ಪಟನಾ: ಶಾಲೆಗಳಲ್ಲಿ ಶಿಕ್ಷಕರಾದವರು, ಕಾಲೇಜುಗಳಲ್ಲಿ ಉಪನ್ಯಾಸಕರಾದವರು, ವಿಶ್ವವಿದ್ಯಾಲಯಗಳಲ್ಲಿ ಪ್ರೊಫೆಸರ್ ಆದವರು ವಿದ್ಯಾರ್ಥಿಗಳಲ್ಲಿ ಸಾಮರಸ್ಯ, ಒಗ್ಗಟ್ಟು ಮೂಡಿಸಬೇಕು. ಎಲ್ಲರೂ ಸಮಾನರು, ಜಾತಿ, ಧರ್ಮದ ಭೇದ ಬಿಟ್ಟು, ಏಕತೆಯಿಂದ ಬದುಕಬೇಕು ಎಂಬ ಮನೋಭಾವ ಮಕ್ಕಳು, ಯುವಕರಲ್ಲಿ ಬರುವಂತೆ ಮಾಡಬೇಕು. ಆದರೆ, ಬಿಹಾರದಲ್ಲಿರುವ (Bihar) ಜಯಪ್ರಕಾಶ್ ವಿಶ್ವವಿದ್ಯಾಲಯದಲ್ಲಿ (Jai Prakash University) ಪ್ರೊಫೆಸರ್ ಆಗಿರುವ ಖುರ್ಷಿದ್ ಆಲಂ (Khursheed Alam) ಅವರು “ಭಾರತದಲ್ಲಿರುವ ಮುಸ್ಲಿಮರಿಗೆ ಪ್ರತ್ಯೇಕ ದೇಶ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ವಿದ್ಯಾರ್ಥಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
“ಒಗ್ಗಟ್ಟಿನಿಂದ ಕೂಡಿರುವ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಜಿಂದಾಬಾದ್” ಎಂದು ಖುರ್ಷಿದ್ ಆಲಂ ಅವರು ಒಂದು ಪೋಸ್ಟ್ ಮಾಡಿದ್ದಾರೆ. ಮತ್ತೊಂದು ಪೋಸ್ಟ್ ಮಾಡಿದ ಅವರು, “ನಾನು ಎರಡೂ ದೇಶಗಳಿಗೆ (ಪಾಕಿಸ್ತಾನ ಹಾಗೂ ಬಾಂಗ್ಲಾದೇಶ) ಮನವಿ ಮಾಡುತ್ತೇನೆ. ಭಾರತದಲ್ಲಿರುವ ಮುಸ್ಲಿಮರಿಗೆ ಪ್ರತ್ಯೇಕ ದೇಶ ಬೇಕು. ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಗಡಿಯಲ್ಲಿ ಹೊಸ ದೇಶ ನಿರ್ಮಾಣವಾಗಬೇಕು” ಎಂದು ಬರೆದುಕೊಂಡಿದ್ದಾರೆ. ಖುರ್ಷಿದ್ ಆಲಂ ಅವರು ಪೋಸ್ಟ್ ಮಾಡುತ್ತಲೇ ಅವು ವೈರಲ್ ಆಗಿವೆ. ವಿದ್ಯಾರ್ಥಿಗಳು ಮಾತ್ರವಲ್ಲ ಜನರಿಂದಲೂ ಪ್ರೊಫೆಸರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
Khursheed Alam is an Assistant Professor at Jai Prakash University (JPU) in Bihar. pic.twitter.com/pML6b9CnVB
— Anshul Saxena (@AskAnshul) January 6, 2024
ಪ್ರತಿಭಟನೆ ಬಳಿಕ ರಾಜೀನಾಮೆ ನೀಡಿದ ಆಲಂ
ಪ್ರತ್ಯೇಕ ಮುಸ್ಲಿಂ ರಾಷ್ಟ್ರದ ಬೇಡಿಕೆ ಇಟ್ಟ ಪ್ರೊಫೆಸರ್ ಖುರ್ಷಿದ್ ಆಲಂ ವಿರುದ್ಧ ಜಯಪ್ರಕಾಶ್ ವಿವಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಖುರ್ಷಿದ್ ಆಲಂ ಅವರನ್ನು ವಜಾಗೊಳಿಸಬೇಕು, ಅವರ ವಿರುದ್ಧ ದೂರು ದಾಖಲಿಸಬೇಕು ಎಂಬುದಾಗಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಆಲಂ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಇದಾದ ಬಳಿಕ ಖುರ್ಷಿದ್ ಆಲಂ ಅವರು ವಿವಿ ಪ್ರೊಫೆಸರ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
“ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ವಿಷಯಗಳನ್ನು ಪೋಸ್ಟ್ ಮಾಡುವುದು ಸರಿಯಲ್ಲ. ಖುರ್ಷಿದ್ ಆಲಂ ಅವರ ಮನಸ್ಥಿತಿ ಸರಿಯಿಲ್ಲ ಎಂದು ಕಾಣಿಸುತ್ತಿದೆ. ಖುರ್ಷಿದ್ ಆಲಂ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿ ಹಾಗೂ ರಾಜಭವನಕ್ಕೆ ದೂರು ನೀಡಿದ್ದೇವೆ” ಎಂದು ವಿವಿ ರಿಜಿಸ್ಟ್ರಾರ್ ರಂಜಿತ್ ಕುಮಾರ್ ಹೇಳಿದ್ದಾರೆ. ಜಯಪ್ರಕಾಶ್ ವಿವಿ ವ್ಯಾಪ್ತಿಗೆ ಬರುವ ನಾರಾಯಣ ಕಾಲೇಜಿನ ರಾಜಕೀಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಖುರ್ಷಿದ್ ಆಲಂ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ