ವಾಷಿಂಗ್ಟನ್: ಜಾಗತಿಕ ಆರ್ಥಿಕ ಹಿಂಜರಿತದ ನಿರೀಕ್ಷೆಯ ಬೆನ್ನಲ್ಲೇ ಅಂತಾರಾಷ್ಟ್ರೀಯ ಐಟಿ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುತ್ತಿವೆ. ಇದರ ಭಾಗವಾಗಿಯೇ ಜಾಗತಿಕ ಐಟಿ ದೈತ್ಯ ಮೈಕ್ರೋಸಾಫ್ಟ್ (Microsoft Layoffs) ಕೂಡ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದೆ. ಹೀಗೆ ವಜಾಗೊಂಡ ಭಾರತದ ನೌಕರರೊಬ್ಬರು ಲಿಂಕ್ಡ್‌ಇನ್‌ನಲ್ಲಿ ಮಾಡಿರುವ ಪೋಸ್ಟ್ ವೈರಲ್ ಆಗಿದೆ.
ಮೈಕ್ರೋಸಾಫ್ಟ್ ಕಂಪನಿಯಲ್ಲಿ ಪ್ರಿನ್ಸಿಪಲ್ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಎಂಜಿನಿಯರ್ ಆಗಿದ್ದ ಪ್ರಶಾಂತ್ ಕಮಾನಿ ಅವರು ವಜಾಗೊಂಡ ಬಳಿಕ ಪೋಸ್ಟ್ ಹಾಕಿದ್ದಾರೆ. ಅವರು ಬರೆದ ಭಾವನಾತ್ಮಕ ಪತ್ರವು ವೈರಲ್ ಆಗಿದೆ. “ನಾನು ಕಾಲೇಜು ಮುಗಿಸಿ ಬರುತ್ತಲೇ ಮೈಕ್ರೋಸಾಫ್ಟ್ ಕಂಪನಿಯಲ್ಲಿ ಕೆಲಸ ಸಿಕ್ಕಿತು. ಅಲ್ಲಿಂದ ಇಲ್ಲಿಯವರೆಗೆ ನಾನು 21 ವರ್ಷ ಕೆಲಸ ಮಾಡಿದ್ದನ್ನು ನೆನಪಿಸಿಕೊಂಡರೆ ಈಗಲೂ ಮೈನವಿರೇಳುತ್ತದೆ” ಎಂದಿದ್ದಾರೆ.
“21 ವರ್ಷದಲ್ಲಿ ಮ್ಯಾನೇಜರ್ ಸೇರಿ ಹಲವು ಜವಾಬ್ದಾರಿ, ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಇಷ್ಟೂ ವರ್ಷ ಕಂಪನಿಯಲ್ಲಿ ಸಂಪಾದಿಸಿದ ಉತ್ತಮ ಸಂಬಂಧಗಳು ಎಂದಿಗೂ ಮನದಲ್ಲಿರುತ್ತವೆ. ನನ್ನ ಕುಟುಂಬವಂತೂ ತುಂಬ ಸಹಕಾರ ನೀಡಿದೆ. ನಾನು ಅವರ ಜತೆ ಹೆಚ್ಚು ಕಾಲ ಕಳೆಯದಿದ್ದರೂ, ಅವರು ನನ್ನ ಜತೆ ನಿಂತಿದ್ದಾರೆ. ಕಂಪನಿಯಲ್ಲಿ ಪಡೆದ ಪ್ರತಿಯೊಂದು ಅನುಭವವೂ ನವಿರಾಗಿದೆ. ಆದರೆ, ನಾನಿಂದು ಕಂಪನಿಯಿಂದ ವಜಾಗೊಂಡಿದ್ದೇನೆ” ಎಂಬುದಾಗಿ ಬೇಸರ ವ್ಯಕ್ತಪಡಿಸಿದ್ದಾರೆ.
“ಇಷ್ಟು ವರ್ಷ ನನಗೆ ಅವಕಾಶ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಇತ್ತೀಚೆಗೆ ಸ್ಟಜ್ (Stutz) ಎಂಬ ಡಾಕ್ಯುಮೆಂಟರಿ ನೋಡುತ್ತಿದ್ದೆ. ಅದರ ಕೆಲ ಘಟನೆಗಳು ಈಗ ನನ್ನ ಜೀವನಕ್ಕೆ ಅನ್ವಯವಾಗುತ್ತಿವೆ. ಅನಿರೀಕ್ಷಿತಗಳ ಮಧ್ಯೆಯೇ ನಿರೀಕ್ಷೆ ಇಟ್ಟುಕೊಂಡು ಮುಂದೆ ಸಾಗುತ್ತೇನೆ” ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಇದಕ್ಕೆ ಸಾವಿರಾರು ಜನ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ | Google lay off : ಗೂಗಲ್ ಮಾತೃಸಂಸ್ಥೆ ಆಲ್ಫಬೆಟ್‌ನಲ್ಲಿ 12,000 ಉದ್ಯೋಗಿಗಳ ವಜಾ