ವಾಷಿಂಗ್ಟನ್: ಅಮೆರಿಕದ ಇಂಡಿಯಾನ ರಾಜ್ಯದ ಜಿಮ್ ಒಂದರಲ್ಲಿ ವರ್ಕೌಟ್ ಮಾಡುತ್ತಿದ್ದಾಗಲೇ ಚಾಕು ಇರಿತಕ್ಕೊಳಗಾಗಿದ್ದ ಭಾರತದ ವಿದ್ಯಾರ್ಥಿ (Indian Student) ಮೃತಪಟ್ಟಿದ್ದಾನೆ. “ಚಿಕಿತ್ಸೆ ಫಲಕಾರಿಯಾಗದೆ ವರುಣ್ ರಾಜ್ ಪುಚಾ (Varun Raj Pucha) (24) ಬುಧವಾರ (ನವೆಂಬರ್ 8) ಮೃತಪಟ್ಟಿದ್ದಾನೆ” ಎಂದು ವರುಣ್ ರಾಜ್ ಪುಚಾ ಓದುತ್ತಿದ್ದ ವಾಲ್ಪರೈಸೋ ವಿಶ್ವವಿದ್ಯಾಲಯವು (Valparaiso University) ಮಾಹಿತಿ ನೀಡಿದೆ.
“ವರುಣ್ ರಾಜ್ ನಮ್ಮನ್ನೆಲ್ಲ ಅಗಲಿರುವುದು ಮನಸ್ಸಿಗೆ ತುಂಬ ಘಾಸಿ ಮಾಡಿದೆ. ನಮ್ಮ ವಿಶ್ವವಿದ್ಯಾಲಯದ ಕ್ಯಾಂಪಸ್ ಕುಟುಂಬದ ಸದಸ್ಯನನ್ನು ನಾವು ಕಳೆದುಕೊಂಡಿದ್ದೇವೆ. ವರುಣ್ ಅವರ ಕುಟುಂಬಸ್ಥರಿಗೆ, ಆತ್ಮೀಯರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂಬುದಾಗಿ ಪ್ರಾರ್ಥಿಸುತ್ತೇವೆ. ವರುಣ್ ರಾಜ್ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ವಿಶ್ವವಿದ್ಯಾಲಯವು ಸಂತಾಪ ಸೂಚಿಸಿದೆ.
ಜಿಮ್‌ನಲ್ಲಿ ಏನಾಗಿತ್ತು?
ವಾಲ್ಪರೈಸೋ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದ ವರುಣ್ ರಾಜ್, ಅಕ್ಟೋಬರ್ 29ರಂದು ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ. ಇದೇ ವೇಳೆ ಜೋರ್ಡಾನ್ ಅಂಡ್ರಾಡೆ (24) ಎಂಬ ಯುವಕನು ಜಿಮ್ ಪ್ರವೇಶಿಸಿದ್ದಾನೆ. ಜಿಮ್ ಪ್ರವೇಶಿಸಿದವನೇ ವರುಣ್ ರಾಜ್ ಪುಚಾನನ್ನು ಹುಡುಕಿ, ಆತನಿರುವ ಕಡೆ ತೆರಳಿ, ಆತನ ತಲೆಗೆ ಚಾಕು ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ವರುಣ್ ರಾಜ್ ಪುಚಾನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ವರುಣ್ ರಾಜ್ ಪುಚಾ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವರುಣ್ ರಾಜ್ ಪುಚಾ
A 24 year old Indian student, Varun Pucha, was stabbed while working out in the gym in Indiana, USA.
— Journalist V (@OnTheNewsBeat) November 1, 2023
He is currently in a coma with life threatening injuries.
The attacker has been identified as Jordan Andrade and is under arrest pic.twitter.com/VXDvX1Cz2m
ಬೇರೆಯವರ ಮಾತು ಕೇಳಿ ಹಲ್ಲೆ?
ಹಾಗೆ ನೋಡಿದರೆ, ಜೋರ್ಡಾನ್ ಅಂಡ್ರಾಡೆಗೂ ವರುಣ್ ರಾಜ್‌ಗೂ ಯಾವುದೇ ಸಂಬಂಧ, ಪರಿಚಯ ಇರಲಿಲ್ಲ. ಇವರಿಬ್ಬರೂ ಒಂದು ದಿನವೂ ಪರಸ್ಪರ ಭೇಟಿಯಾದವರಲ್ಲ. ಆದರೆ, ಇತ್ತೀಚೆಗೆ ವರುಣ್ ರಾಜ್ ಪುಚಾನಿಂದ ನಿನಗೆ ಬೆದರಿಕೆ ಇದೆ ಎಂದು ಯಾರೋ ಜೋರ್ಡಾನ್ ಅಂಡ್ರಾಡೆಗೆ ತಿಳಿಸಿದ್ದರು. ಇದರಿಂದ ಕುಪಿತಗೊಂಡಿದ್ದ ಜೋರ್ಡಾನ್ ಅಂಡ್ರಾಡೆ, ಕನಿಷ್ಠಪಕ್ಷ ವರುಣ್ ರಾಜ್ ಪುಚಾ ಜತೆಗೆ ಮಾತುಕತೆಯನ್ನೂ ನಡೆಸದೆ, ತಲೆಗೆ ಬಲವಾಗಿ ಚಾಕು ಇರಿದಿದ್ದಾನೆ. ಪ್ರಕರಣಕ್ಕೆ ಸಂಬಂಧಸಿದಂತೆ ಪೊಲೀಸರು ಜೋರ್ಡಾನ್ ಅಂಡ್ರಾಡೆಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಹಮಾಸ್ ದಾಳಿ ಮಾಡಿದರೂ ಮನಮೋಹನ್ ಸಿಂಗ್‌ರಂತೆ ಇಸ್ರೇಲ್ ಸುಮ್ಮನಿರಬೇಕಿತ್ತು ಎಂದ ಅಮೆರಿಕ ಲೇಖಕ!
ಕಳೆದ ವರ್ಷವಷ್ಟೇ ಅಮೆರಿಕಕ್ಕೆ ಹೋಗಿದ್ದ
ತೆಲಂಗಾಣದ ಮೂಲದವನಾದ ವರುಣ್ ರಾಜ್ ಪುಚಾ, ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಎಸ್ ಪದವಿ ಪಡೆಯಲು 2022ರ ಆಗಸ್ಟ್‌ನಲ್ಲಿ ಅಮೆರಿಕಕ್ಕೆ ತೆರಳಿದ್ದ. ಖಮ್ಮಮ್ ನಿವಾಸಿಯಾದ ವರುಣ್ ರಾಜ್, 2024ರಲ್ಲಿ ಕೋರ್ಸ್ ಮುಗಿಸಿ ತವರು ರಾಜ್ಯಕ್ಕೆ ತೆರಳುವವನಿದ್ದ ಎಂದು ತಿಳಿದುಬಂದಿದೆ. ನಮ್ಮ ಮಗನ ಸಾವಿಗೆ ಕಾರಣನಾದವನಿಗೆ ತಕ್ಕ ಶಿಕ್ಷೆಯಾಗಬೇಕು ಹಾಗೂ ವರುಣ್ ರಾಜ್ ಪುಚಾಗೆ ನ್ಯಾಯ ಸಿಗಬೇಕು ಎಂದು ಆತನ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ