಡಿದ್ರೆ ಅಪಾಯ ಗ್ಯಾರಂಟಿ