ನವ ದೆಹಲಿ: 2024ಕ್ಕೂ ಮೊದಲೇ ಭಾರತದ ರಸ್ತೆಗಳು ಅಮೆರಿಕಕ್ಕೆ ಸಮಾನವೆನಿಸಲಿವೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಮಧ್ಯಪ್ರದೇಶದ ಕಳಪೆ ರಸ್ತೆ ಕಾಮಗಾರಿಯೊಂದಕ್ಕೆ ಕ್ಷಮೆ ಯಾಚಿಸಿದ್ದಾರೆ.
ಕಳೆದ 8 ವರ್ಷಗಳಲ್ಲಿ ನಡೆದಿರುವ ರಸ್ತೆ ನಿರ್ಮಾಣ ಕಾರ್ಯ ಹಿಂದಿನ 65 ವರ್ಷಗಳಲ್ಲೂ ಆಗಿರಲಿಲ್ಲ. ಇಂದು ಭಾರತದ ರಸ್ತೆ ನಿರ್ಮಾಣ ಕಾರ್ಯವು ಅಮೆರಿಕವನ್ನೂ ಹೋಲುತ್ತದೆ. 2024ರೊಳಗೆ ಅಮೆರಿಕದ ರಸ್ತೆಗಳನ್ನು ನಮ್ಮ ರಸ್ತೆಗಳು ಸರಿಗಟ್ಟಲಿವೆ ಎಂದು ಗಡ್ಕರಿ ಟ್ವೀಟ್ ಮಾಡಿದ್ದಾರೆ.
ಸುಸಜ್ಜಿತ ರಸ್ತೆ ವ್ಯವಸ್ಥೆಯು ಉದ್ಯೋಗ ಹಾಗೂ ಸಂಪತ್ತನ್ನು ವರ್ಧಿಸುತ್ತದೆ. ಇಂದು ನಾವು ದಿನಕ್ಕೆ 40 ಕಿ.ಮೀ.ನಷ್ಟು ರಸ್ತೆಗಳನ್ನು ಕಟ್ಟುತ್ತಿದ್ದೇವೆ. ನಮ್ಮ ಗುರಿ ದಿನಕ್ಕೆ 60 ಕಿಲೋಮೀಟರ್ ರಸ್ತೆಯನ್ನು ಸೃಷ್ಟಿಸುವುದು ಎಂದವರು ಹೇಳಿದ್ದಾರೆ.
ಇದನ್ನೂ ಓದಿ | New expressway | ಬೆಂಗಳೂರಿನಿಂದ ಮುಂಬಯಿಗೆ 5 ಗಂಟೆಯಲ್ಲಿ ಪ್ರಯಾಣ? ನಿತಿನ್ ಗಡ್ಕರಿ ಭರವಸೆ
ಕೆಟ್ಟ ರಸ್ತೆಗಾಗಿ ಕ್ಷಮೆ ಯಾಚನೆ
ಇದೇ ವೇಳೆಗೆ ಅವರು, ಮಧ್ಯಪ್ರದೇಶದಲ್ಲಿ ರಚನೆಯಾಗಿರುವ ಹೆದ್ದಾರಿಯ ಕಳಪೆ ಕಾಮಗಾರಿಗಾಗಿ ಕ್ಷಮೆ ಯಾಚಿಸಿದ್ದಾರೆ. ʼʼಜಬಲ್ಪುರ ಹಾಗೂ ಮಾಂಡ್ಲಾ ನಡುವೆ ರಚನೆಯಾಗಿರುವ 400 ಕೋಟಿ ರೂ. ವೆಚ್ಚದ 63 ಕಿಲೋಮೀಟರ್ ದೂರದ ಹೆದ್ದಾರಿಯಲ್ಲಿ ಕಳಪೆ ಕಾಮಗಾರಿ ನಡೆದಿದ್ದು ಇದಕ್ಕಾಗಿ ನಾನು ಕ್ಷಮೆ ಯಾಚಿಸುತ್ತೇನೆ. ಈ ಕಾಮಗಾರಿಯ ಗುಣಮಟ್ಟದ ಬಗೆಗೆ ನನಗೆ ಸಮಾಧಾನವಿಲ್ಲ. ಕೆಲಸವನ್ನು ಕೂಡಲೇ ನಿಲ್ಲಿಸಿ, ಒಪ್ಪಂದವನ್ನು ರದ್ದುಪಡಿಸಿ, ಹೊಸ ಟೆಂಡರ್ ಕರೆದು ಅತ್ಯುತ್ತಮ ರೀತಿಯಲ್ಲಿ ರಸ್ತೆಯನ್ನು ನಿರ್ಮಿಸುವಂತೆ ನಾವು ಅಧಿಕಾರಿಗಳಿಗೆ ಸೂಚಿಸಿದ್ದೇನೆʼʼ ಎಂದು ಅವರು ಹೇಳಿದ್ದಾರೆ. ಮಾಂಡ್ಲಾದಲ್ಲಿ ನಡೆದ ವಿವಿಧ ರಸ್ತೆ ಕಾಮಗಾರಿಗಳಿಗೆ ಅಡಿಗಲ್ಲು ಹಾಕುವ ಕಾರ್ಯಕ್ರಮದಲ್ಲಿ ಅವರಿದನ್ನು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಇಲ್ಲಿ ಹತ್ತು ಹಲವಾರು ಹೊಸ ಯೋಜನೆಗಳನ್ನೂ ಘೋಷಿಸಿದ್ದಾರೆ.
2013ರಲ್ಲಿ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳ ಕಳಪೆ ಗುಣಮಟ್ಟದಿಂದಾಗಿಯೇ ರೊಚ್ಚಿಗೆದ್ದ ಜನತೆ 10 ವರ್ಷಗಳ ದಿಗ್ವಿಜಯ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಕಿತ್ತೆಸೆದಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಇದನ್ನೂ ಓದಿ | Anil Firojiya | ಸಚಿವ ನಿತಿನ್ ಗಡ್ಕರಿ ಸವಾಲು ಸ್ವೀಕರಿಸಿ, 32 ಕೆಜಿ ತೂಕ ಕಳೆದುಕೊಂಡ ಬಿಜೆಪಿ ಸಂಸದ