ನವದೆಹಲಿ: ಫ್ರಾನ್ಸ್‌ನಿಂದ 26 ರಫೇಲ್ ಮರಿನ್ ಯುದ್ಧವಿಮಾನಗಳನ್ನು (Rafale M Fighters) ಖರೀದಿಸಲು ಭಾರತ ಚಿಂತನೆ ನಡೆಸಿದ್ದು, ಇದರಿಂದ ಭಾರತದ ನೌಕಾಪಡೆಗೆ ಭೀಮಬಲ ಬರಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಫ್ರಾನ್ಸ್‌ನಿಂದ 26 ರಫೇಲ್ ಮರಿನ್ ಯುದ್ಧವಿಮಾನಗಳು ಹಾಗೂ ಮೂರು ಕಾಲ್ವೆರಿ ಶ್ರೇಣಿಯ ಜಲಾಂತರ್ಗಾಮಿ ನೌಕೆಗಳನ್ನು ಖರೀದಿಸಲು ಭಾರತ ಶೀಘ್ರವೇ ಒಪ್ಪಂದ ಮಾಡಿಕೊಳ್ಳಲಿದೆ ಎಂದು ತಿಳಿದುಬಂದಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಪ್ರವಾಸ ಕೈಗೊಳ್ಳಲಿದ್ದು, ಜುಲೈ 13 ಹಾಗೂ 14ರಂದು ಪ್ಯಾರಿಸ್‌ನಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಜತೆ ಸಭೆ ನಡೆಸಲಿರುವ ಮೋದಿ ಅವರು ಇದೇ ವೇಳೆ ರಫೇಲ್ ಮರಿನ್ ಯುದ್ಧವಿಮಾನಗಳು ಹಾಗೂ ಮೂರು ಜಲಾಂತರ್ಗಾಮಿ ನೌಕೆಗಳ ಖರೀದಿಯ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನೌಕಾಪಡೆಗೆ ಭೀಮಬಲ
ಫ್ರಾನ್ಸ್‌ನಿಂದ ಭಾರತವು ರಫೇಲ್ ಮರಿನ್ ಯುದ್ಧವಿಮಾನಗಳನ್ನು ಖರೀದಿಸಿದರೆ ನೌಕಾಪಡೆಗೆ ಭೀಮಬಲ ಬರಲಿದೆ. ಸಾಗರ ಪ್ರದೇಶದಲ್ಲಿ ಚೀನಾ ಈಗಾಗಲೇ ಉಪಟಳ ಆರಂಭಿಸಿದ್ದು, ಅತಿಕ್ರಮಣ, ಆಕ್ರಮಣಕಾರಿ ಚಟುವಟಿಕೆ ಕೈಗೊಳ್ಳುತ್ತಿರುತ್ತದೆ. ಹಾಗಾಗಿ, ಸಾಗರ ಪ್ರದೇಶದಲ್ಲಿ ಭಾರತದ ಬಲ ಹೆಚ್ಚಾಗಲು, ವೈರಿ ರಾಷ್ಟ್ರಗಳ ಮೇಲೆ ನಿಗಾ ಇಡಲು, ಯಾವುದೇ ಕ್ಷಿಪ್ರ ಕಾರ್ಯಾಚರಣೆ ಕೈಗೊಳ್ಳಲು ರಫೇಲ್ ಮರಿನ್ ಯುದ್ಧವಿಮಾನಗಳು ಮಹತ್ವದ ಪಾತ್ರ ನಿರ್ವಹಿಸಲಿವೆ.
ಇದನ್ನೂ ಓದಿ: US Chemical Weapons: ಎಲ್ಲ ರಾಸಾಯನಿಕ ಶಸ್ತ್ರಾಸ್ತ್ರ ನಾಶಪಡಿಸಿದ ಅಮೆರಿಕ; ಮೊದಲ ಮಹಾಯುದ್ಧದ ದುಃಸ್ವಪ್ನ ಅಂತ್ಯ
ನರೇಂದ್ರ ಮೋದಿ ಅವರು ಫ್ರಾನ್ಸ್ ಭೇಟಿ ವೇಳೆ ದ್ವಿಪಕ್ಷೀಯ ಮಾತುಕತೆ ಜತೆಗೆ ಭಾರತ ಹಾಗೂ ಫ್ರಾನ್ಸ್ ಸಂಬಂಧ ವೃದ್ಧಿ, ವ್ಯಾಪಾರ, ರಕ್ಷಣೆ ಸೇರಿ ಹಲವು ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ, ಒಪ್ಪಂದ, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸ್ಥಿರತೆ ಕಾಪಾಡುವುದು, ಸಮುದ್ರ ಮಾರ್ಗದ ನೇವಿಗೇಷನ್ ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಮೋದಿ ಅವರನ್ನು ಸ್ವಾಗತಿಸಲು ಫ್ರಾನ್ಸ್‌ನಲ್ಲಿರುವ ಭಾರತೀಯರು ಸಜ್ಜಾಗಿದ್ದಾರೆ ಎಂದು ಕೂಡ ಮೂಲಗಳು ತಿಳಿಸಿವೆ.