Site icon Vistara News

Indian Student: ಅಮೆರಿಕದಲ್ಲಿ ಭಾರತದ ಮತ್ತೊಬ್ಬ ವಿದ್ಯಾರ್ಥಿ ಮೇಲೆ ಹಲ್ಲೆ; ನೆರವು ಕೋರಿದ ಪತ್ನಿ

Indian Student Attacked In US

Indian student from Hyderabad brutally attacked by four robbers in Chicago

ವಾಷಿಂಗ್ಟನ್‌: ಅಮೆರಿಕದಲ್ಲಿ ಭಾರತದ ವಿದ್ಯಾರ್ಥಿಗಳಿಗೆ ಸುರಕ್ಷತೆಯೇ ಇಲ್ಲದಂತಾಗಿದೆ. ಕಳೆದ ಮೂರು ವಾರಗಳಲ್ಲಿ ನಾಲ್ವರು ವಿದ್ಯಾರ್ಥಿಗಳು ಹತ್ಯೆಗೀಡಾದ ಬೆನ್ನಲ್ಲೇ ಚಿಕಾಗೋದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಮೇಲೆ ಮಾರಣಾಂತಿಕವಾಗಿ ಹಲ್ಲೆ (Indian Student) ನಡೆಸಲಾಗಿದೆ. ನಾಲ್ವರು ದರೋಡೆಕೋರರು ಭಾರತದ ಸೈಯದ್‌ ಮಜಹಿರ್‌ ಅಲಿ (Syed Mazahir Ali) ಎಂಬ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿ, ಆತನಿಂದ ಮೊಬೈಲ್‌ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಭಾರತದ ವಿದ್ಯಾರ್ಥಿ ಸಹಾಯಕ್ಕಾಗಿ ಅಂಗಲಾಚಿದ್ದು, ಹಲ್ಲೆ ನಡೆಸಿದ ವಿಡಿಯೊ ಈಗ ವೈರಲ್‌ ಆಗಿದೆ.

ಸೈಯದ್‌ ಮಜಹಿರ್‌ ಅಲಿ ಅವರು ಇಂಡಿಯಾನ ವೆಸ್ಲೆಯನ್‌ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದು, ಕ್ಯಾಂಪ್‌ಬೆಲ್‌ ಅವೆನ್ಯೂನಲ್ಲಿರುವ ಅವರ ಮನೆಯ ಪಕ್ಕದಲ್ಲಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಸೈಯದ್‌ ಮಜಹಿರ್‌ ಅಲಿ ಅವರು ಸಹಾಯಕ್ಕಾಗಿ ಅಂಗಲಾಚುತ್ತ ಓಡಿದ ದೃಶ್ಯವು ಸೆರೆಯಾಗಿದೆ. ಇದಾದ ಬಳಿಕ ಅವರು ವಿಡಿಯೊ ಮೂಲಕ ತಮ್ಮ ಮೇಲೆ ನಡೆದ ಅನ್ಯಾಯದ ಕುರಿತು ಮಾಹಿತಿ ನೀಡಿದ್ದಾರೆ. “ನಾನು ಮನೆಗೆ ವಾಪಸಾಗುವಾಗ ನಾಲ್ವರು ದಾಳಿ ನಡೆಸಿದರು. ನನಗೆ ಅವರು ಒದ್ದು, ಹೊಡೆದು ಹಲ್ಲೆ ನಡೆಸಿದರು. ದಯಮಾಡಿ ಸಹಾಯ ಮಾಡಿ” ಎಂದು ದಯನೀಯವಾಗಿ ಮನವಿ ಮಾಡಿದ್ದಾರೆ.

ನೆರವು ಕೋರಿದ ಪತ್ನಿ

ಪತಿಯ ಮೇಲೆ ದಾಳಿ ನಡೆದ ಹಿನ್ನೆಲೆಯಲ್ಲಿ ಅವರ ಪತ್ನಿ ಸೈಯದಾ ರುಕುಲಿಯಾ ಫಾತಿಮಾ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್‌ ಅವರಿಗೆ ಪತ್ರ ಬರೆದಿದ್ದು, ಪತಿಗೆ ನೆರವು ನೀಡಬೇಕು ಎಂದು ಕೋರಿದ್ದಾರೆ. “ಅಮೆರಿಕದ ಚಿಕಾಗೋದಲ್ಲಿರುವ ನನ್ನ ಪತಿಯ ಸುರಕ್ಷತೆ ಬಗ್ಗೆ ನನಗೆ ಆತಂಕ ಉಂಟಾಗಿದೆ. ದಯಮಾಡಿ ನನ್ನ ಪತಿ ಚಿಕಿತ್ಸೆ ಪಡೆಯಲು ವ್ಯವಸ್ಥೆ ಮಾಡಿಕೊಡಿ. ಹಾಗೆಯೇ, ನನ್ನ ಮೂವರು ಮಕ್ಕಳೊಂದಿಗೆ ಅಮೆರಿಕಕ್ಕೆ ಹೋಗಲು ನೆರವು ನೀಡಿ” ಎಂಬುದಾಗಿ ಅವರು ಮನವಿ ಮಾಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಅಮೆರಿಕದ ಓಹಿಯೋ ರಾಜ್ಯದಲ್ಲಿ ನೀಲ್‌ ಆಚಾರ್ಯ, ಜಾರ್ಜಿಯಾದಲ್ಲಿ ಎಂಬಿಎ ಓದುತ್ತಿದ್ದ ವಿವೇಕ್‌ ಸೈನಿ ಎಂಬುವರು ಸೇರಿ ಕಳೆದ ಮೂರು ವಾರಗಳಲ್ಲಿ ನಾಲ್ವರು ವಿದ್ಯಾರ್ಥಿಗಳು ಹತ್ಯೆಗೀಡಾಗಿದ್ದಾರೆ. ಇದು ಪೋಷಕರಲ್ಲಿ ಆತಂಕ ಮೂಡಿಸಿದ್ದು, ಅಮೆರಿಕಕ್ಕೆ ವ್ಯಾಸಂಗ ಮಾಡಲು ಮಕ್ಕಳನ್ನು ಕಳುಹಿಸಲು ಕೂಡ ಹೆದರುವಂತಾಗಿದೆ. ಭಾರತ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

ಇದನ್ನೂ ಓದಿ: Bhagavad Gita: ಭಗವದ್ಗೀತೆ ಮೇಲೆ ಕೈಯಿಟ್ಟು ಪ್ರಮಾಣ ವಚನ ಸ್ವೀಕರಿಸಿ ಇತಿಹಾಸ ಬರೆದ ಭಾರತೀಯ ಮೂಲದ ಆಸ್ಟ್ರೇಲಿಯನ್‌ ಸೆನೆಟರ್‌

ಕೆಲ ತಿಂಗಳ ಹಿಂದಷ್ಟೇ ಅಮೆರಿಕದಲ್ಲಿ ಭಾರತದ ವರುಣ್‌ ರಾಜ್ ಎಂಬ ವಿದ್ಯಾರ್ಥಿ ಹತ್ಯೆಗೀಡಾಗಿದ್ದ. ವಾಲ್ಪರೈಸೋ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್‌ ಸೈನ್ಸ್‌ ಓದುತ್ತಿದ್ದ ವರುಣ್‌ ರಾಜ್, ಅಕ್ಟೋಬರ್‌ 29ರಂದು ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿದ್ದ. ಇದೇ ವೇಳೆ ಜೋರ್ಡಾನ್‌ ಅಂಡ್ರಾಡೆ (24) ಎಂಬ ಯುವಕನು ಜಿಮ್‌ ಪ್ರವೇಶಿಸಿದ್ದ. ಜಿಮ್‌ ಪ್ರವೇಶಿಸಿದವನೇ ವರುಣ್‌ ರಾಜ್ ಪುಚಾನನ್ನು ಹುಡುಕಿ, ಆತನಿರುವ ಕಡೆ ತೆರಳಿ, ಆತನ ತಲೆಗೆ ಚಾಕು ಇರಿದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ವರುಣ್‌ ರಾಜ್ ಪುಚಾನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ವರುಣ್‌ ರಾಜ್ ಪುಚಾ ಮೃತಪಟ್ಟಿದ್ದ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version