ಇಂದೋರ್, ಮಧ್ಯಪ್ರದೇಶ: ವಿಚಿತ್ರ ಬೆಳವಣಿಗೆಯಲ್ಲಿ ರೈಲ್ವೆ ಇಲಾಖೆಯು (Indian Railway) ದೇವರಾದ ಬಜರಂಗ ಬಲಿಗೇ(ಆಂಜನೇಯ ಸ್ವಾಮಿ) ಅತಿಕ್ರಮಣ ತೆರವು ನೋಟಿಸ್ ಜಾರಿ ಮಾಡಿದ ಘಟನೆ ಮಧ್ಯಪ್ರದೇಶದ ಮೋರೆನಾ ಜಿಲ್ಲೆಯ ಸಬಲಗಢ್ ಎಂಬಲ್ಲಿ ನಡೆದಿದೆ. ರೈಲ್ವೆಗೆ ಸಂಬಂಧಿಸಿದ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿದ್ದು, ಕೂಡಲೇ ಅಲ್ಲಿಂದ ತೆರವು ಮಾಡುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ(Viral News).
ದೇವರಿಗೇ ನೋಟಿಸ್ ನೀಡಿದ ತಪ್ಪು ಗೊತ್ತಾಗುತ್ತಿದ್ದಂತೆ ರೈಲ್ವೆ ಇಲಾಖೆ ಬಳಿಕ ತನ್ನ ನೋಟಸ್ ವಾಪಸ್ ಪಡೆದುಕೊಂಡಿದೆ ಎಂದು ಅಧಿಕಾರಿಗಳು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಲಾರ್ಡ್ ಬಜರಂಗ ಬಲಿ ಎಂಬ ವಿಳಾಸಕ್ಕೆ ರೈಲ್ವೆ ಇಲಾಖೆ ಫೆಬ್ರವರಿ 8ರಂದು ನೋಟಿಸ್ ನೀಡಿತ್ತು. ನೋಟಿಸ್ ತಲುಪಿದ ಮುಂದಿನ ಏಳು ದಿನಗಳ ಒಳಗೆ ಅತಿಕ್ರಮಣ ತೆರವುಗೊಳಿಸಬೇಕು. ಇಲ್ಲದಿದ್ದರೆ ಕಾನೂನು ರೀತ್ಯ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿತ್ತು. ಒಂದು ವೇಳೆ, ರೈಲ್ವೆ ಇಲಾಖೆಯ ಅತಿಕ್ರಮಣವನ್ನು ತೆರವು ಮಾಡಿದರೆ, ಅದಕ್ಕೆ ತಗಲುವ ವೆಚ್ಚವನ್ನು ಅತಿಕ್ರಮಣ ಮಾಡಿದವರೇ ಪಾವತಿಸಬೇಕಾಗುತ್ತದೆ ಎಂದೂ ತಿಳಿಸಲಾಗಿತ್ತು. ಈ ನೋಟಿಸ್ ಅನ್ನು ದೇವಸ್ಥಾನದಲ್ಲಿ ಅಂಟಿಸಲಾಗಿತ್ತು.
ಇದನ್ನೂ ಓದಿ: Haldwani Demolition ; ರೈಲ್ವೆ ಇಲಾಖೆ ಭೂಮಿ ಅತಿಕ್ರಮಣದಾರರಿಗೆ ಬಿಗ್ ರಿಲೀಫ್ ಕೊಟ್ಟ ಸುಪ್ರೀಂ ಕೋರ್ಟ್
ದೇವರಿಗೆ ನೋಟಿಸ್ ನೀಡಲಾಗಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಭಾರೀ ಗದ್ದಲ್ಲಕ್ಕೆ ಕಾರಣವಾಯಿತು. ಬಳಿಕ, ನೋಟಿಸ್ ಹಿಂಪಡೆದು, ದೇವಸ್ಥಾನದ ಪೂಜಾರಿ ಹೆಸರಿನಲ್ಲಿ ಮತ್ತೊಂದು ನೋಟಿಸ್ ರೈಲ್ವೆ ಇಲಾಖೆ ನೀಡಿದೆ ಎಂದು ತಿಳಿದು ಬಂದಿದೆ. ಶಿಯೋಪುರ್-ಗ್ವಾಲಿಯರ್ ಬ್ರಾಡ್-ಗೇಜ್ ಮಾರ್ಗದ ನಿರ್ಮಾಣಕ್ಕಾಗಿ ಅತಿಕ್ರಮಣವನ್ನು ತೆಗೆದು ಹಾಕಬೇಕಿತ್ತು. ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ನೋಟಿಸ್ ಜಾರಿ ಮಾಡಿತ್ತು.