ಲಂಡನ್: ಬ್ರಿಟನ್ ರಾಜಧಾನಿ ಲಂಡನ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Road Accident) ಭಾರತದ ವಿದ್ಯಾರ್ಥಿನಿ (Indian Student) ಮೃತಪಟ್ಟಿದ್ದಾರೆ. ಸೈಕಲ್ ತುಳಿಯುತ್ತ ಮನೆಗೆ ಹಿಂತಿರುಗುತ್ತಿದ್ದ ವೇಳೆ ಟ್ರಕ್ ಹರಿದು 33 ವರ್ಷದ ಚೆಯಿಸ್ತಾ ಕೊಚ್ಚಾರ್ (Cheistha Kocchar) ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮಾರ್ಚ್ 19ರಂದು ಅಪಘಾತ ಸಂಭವಿಸಿದೆ. ಚೆಯಿಸ್ತಾ ಕೊಚ್ಚಾರ್ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ (London School of Economics) ಪಿಎಚ್.ಡಿ ಅಧ್ಯಯನ ಮಾಡುತ್ತಿದ್ದರು.
ಚೆಯಿಸ್ತಾ ಕೊಚ್ಚಾರ್ ಅವರು ನಿವೃತ್ತ ಲೆಫ್ಟಿನೆಂಟ್ ಜನರಲ್, ಸೆಲ್ಲುಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (COAI) ನಿರ್ದೇಶಕ ಡಾ.ಎಸ್.ಪಿ. ಕೊಚ್ಚಾರ್ ಅವರ ಪುತ್ರಿಯಾಗಿದ್ದಾರೆ. ಚೆಯಿಸ್ತಾ ಕೊಚ್ಚಾರ್ ಅವರು ಲಂಡನ್‌ಗೆ ತೆರಳುವ ಮೊದಲು ನೀತಿ ಆಯೋಗದಲ್ಲೂ ಕೆಲಸ ಮಾಡಿದ್ದರು. ಇವರು ಕಳೆದ ವರ್ಷವಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು ಎಂದು ತಿಳಿದುಬಂದಿದೆ. ಅಪಘಾತದ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಯಾವುದೇ ಉಪಯೋಗವಾಗಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪುತ್ರಿಯ ನಿಧನದ ಹಿನ್ನೆಲೆಯಲ್ಲಿ ಡಾ.ಎಸ್.ಪಿ.ಕೊಚ್ಚಾರ್ ಅವರು ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ. “ನನ್ನ ಪುತ್ರಿಯು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಮನೆಗೆ ಹೊರಟಿದ್ದಳು. ಆಗ ಆಕೆಯ ಮೇಲೆ ಟ್ರಕ್ ಹರಿದಿದೆ. ನಮ್ಮೆಲ್ಲರನ್ನು ಚೆಯಿಸ್ತಾ ಕೊಚ್ಚಾರ್ ಅಗಲಿದ್ದಾಳೆ. ಅವಳ ನೆನಪುಗಳು ಮಾತ್ರ ನನ್ನಲ್ಲಿ ಉಳಿದಿವೆ” ಎಂದು ಭಾವುಕರಾಗಿದ್ದಾರೆ. ಮಗಳ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
Cheistha Kochar worked with me on the #LIFE programme in @NITIAayog She was in the #Nudge unit and had gone to do her Ph.D in behavioural science at #LSE
— Amitabh Kant (@amitabhk87) March 23, 2024
Passed away in a terrible traffic incident while cycling in London. She was bright, brilliant & brave and always full of… pic.twitter.com/7WyyklhsTA
ಇದನ್ನೂ ಓದಿ: Jaahnavi Kandula: ಅಮೆರಿಕದಲ್ಲಿ ಭಾರತದ ವಿದ್ಯಾರ್ಥಿನಿಗೆ ಕಾರು ಗುದ್ದಿಸಿ ನಕ್ಕ ಪೊಲೀಸ್; ಸಾವಿಗೆ ಭಾರತ ಖಂಡನೆ
ಚೆಯಿಸ್ತಾ ಕೊಚ್ಚಾರ್ ನಿಧನಕ್ಕೆ ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್ ಕಾಂತ್ ಅವರೂ ಸಂತಾಪ ಸೂಚಿಸಿದ್ದಾರೆ. “ಚೆಯಿಸ್ತಾ ಕೊಚ್ಚಾರ್ ಅವರು ನೀತಿ ಆಯೋಗದಲ್ಲಿ ನನ್ನೊಂದಿಗೆ ಕಾರ್ಯನಿರ್ವಹಿಸಿದ್ದರು. ಅವರ ಕಾರ್ಯಶೈಲಿಯು ಅದ್ಭುತವಾಗಿತ್ತು. ಆದರೆ, ಲಂಡನ್‌ನಲ್ಲಿ ಅವರು ಅಪಘಾತದಿಂದ ಮೃತಪಟ್ಟಿದ್ದಾರೆ ಎಂಬ ಸುದ್ದಿ ತಿಳಿದು ಅತೀವ ದುಃಖವಾಯಿತು. ದೇವರು ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂಬುದಾಗಿ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ಅವರೊಂದಿಗೆ ಇರುವ ಫೋಟೊಗಳನ್ನು ಕೂಡ ಶೇರ್ ಮಾಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ