ನವದೆಹಲಿ: ದೇಶದಲ್ಲಿ ರೈಲು ಪ್ರಯಾಣ ಸುರಕ್ಷಿತ ಮತ್ತು ಹೆಚ್ಚು ಅನುಕೂಲ ಎಂದೇ ಪರಿಗಣಿಸಲಾಗುತ್ತದೆ. ದೂರ ಸಂಚಾರ ಇರಲಿ ಸಮೀಪದ ಗಮ್ಯವೇ ಇರಲಿ ಬಹುತೇಕರ ಮೊದಲ ಆಯ್ಕೆ ರೈಲು ಪ್ರಯಾಣವೇ ಆಗಿರುತ್ತದೆ. ಅದರಲ್ಲೂ ವಯಸ್ಸಾದವರಿಗೆ, ಆರೋಗ್ಯ ಸಮಸ್ಯೆ ಇರುವವರಿಗೆ ಇದು ಇನ್ನೂ ಅನೂಕೂಲ. ಇತ್ತೀಚಿನ ದಿನಗಳಲ್ಲಿ ರೈಲು ಸೇವೆಯೂ ಸಾಕಷ್ಟು ಸುಧಾರಣೆ ಕಂಡಿದ್ದು, ಪ್ರಯಾಣಿಕರಿಗೆ ಇನ್ನಷ್ಟು ಹತ್ತಿರವಾಗಿದೆ. ಈ ಮಧ್ಯೆ ಭಾರತೀಯ ರೈಲ್ವೆ (Indian Railways) ಹಿರಿಯ ನಾಗರಿಕರಿಗೆ ಗುಡ್‌ನ್ಯೂಸ್ ನೀಡಿದೆ. ಲೋವರ್ ಬರ್ತ್ ಕಾಯ್ದಿರಿಸುವಿಕೆ (Lower Berth Reservation)ಯ ನಿಯಮದಲ್ಲಿ ಬದಲಾವಣೆ ತಂದಿದೆ.
ಸಾಮಾನ್ಯವಾಗಿ ಹಿರಿಯ ನಾಗರಿಕರು ವಿವಿಧ ಕಾರಣಗಳಿಂದ ಲೋವರ್ ಬರ್ತ್ ಹೊಂದಲು ಬಯಸುತ್ತಾರೆ. ಒಂದು ವೇಳೆ ಅಪ್ಪರ್ ಬರ್ತ್ ಲಭ್ಯವಿದ್ದರೆ ಅದನ್ನು ಲೋವರ್ ಬರ್ತ್‌ಗೆ ಬದಲಾಯಿಸುವುದು ದೊಡ್ಡ ತಲೆನೋವಿನ ಸಂಗತಿ. ಆದರೆ ಇನ್ನು ಮುಂದೆ ಹಾಗಾಗುವುದಿಲ್ಲ. ವಯಸ್ಸಾದ ಪ್ರಯಾಣಿಕರಿಗೆ ಕೆಳ ಬರ್ತ್‌ಗಳನ್ನು ಕಾಯ್ದಿರಿಸುವುದಕ್ಕೆ ಆದ್ಯತೆ ನೀಡುವ ಹೊಸ ನಿಯಮ ಜಾರಿಗೆ ತರಲಾಗಿದೆ. ರೈಲು ಪ್ರಯಾಣದ ಸಮಯದಲ್ಲಿ ಹಿರಿಯ ನಾಗರಿಕರ ನಿರ್ದಿಷ್ಟ ಅಗತ್ಯಗಳನ್ನು ಪೂರೈಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ʼʼವೃದ್ಧರಿಗೆ, ವಯಸ್ಸಾದವರಿಗೆ ಅನುಕೂಲ ಒದಗಿಸಲು, ಅತ್ಯುತ್ತಮ ಪ್ರಯಾಣದ ಅನುಭವ ನೀಡಲು ಲೋವರ್ ಬರ್ತ್‌ಗಳನ್ನು ಕಾಯ್ದಿರಿಸುವ ಆಯ್ಕೆ ಪರಿಚಯಿಸಿದ್ದೇವೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲ ವರ್ಗದ ಪ್ರಯಾಣಿಕರ ಅಗತ್ಯಗಳನ್ನು ಪೂರೈಸಲು ರೈಲ್ವೆ ಇಲಾಖೆ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆʼʼ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಭಾರತೀಯ ರೈಲ್ವೆಯ ಪ್ರಕಟಣೆ ಪ್ರಕಾರ, ಪ್ರಯಾಣಿಕರು ಲೋವರ್ ಬರ್ತ್ ಹಂಚಿಕೆಯನ್ನು ಖಚಿತಪಡಿಸಿಕೊಳ್ಳಲು ಬುಕಿಂಗ್ ಸಮಯದಲ್ಲಿ ಲೋವರ್ ಬರ್ತ್ ಮೀಸಲಾತಿಯ ಆಯ್ಕೆಯನ್ನು ಆರಿಸಿಕೊಳ್ಳಬೇಕು. ಮೊದಲು ಬಂದವರಿಗೆ ಆದ್ಯತೆ ಆಧಾರದ ಮೇಲೆ ಸೀಟುಗಳನ್ನು ಹಂಚಿಕೆ ಮಾಡಲಾಗುತ್ತದೆ. ಬೇಗ ಸೀಟು ಕಾಯ್ದಿರಿಸಿದವರಿಗೆ ಲೋವರ್ ಬರ್ತ್ ಸಿಗುತ್ತದೆ. ಲಭ್ಯತೆಯ ಆಧಾರದ ಮೇಲೆ ಸಾಮಾನ್ಯ ಕೋಟಾದಡಿ ಸೀಟುಗಳನ್ನು ಸ್ವಯಂಚಾಲಿತವಾಗಿ ನಿಗದಿಪಡಿಸಲಾಗಿದ್ದರೂ ಪ್ರಯಾಣಿಕರು ಲಭ್ಯವಿದ್ದರೆ ಲೋವರ್ ಬರ್ತ್‌ಗಾಗಿ ರೈಲು ಟಿಕೆಟ್ ಪರೀಕ್ಷಕರೊಂದಿಗೆ (TTE) ಮಾತುಕತೆ ನಡೆದಬಹುದಾಗಿದೆ.
ಇದನ್ನೂ ಓದಿ: Mantralaya Tour: ಮಂತ್ರಾಲಯಕ್ಕೆ ಒಂದೇ ದಿನದಲ್ಲಿ ಹೋಗಿ ಬರಬೇಕೆ? ಈ ರೈಲುಗಳಲ್ಲಿ ಹೊರಡಿ
ಈ ಹೊಸ ನಿಯಮದ ಅನುಷ್ಠಾನವು ಹಿರಿಯ ನಾಗರಿಕರ ಪ್ರಯಾಣದ ಅನುಭವವನ್ನು ಸುಧಾರಿಸಲಿದೆ ಎನ್ನುವ ನಿರೀಕ್ಷೆ ಇದೆ. ಆರೋಗ್ಯ ಸಮಸ್ಯೆ ಇರುವ ವೃದ್ಧ ಸಂಬಂಧಿಯೊಬ್ಬರು ಲೋವರ್ ಬರ್ತ್ ಬುಕ್ ಮಾಡಿದ್ದರೂ ಅವರಿಗೆ ಅಪ್ಪರ್ ಬರ್ತ್‌ಗಳ ಹಂಚಿಕೆ ಮಾಡಿರುವ ಬಗ್ಗೆ ವ್ಯಕ್ತಿಯೊಬ್ಬರು ಇತ್ತೀಚೆಗೆ ಸಾಮಾಜಿಕ ಜಾಲತಾಣ ಪ್ರಶ್ನಿಸಿದ್ದರು. ಇದು ವ್ಯಾಪಕ ಚರ್ಚೆಯನ್ನೇ ಹುಟ್ಟು ಹಾಕಿತ್ತು. ಹೀಗಾಗಿ ಈ ಹೊಸ ನಿಯಮ ಜಾರಿಗೆ ತರಲಾಗಿದೆ. ʼʼಭಾರತೀಯ ರೈಲ್ವೆ ತನ್ನ ಪ್ರಯಾಣಿಕರಿಗೆ ಅತ್ಯುತ್ತಮ ಸೇವೆಗಳನ್ನು ನೀಡಲು ಸದಾ ಸಿದ್ಧ. ಈ ರೀತಿಯ ಅಗತ್ಯ ಎಲ್ಲ ಕ್ರಮಗಳು ಕೈಗೊಳ್ಳಲಾಗುವುದುʼʼ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.