Site icon Vistara News

G20 Summit | ಜಿ20 ಶೃಂಗದಲ್ಲಿ ಇಂಡಿಯನ್ ಪಿಎಂ ಮೋದಿ- ಬ್ರಿಟನ್ ಪಿಎಂ ರಿಷಿ ಪರಸ್ಪರ ಭೇಟಿ, ಔಪಚಾರಿಕ ಮಾತುಕತೆ

PM

ಬಾಲಿ: ಇಂಡೋನೇಷ್ಯಾದ ಬಾಲಿಯಲ್ಲಿ ಜಿ20 ಶೃಂಗ (G20 Summit) ಸಭೆ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ಭಾರತೀಯ ಮೂಲದ, ಬ್ರಿಟನ್‌ನ ನೂತನ ಪ್ರಧಾನಿ ರಿಷಿ ಸುನಕ್(Rishi Sunak) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಇಬ್ಬರು ನಾಯಕರು ಉಭಯ ಕುಶಲೋಪರಿಯಲ್ಲಿ ತೊಡಗಿರುವ ಫೋಟೋವನ್ನು ಪ್ರಧಾನಿ ಕಾರ್ಯಾಲಯವು ಬಿಡುಗಡೆ ಮಾಡಿದೆ.

ಟ್ವಿಟರ್ ಖಾತೆಯಲ್ಲಿ ಫೋಟೋ ಹಂಚಿಕೊಂಡಿರುವ ಪ್ರಧಾನಿ ಕಾರ್ಯಾಲಯವು, ಬಾಲಿಯಲ್ಲಿ ಜಿ20 ಶೃಂಗದ ಮೊದಲನೇ ದಿನ ಪ್ರಧಾನಿಗಳು(ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್ ಪ್ರಧಾನಿ ರಿಷಿ ಸುನಕ್) ಮಾತುಕತೆಯಲ್ಲಿ ತೊಡಗಿರುವುದು ಎಂದು ಬರೆದುಕೊಂಡಿದೆ. ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ.

ಉಕ್ರೇನ್ ಕದನ ವಿರಾಮಕ್ಕೆ ಮೋದಿ ಕರೆ
ಇದೇ ವೇಳೆ, ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮೊಟ್ಟಮೊದಲು ರಷ್ಯಾ-ಉಕ್ರೇನ್​ ಯುದ್ಧದ ಬಗ್ಗೆ ಮಾತನಾಡಿದರು. ‘ಉಕ್ರೇನ್​​ನಲ್ಲಿ ಕದನ ವಿರಾಮ ಸೃಷ್ಟಿಸಿ, ರಾಜತಾಂತ್ರಿಕತೆ ಮರುಸ್ಥಾಪಿಸಲು ನಾವೆಲ್ಲ ಸೇರಿ ಹಾದಿ ಕಂಡುಕೊಳ್ಳಬೇಕು. ಈ ಹಿಂದೆ ವಿಶ್ವಯುದ್ಧಗಳು ಜಗತ್ತನ್ನು ಅಲ್ಲೋಲಕಲ್ಲೋಲ ಮಾಡಿದವು. ವಿನಾಶ ಉಂಟು ಮಾಡಿದವು. ಅದಾದ ಮೇಲೆ ಅಂದಿನ ವಿಶ್ವ ನಾಯಕರು ಶಾಂತಿಪಥದಲ್ಲಿ ಸಾಗಲು ಗಂಭೀರವಾಗಿ ಚಿಂತನೆ ನಡೆಸಿ, ಅದೇ ಮಾರ್ಗದಲ್ಲಿ ನಡೆದರು. ಈಗ ನಮ್ಮ ಸರದಿ’ ಎಂದು ಪ್ರಧಾನಿ ಮೋದಿ ಹೇಳಿದರು.

ಕೊವಿಡ್​ 19ನಿಂದ ಅನೇಕ ಸಮಸ್ಯೆಗಳು ಆಗಿವೆ. ಈಗ ಕೊವಿಡ್​ 19 ಸಾಂಕ್ರಾಮಿಕದ ನಂತರ ಹೊಸ ಜಗತ್ತನ್ನು ಕಟ್ಟುವ ಹೊಣೆಗಾರಿಕೆ ನಮ್ಮೆಲ್ಲರ ಹೆಗಲ ಮೇಲಿದೆ. ಶಾಂತಿ, ಸಾಮರಸ್ಯ, ಭದ್ರತೆಯ ಸಂಕಲ್ಪ ತೊಡುವುದು ನಮ್ಮ ಆದ್ಯತೆಯಾಗಬೇಕು. ಈಗ ಬುದ್ಧನ ನಾಡಿನಲ್ಲಿ ಜಿ20 ಶೃಂಗಸಭೆ ನಡೆಯುತ್ತಿದೆ, ಮುಂದೆ ಮಹಾತ್ಮ ಗಾಂಧಿಯ ನೆಲದಲ್ಲಿ ಆಯೋಜನೆಗೊಳ್ಳಲಿದೆ. ಹೀಗಿರುವಾಗ ನಾವೆಲ್ಲ ಸೇರಿ ಶಾಂತಿಯ ಸಂದೇಶವನ್ನು ಜಗತ್ತಿಗೆ ಸಾರುತ್ತೇವೆ ಎಂಬ ನಂಬಿಕೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇದನ್ನೂ ಓದಿ | G20 Summit | ಜಿ20 ಸಭೆ ಹಿನ್ನೆಲೆ ಇಂಡೋನೇಷ್ಯಾ ತಲುಪಿದ ಮೋದಿ, ಅದ್ಧೂರಿ ಸ್ವಾಗತ ಹೇಗಿತ್ತು ನೋಡಿ

Exit mobile version