Site icon Vistara News

ಅಮೆರಿಕದಲ್ಲಿ ಅಪಘಾತ; ಜನ್ಮದಿನದಂದೇ ಆಂಧ್ರ ಮೂಲದ ತಾಯಿ, 4 ವರ್ಷದ ಮಗಳು ಸಾವು

US Accident

Indian-origin girl, mother killed in US road accident

ವಾಷಿಂಗ್ಟನ್‌: ಅಮೆರಿಕದ ಪೋರ್ಟ್‌ಲ್ಯಾಂಡ್‌ನಲ್ಲಿ (Portland) ಸಂಭವಿಸಿದ ಭೀಕರ ಅಪಘಾತದಲ್ಲಿ (Road Accident) ಆಂಧ್ರಪ್ರದೇಶ (Andhra Pradesh) ಮೂಲದ 32 ವರ್ಷದ ಮಹಿಳೆ ಹಾಗೂ ಅವರ 4 ನಾಲ್ಕು ವರ್ಷದ ಪುತ್ರಿ ಮೃತಪಟ್ಟಿದ್ದಾರೆ. ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಕಾಮಥಾಮ್‌ ಗೀತಾಂಜಲಿ ಹಾಗೂ ಅವರ ಪುತ್ರಿ ಮೃತಪಟ್ಟಿದ್ದಾರೆ. ಗೀತಾಂಜಲಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಗೀತಾಂಜಲಿ, ಪುತ್ರಿ, ಪುತ್ರ ಹಾಗೂ ಅವರ ಪತಿ ನರೇಶ್‌ಬಾಬು ಕಾಮಥಾಮ್‌ ಅವರು ದೇವಸ್ಥಾನಕ್ಕೆ ತೆರಳುತ್ತಿದ್ದರು. ಇದೇ ವೇಳೆ ಭೀಕರ ಅಪಘಾತ ಸಂಭವಿಸಿ ತಾಯಿ-ಮಗಳು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಅಮೆರಿಕದ ಪೋರ್ಟ್‌ಲ್ಯಾಂಡ್‌ನಲ್ಲಿ ಮಾರ್ಚ್‌ 30ರಂದು ದುರಂತ ಸಂಭವಿಸಿದೆ. ಗೀತಾಂಜಲಿ ಅವರು ಕಾರು ಚಲಾಯಿಸುತ್ತಿದ್ದರು. ಅವರ ಜನ್ಮದಿನದ ಹಿನ್ನೆಲೆಯಲ್ಲಿ ಎಲ್ಲರೂ ಫೋರ್ಡ್‌ ಕಾರಿನಲ್ಲಿ ದೇವಸ್ಥಾನಕ್ಕೆ ಹೊರಟಿದ್ದರು. ಆದರೆ, ಸೌತ್‌ ಮೆರಿಡಿಯನ್‌ ರಸ್ತೆಯಲ್ಲಿ ಕಾರು ಚಲಾಯಿಸುವಾಗ ಸ್ಟಾಪ್‌ ಸಿಗ್ನಲ್‌ ಗಮನಿಸದೆ ಗೀತಾಂಜಲಿ ಅವರು ಕಾರು ಚಲಾಯಿಸಿದ್ದಾರೆ. ಆಗ ಇನ್ನೊಂದು ಕಾರು ಇವರ ಕಾರಿಗೆ ಡಿಕ್ಕಿಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಗೀತಾಂಜಲಿ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಪಘಾತಕ್ಕೆ ಭಾರತದ ವಿದ್ಯಾರ್ಥಿನಿ ಬಲಿ

ಕೆಲ ದಿನಗಳ ಹಿಂದಷ್ಟೇ ಬ್ರಿಟನ್‌ ರಾಜಧಾನಿ ಲಂಡನ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಭಾರತದ ವಿದ್ಯಾರ್ಥಿನಿ ಮೃತಪಟ್ಟಿದ್ದರು. ಸೈಕಲ್‌ ತುಳಿಯುತ್ತ ಮನೆಗೆ ಹಿಂತಿರುಗುತ್ತಿದ್ದ ವೇಳೆ ಟ್ರಕ್‌ ಹರಿದು 33 ವರ್ಷದ ಚೆಯಿಸ್ತಾ ಕೊಚ್ಚಾರ್‌ (Cheistha Kocchar) ಮೃತಪಟ್ಟಿದ್ದರು. ಮಾರ್ಚ್‌ 19ರಂದು ಅಪಘಾತ ಸಂಭವಿಸಿತ್ತು. ಚೆಯಿಸ್ತಾ ಕೊಚ್ಚಾರ್‌ ಅವರು ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಲ್ಲಿ (London School of Economics) ಪಿಎಚ್‌.ಡಿ ಅಧ್ಯಯನ ಮಾಡುತ್ತಿದ್ದರು.

ಚೆಯಿಸ್ತಾ ಕೊಚ್ಚಾರ್‌

ಚೆಯಿಸ್ತಾ ಕೊಚ್ಚಾರ್‌ ಅವರು ನಿವೃತ್ತ ಲೆಫ್ಟಿನೆಂಟ್‌ ಜನರಲ್‌, ಸೆಲ್ಲುಲರ್‌ ಆಪರೇಟರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ (COAI) ನಿರ್ದೇಶಕ ಡಾ.ಎಸ್‌.ಪಿ. ಕೊಚ್ಚಾರ್‌ ಅವರ ಪುತ್ರಿಯಾಗಿದ್ದಾರೆ. ಚೆಯಿಸ್ತಾ ಕೊಚ್ಚಾರ್‌ ಅವರು ಲಂಡನ್‌ಗೆ ತೆರಳುವ ಮೊದಲು ನೀತಿ ಆಯೋಗದಲ್ಲೂ ಕೆಲಸ ಮಾಡಿದ್ದರು. ಇವರು ಕಳೆದ ವರ್ಷವಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು ಎಂದು ತಿಳಿದುಬಂದಿದೆ. ಅಪಘಾತದ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಯಾವುದೇ ಉಪಯೋಗವಾಗಲಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಕೆನಡಾದಲ್ಲಿ ಭಾರತ ಮೂಲದ ಗಂಡ-ಹೆಂಡತಿ, ಪುತ್ರಿ ಸಾವು; ಅಗ್ನಿ ದುರಂತವೋ? ಕೊಲೆಯೋ?

ಚೆಯಿಸ್ತಾ ಕೊಚ್ಚಾರ್‌ ನಿಧನಕ್ಕೆ ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್‌ ಕಾಂತ್‌ ಅವರೂ ಸಂತಾಪ ಸೂಚಿಸಿದ್ದರು. “ಚೆಯಿಸ್ತಾ ಕೊಚ್ಚಾರ್‌ ಅವರು ನೀತಿ ಆಯೋಗದಲ್ಲಿ ನನ್ನೊಂದಿಗೆ ಕಾರ್ಯನಿರ್ವಹಿಸಿದ್ದರು. ಅವರ ಕಾರ್ಯಶೈಲಿಯು ಅದ್ಭುತವಾಗಿತ್ತು. ಆದರೆ, ಲಂಡನ್‌ನಲ್ಲಿ ಅವರು ಅಪಘಾತದಿಂದ ಮೃತಪಟ್ಟಿದ್ದಾರೆ ಎಂಬ ಸುದ್ದಿ ತಿಳಿದು ಅತೀವ ದುಃಖವಾಯಿತು. ದೇವರು ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂಬುದಾಗಿ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರು. ಅಲ್ಲದೆ, ಅವರೊಂದಿಗೆ ಇರುವ ಫೋಟೊಗಳನ್ನು ಕೂಡ ಶೇರ್‌ ಮಾಡಿದ್ದರು

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version