ಒಟ್ಟಾವ: ಭಾರತ ಹಾಗೂ ಕೆನಡಾ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು (India Canada Row) ಮತ್ತೊಂದು ಹಂತಕ್ಕೆ ತಲುಪುವ ಲಕ್ಷಣಗಳು ಗೋಚರಿಸಿವೆ. ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಹಿಂದೆ ಭಾರತದ ಕೈವಾಡ ಇದೆ ಎಂದು ಆರೋಪಿಸಿದ್ದ, ಬಿಕ್ಕಟ್ಟಿನ ಬಳಿಕ ಭಾರತದ ರಾಜತಾಂತ್ರಿಕ ಅಧಿಕಾರಿಗಳನ್ನು ಭಾರತಕ್ಕೆ ಕಳುಹಿಸಿದ್ದ ಕೆನಡಾ ಈಗ ಮತ್ತೊಂದು ಉಪಟಳ ಮಾಡಿದೆ. ಕೆನಡಾದಲ್ಲಿ ಅಧ್ಯಯನ ಮಾಡುತ್ತಿರುವ ಭಾರತದ ವಿದ್ಯಾರ್ಥಿಗಳಿಗೆ ಸ್ಟಡಿ ಪರ್ಮಿಟ್ (Study Permit-ವಿದ್ಯಾರ್ಥಿಗಳಿಗೆ ಕೆನಡಾದಲ್ಲಿ ವಾಸಿಸಲು ನೀಡುವ ಅನುಮತಿ) ನೀಡದಿರಲು ಕೆನಡಾ ತೀರ್ಮಾನಿಸಿದೆ.
ಕೆನಡಾ ವಲಸೆ ಖಾತೆ ಸಚಿವ ಮಾರ್ಕ್ ಮಿಲ್ಲರ್ ಅವರು ಈ ಕುರಿತು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. “ಭಾರತ ಹಾಗೂ ಕೆನಡಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾದ ಬಳಿಕ ಭಾರತದ ವಿದ್ಯಾರ್ಥಿಗಳಿಗೆ ನೀಡುವ ಸ್ಟಡಿ ಪರ್ಮಿಟ್ ಪ್ರಮಾಣವನ್ನು ಗಣನೀಯವಾಗಿ ಕುಂಠಿತಗೊಳಿಸಲಾಗಿದೆ. ರಾಜತಾಂತ್ರಿಕ ಬಿಕ್ಕಟ್ಟು ಮುಂದುವರಿದ ಕಾರಣ ಶೇ.86ರಷ್ಟು ಸ್ಟಡಿ ಪರ್ಮಿಟ್‌ಗಳಿಗೆ ಅನುಮತಿ ನೀಡಿಲ್ಲ. ಕಳೆದ ತ್ರೈಮಾಸಿಕದಲ್ಲಿ ಭಾರತದಿಂದ 1,08,940 ಅರ್ಜಿಗಳು ಬಂದಿದ್ದವು. ಇವುಗಳಲ್ಲಿ ಕೇವಲ 14,910 ವಿದ್ಯಾರ್ಥಿಗಳಿಗೆ ಸ್ಟಡಿ ಪರ್ಮಿಟ್ ನೀಡಲಾಗಿದೆ” ಎಂದು ಹೇಳಿದ್ದಾರೆ. ಇದು ಈಗ ಭಾರತದ ವಿದ್ಯಾರ್ಥಿಗಳಿಗೆ ನುಂಗಲಾರದ ತುತ್ತಾಗಿದೆ.
ಏನಿದು ಸ್ಟಡಿ ಪರ್ಮಿಟ್?
ಕೆನಡಾದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ‘ಸ್ಟುಡೆಂಟ್ ವೀಸಾ’ ನೀಡಲಾಗುತ್ತದೆ. ಆದರೆ, ಯಾವುದೇ ವಿದ್ಯಾರ್ಥಿಯು ಸ್ಟುಡೆಂಟ್ ವೀಸಾ ಹೊಂದಿದ್ದರೂ ಕೆನಡಾದಲ್ಲಿ ಉಳಿಯಲು ಗಡಿ ಅಧಿಕಾರಿಗಳು ಸ್ಟಡಿ ಪರ್ಮಿಟ್ ನೀಡುತ್ತಾರೆ. ಹಾಗೊಂದು ವೇಳೆ, ಸ್ಟುಡೆಂಟ್ ವೀಸಾ ಇದ್ದರೂ ಸ್ಟಡಿ ಪರ್ಮಿಟ್ ಸಿಗದಿದ್ದರೆ ಆ ವಿದ್ಯಾರ್ಥಿಯು ಕೆನಡಾದಲ್ಲಿ ಇದ್ದು ಅಧ್ಯಯನ ಮಾಡಲು ಆಗುವುದಿಲ್ಲ. ಈ ಸ್ಟಡಿ ಪರ್ಮಿಟ್‌ಅನ್ನು ನೀಡದಿರುವ ಅಧಿಕಾರವು ಗಡಿ ಅಧಿಕಾರಿಗಳಿಗೆ ಇದೆ.
ಇದನ್ನೂ ಓದಿ: Khalistan Terrorist: ಕೆನಡಾ ವಾಸಿ ಲಖ್ಬೀರ್ ಸಿಂಗ್ ಲಾಂಡಾ ಭಯೋತ್ಪಾದಕ: ಭಾರತ ಘೋಷಣೆ
ಜೂನ್ 18ರಂದು ನಡೆದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆನ್ಸಿಗಳ ಕೈವಾಡ ಇರುವ ಸಾಧ್ಯತೆ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಅವರು ಹೇಳಿಕೆ ನೀಡಿದ್ದರು. ಇದಾದ ಬೆನ್ನಲ್ಲೇ ಭಾರತ ಮತ್ತು ಕೆನಡಾ ಮಧ್ಯೆ ರಾಜತಾಂತ್ರಿಕ ಸಂಘರ್ಷ ಏರ್ಪಟ್ಟಿತ್ತು. ಭಾರತವು ಟ್ರೂಡೋ ಆರೋಪಕ್ಕೆ ಪ್ರತಿಕ್ರಿಯಿಸಿ, ಇದೊಂದು ಆಧಾರ ರಹಿತ ಆರೋಪ ಎಂದು ಹೇಳಿತ್ತು. ಅಲ್ಲದೇ ಉಭಯ ರಾಷ್ಟ್ರಗಳು ರಾಜತಾಂತ್ರಿಕ ಅಧಿಕಾರಿಗಳನ್ನು ವಜಾ ಮಾಡುವ ಮೂಲಕ ಸ್ಪರ್ಧೆಗೆ ಇಳಿದಿದ್ದವು. ಆದಾಗ್ಯೂ, ಭಾರತವು ಕೆನಡಾ ರಾಜತಾಂತ್ರಿಕರನ್ನು ದೇಶದಿಂದ ವಾಪಸ್ ಕಳುಹಿಸಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ