Site icon Vistara News

Jan Aushadhi: ಪ್ರಯಾಣಿಕರಿಗೆ ಗುಡ್‌ ನ್ಯೂಸ್; ರೈಲು ನಿಲ್ದಾಣಗಳಲ್ಲೂ ಸಿಗಲಿವೆ ಕಡಿಮೆ ಬೆಲೆಗೆ ಔಷಧ!

Jan Aushadhi

Indian Railways to set up 100 PM Janaushadhi Kendras at railway stations

ನವದೆಹಲಿ: ರೈಲುಗಳಲ್ಲಿ ಪ್ರಯಾಣ ಮಾಡುವಾಗ ಊಟ, ತಿಂಡಿ, ಪಾನೀಯಗಳ ಪೂರೈಕೆಯಾಗುತ್ತದೆ. ಆದರೆ, ತುರ್ತು ಸಂದರ್ಭಗಳಲ್ಲಿ ರೈಲು ನಿಲ್ದಾಣಗಳಲ್ಲಿ ಮೆಡಿಕಲ್‌ ಶಾಪ್‌ಗಳು ಸಿಗದೆ, ಔಷಧ ಸಿಗದೆ ರೈಲು ಪ್ರಯಾಣಿಕರು ತೊಂದರೆ ಅನುಭವಿಸುತ್ತಾರೆ. ದಿಢೀರನೆ ಜ್ವರ, ತಲೆನೋವು ಕಾಣಿಸಿಕೊಂಡರೆ ಔಷಧಗಳಿಗಾಗಿ ಪರದಾಡಬೇಕಾಗುತ್ತದೆ. ಇದನ್ನು ಮನಗಂಡಿರುವ ಕೇಂದ್ರ ಸರ್ಕಾರವು, ದೇಶಾದ್ಯಂತ ರೈಲು ನಿಲ್ದಾಣಗಳಲ್ಲಿ (Railway Stations) 100 ಜನೌಷಧಿ ಕೇಂದ್ರಗಳನ್ನು (Jan Aushadhi Kendra) ಸ್ಥಾಪಿಸಲು ತೀರ್ಮಾನಿಸಿದೆ. ಇದರಿಂದ ರೈಲ್ವೆ ಪ್ರಯಾಣಿಕರಿಗೆ ಭಾರಿ ಅನುಕೂಲವಾಗಲಿದೆ.

ಹೌದು, ರೈಲು ನಿಲ್ದಾಣಗಳನ್ನು ಮತ್ತಷ್ಟು ಪ್ರಯಾಣಿಕರ ಸ್ನೇಹಿಯಾಗಿ ರೂಪಿಸಲು ರೈಲ್ವೆ ಇಲಾಖೆಯು ಚಿಂತನೆ ನಡೆಸಿದೆ. ಅದರಲ್ಲೂ, ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ದೇಶಾದ್ಯಂತ ನಿರ್ಮಿಸಲಾಗಿದ್ದು, ಕಡಿಮೆ ಬೆಲೆಗೆ ಔಷಧಗಳನ್ನು ಮಾರಾಟ ಮಾಡಲಾಗುತ್ತಿದೆ. ರೈಲು ನಿಲ್ದಾಣಗಳಲ್ಲೂ ಜನೌಷಧಿ ಕೇಂದ್ರಗಳನ್ನು ನಿರ್ಮಿಸುವುದರಿಂದ ಪ್ರಯಾಣಿಕರಿಗೆ ಸುಲಭವಾಗಿ ರೈಲು ನಿಲ್ದಾಣಗಳಲ್ಲಿ ಔಷಧ ಸಿಗುವ ಜತೆಗೆ ಹಣವೂ ಉಳಿತಾಯವಾಗಲಿದೆ.

50 ರೈಲು ನಿಲ್ದಾಣಗಳ ನಿಗದಿ

“ಆರಂಭಿಕ ಹಂತದಲ್ಲಿ ದೇಶಾದ್ಯಂತ 100ಕ್ಕೂ ಅಧಿಕ ರೈಲು ನಿಲ್ದಾಣಗಳಲ್ಲಿ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸುವ ಗುರಿ ಹೊಂದಿರುವ ರೈಲ್ವೆ ಇಲಾಖೆಯು ಈಗಾಗಲೇ 50 ರೈಲು ನಿಲ್ದಾಣಗಳನ್ನು ಗುರುತಿಸಿದೆ. ರೈಲು ನಿಲ್ದಾಣದಲ್ಲಿ ಒಂದು ಜನೌಷಧಿ ಕೇಂದ್ರವನ್ನು ಸ್ಥಾಪಿಸಲು ಸುಮಾರು 12.53 ಲಕ್ಷ ರೂ. ಬೇಕಾಗುತ್ತದೆ. ಇನ್ನೂ 61 ರೈಲು ನಿಲ್ದಾಣಗಳನ್ನು ನಿಗದಿಪಡಿಸಬೇಕಿದೆ. ಮೊದಲು ರೈಲು ನಿಲ್ದಾಣಗಳನ್ನು ಗುರುತಿಸಿ, ಬಳಿಕ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸುವವರಿಗೆ ಪರವಾನಗಿ ನೀಡಲಾಗುತ್ತದೆ” ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

“ರೈಲು ನಿಲ್ದಾಣಗಳಲ್ಲಿ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸುವುದರಿಂದ ಲಕ್ಷಾಂತರ ಪ್ರಯಾಣಿಕರಿಗೆ ಹಾಗೂ ರೈಲು ನಿಲ್ದಾಣಕ್ಕೆ ಭೇಟಿ ನೀಡುವವರಿಗೆ ಕಡಿಮೆ ಬೆಲೆಗೆ ಔಷಧಗಳು ಸಿಗುತ್ತವೆ. ಹಾಗೆಯೇ, ಜನರಿಗೆ ಗುಣಮಟ್ಟದ ಔಷಧಗಳು ದೊರೆಯುವ ಜತೆಗೆ ಉದ್ಯೋಗ ಸೃಷ್ಟಿಯಾಗುತ್ತದೆ. ಉದ್ಯಮಿಗಳು ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ” ಎಂದು ಅಧಿಕಾರಿಯು ತಿಳಿಸಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ದೇಶದಲ್ಲಿ 10 ಸಾವಿರಕ್ಕೂ ಅಧಿಕ ಜನೌಷಧಿ ಕೇಂದ್ರಗಳಿದ್ದು, ಸಾವಿರಾರು ಔಷಧಿಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ: Gratuity: ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್;‌ ಗ್ರಾಚ್ಯುಟಿ, ಶಿಕ್ಷಣ ಭತ್ಯೆ ಶೀಘ್ರವೇ 25% ಹೆಚ್ಚಳ!

Exit mobile version