ವಾಷಿಂಗ್ಟನ್: ಉನ್ನತ ಶಿಕ್ಷಣ ಪಡೆಯಬೇಕು, ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಭಾರತದ ವಿದ್ಯಾರ್ಥಿಗಳು (Indian Student) ಲಕ್ಷಾಂತರ ರೂಪಾಯಿ ವ್ಯಯಿಸಿ ಅಮೆರಿಕದಲ್ಲಿ ಅಧ್ಯಯನ ಮಾಡಲು ತೆರಳುತ್ತಾರೆ. ಆದರೆ, ಇತ್ತೀಚೆಗೆ ಅಮೆರಿಕದಲ್ಲಿ ಭಾರತದ ವಿದ್ಯಾರ್ಥಿಗಳು ಸಾಲು ಸಾಲಾಗಿ ಹತ್ಯೆಗೀಡಾಗುತ್ತಿದ್ದು, ಲಕ್ಷಾಂತರ ವಿದ್ಯಾರ್ಥಿಗಳು, ಪೋಷಕರು ಇದರಿಂದ ಆತಂಕಕ್ಕೀಡಾಗಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಅಮೆರಿಕದ ಇಂಡಿಯಾನದಲ್ಲಿ (Indiana) ಭಾರತ ಮೂಲದ ಮತ್ತೊಬ್ಬ ವಿದ್ಯಾರ್ಥಿ ಹತ್ಯೆಗೀಡಾಗಿದ್ದಾನೆ. ಪಾರ್ಕ್‌ನಲ್ಲಿ ವಿದ್ಯಾರ್ಥಿಯ ಶವ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಇಂಡಿಯಾನದ ಪರ್‌ಡ್ಯೂ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಅಧ್ಯಯನ ಮಾಡುತ್ತಿದ್ದ ಸಮೀರ್ ಕಾಮತ್ (23) ಅವರ ಶವವು ಸೋಮವಾರ (ಫೆಬ್ರವರಿ 5) ಸಂಜೆ ಪಾರ್ಕ್‌ನಲ್ಲಿ ಪತ್ತೆಯಾಗಿದೆ. ಸಮೀರ್ ಕಾಮತ್ ಅವರು ಕಳೆದ ವರ್ಷ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಅಮೆರಿಕ ಪೌರತ್ವ ಪಡೆದು ಪಿಎಚ್.ಡಿ ಅಧ್ಯಯನ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. 2025ರಲ್ಲಿ ಇವರು ಡಾಕ್ಟರೇಟ್ ಪದವಿ ಪಡೆಯುತ್ತಿದ್ದರು. ಆದರೆ, ಇವರ ಶವವು ಪಾರ್ಕ್‌ನಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನ ಹುಟ್ಟಿಸಿವೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಳಿಕ ಸಾವಿನ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Mechanical engineering doctoral student Sameer Kamath, 23, was reportedly found dead in the woods on a nature preserve in Warren County.https://t.co/71NB0O8xN0
— Purdue Exponent (@purdueexponent) February 6, 2024
ಕೆಲ ದಿನಗಳ ಹಿಂದಷ್ಟೇ ಅಮೆರಿಕದ ಓಹಿಯೋ ರಾಜ್ಯದಲ್ಲಿ ನೀಲ್ ಆಚಾರ್ಯ, ಜಾರ್ಜಿಯಾದಲ್ಲಿ ಎಂಬಿಎ ಓದುತ್ತಿದ್ದ ವಿವೇಕ್ ಸೈನಿ, 19 ವರ್ಷದ ಶ್ರೇಯಸ್ ರೆಡ್ಡಿ ಎಂಬುವರು ಸೇರಿ ಕಳೆದ ಮೂರು ವಾರಗಳಲ್ಲಿ ಐವರು ವಿದ್ಯಾರ್ಥಿಗಳು ಹತ್ಯೆಗೀಡಾಗಿದ್ದಾರೆ. ಇದು ಪೋಷಕರಲ್ಲಿ ಆತಂಕ ಮೂಡಿಸಿದ್ದು, ಅಮೆರಿಕಕ್ಕೆ ವ್ಯಾಸಂಗ ಮಾಡಲು ಮಕ್ಕಳನ್ನು ಕಳುಹಿಸಲು ಕೂಡ ಹೆದರುವಂತಾಗಿದೆ. ಭಾರತ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ. ಅಮೆರಿಕದಲ್ಲಿ ಭಾರತ ಮೂಲದ 3 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಇದನ್ನೂ ಓದಿ: Indian Student: ಅಮೆರಿಕದಲ್ಲಿ ಭಾರತದ ವಿದ್ಯಾರ್ಥಿಯ ಹತ್ಯೆ; ಭಿಕಾರಿಗೆ ಅನ್ನ ಹಾಕಿದ್ದೇ ತಪ್ಪಾಯ್ತು!
ಅಷ್ಟೇ ಅಲ್ಲ, ಇತ್ತೀಚೆಗೆ ಭಾರತದ ಸೈಯದ್ ಮಜಹಿರ್ ಅಲಿ ಎಂಬ ವಿದ್ಯಾರ್ಥಿ ಮೇಲೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಸೈಯದ್ ಮಜಹಿರ್ ಅಲಿ ಅವರು ಇಂಡಿಯಾನ ವೆಸ್ಲೆಯನ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದು, ಕ್ಯಾಂಪ್‌ಬೆಲ್ ಅವೆನ್ಯೂನಲ್ಲಿರುವ ಅವರ ಮನೆಯ ಪಕ್ಕದಲ್ಲಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಸೈಯದ್ ಮಜಹಿರ್ ಅಲಿ ಅವರು ಸಹಾಯಕ್ಕಾಗಿ ಅಂಗಲಾಚುತ್ತ ಓಡಿದ ದೃಶ್ಯವು ಸೆರೆಯಾಗಿದೆ. ಇದಾದ ಬಳಿಕ ಅವರು ವಿಡಿಯೊ ಮೂಲಕ ತಮ್ಮ ಮೇಲೆ ನಡೆದ ಅನ್ಯಾಯದ ಕುರಿತು ಮಾಹಿತಿ ನೀಡಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ