Site icon Vistara News

Donkey Flight: ಅಕ್ರಮ ವಲಸೆಗಾಗಿ ತಲಾ 1.2 ಕೋಟಿ ರೂ. ಕೊಟಿದ್ದ ಭಾರತೀಯರು; ಸ್ಫೋಟಕ ಮಾಹಿತಿ

Flight

Indians paid up to ₹1.2 crore each to fly on 'donkey flight' grounded in France: Cops

ನವದೆಹಲಿ: ಮಾನವ ಕಳ್ಳಸಾಗಣೆ ಆರೋಪದಲ್ಲಿ ಫ್ರಾನ್ಸ್‌ನಲ್ಲಿ ಭಾರತೀಯರಿದ್ದ ವಿಮಾನ (Donkey Flight) ಲ್ಯಾಂಡ್‌ ಆಗಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಭಾರತದ ನೂರಾರು ನಾಗರಿಕರು ಅಕ್ರಮವಾಗಿ ವಲಸೆ ಹೋಗಲು ಏಜೆಂಟ್‌ಗಳಿಗೆ ತಲಾ 1.2 ಕೋಟಿ ರೂಪಾಯಿ ಕೊಟ್ಟಿದ್ದರು ಎಂಬ ಸ್ಫೋಟಕ ಮಾಹಿತಿಯನ್ನು ಗುಜರಾತ್‌ ಪೊಲೀಸರು ನೀಡಿದ್ದಾರೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ. ಹಾಗಾಗಿ, ಪ್ರಕರಣವು ಮಾನವ ಕಳ್ಳ ಸಾಗಣೆ (Human Trafficking) ಆಗದೆ, ಅಕ್ರಮವಾಗಿ ಬೇರೆ ದೇಶಕ್ಕೆ ವಲಸೆ ಹೋಗುವ ಜಲಾವಾಗಿ ಬದಲಾಗಿದೆ.

ನಕಾರಗುವಾಗೆ ಹೊರಟಿದ್ದ ವಿಮಾನವು ಫ್ರಾನ್ಸ್‌ನಲ್ಲಿ ಲ್ಯಾಂಡ್‌ ಆಗಿ, ತನಿಖೆ ಬಳಿಕ 300ಕ್ಕೂ ಅಧಿಕ ಭಾರತೀಯರಿದ್ದ ವಿಮಾನವು ಮುಂಬೈಗೆ ಆಗಮಿಸಿದ ಬಳಿಕ ಗುಜರಾತ್‌ ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ. ವಿಮಾನದಲ್ಲಿ ಗುಜರಾತ್‌ನವರೇ ಹೆಚ್ಚಿದ್ದ ಕಾರಣ ಗುಜರಾತ್‌ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. “ಏಜೆಂಟ್‌ಗಳ ಮೂಲಕ ನಕಾರಗುವಾಗೆ ಭಾರತೀಯರು ಅಕ್ರಮವಾಗಿ ವಲಸೆ ಹೋಗಲು ಮುಂದಾಗಿದ್ದರು. ಇದಕ್ಕಾಗಿ ಅವರು ತಲಾ 1.2 ಕೋಟಿ ರೂ. ನೀಡಿದ್ದರು” ಎಂಬುದಾಗಿ ವರದಿಯಿಂದ ತಿಳಿದುಬಂದಿದೆ.

ಫ್ರಾನ್ಸ್‌ನಿಂದ ಭಾರತಕ್ಕೆ ಬಂದ ಪ್ರಯಾಣಿಕರು

ಅಕ್ರಮವಾಗಿ ವಲಸೆ ಹೋಗಲು ಮುಂದಾಗಿದ್ದ ಭಾರತೀಯರಲ್ಲಿ ಹೆಚ್ಚಿನವರು ಗುಜರಾತ್‌ನ ಬನಸ್ಕಾಂತ, ಪಟಾನ್‌, ಮೆಹ್ಸಾನ ಹಾಗೂ ಆನಂದ್‌ ಜಿಲ್ಲೆಯವರಾಗಿದ್ದಾರೆ. ಪಂಜಾಬ್‌ನ ಕೆಲವರು ಕೂಡ ವಿಮಾನದಲ್ಲಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಏಜೆಂಟ್‌ಗಳಿಗೆ ಲಂಚ ಕೊಟ್ಟು ಗುಜರಾತ್‌ ಹಾಗೂ ಪಂಜಾಬ್‌ ನಾಗರಿಕರು ಅಮೆರಿಕ, ಬ್ರಿಟನ್‌, ಆಸ್ಟ್ರೇಲಿಯಾ ಸೇರಿ ಹಲವು ರಾಷ್ಟ್ರಗಳಿಗೆ ಅಕ್ರಮವಾಗಿ ವಲಸೆ ಹೋಗುವ ಪ್ರಕರಣಗಳು ಹೆಚ್ಚಾಗಿ ಕೇಳಿಬರುತ್ತಿವೆ. ಇದು ಕೂಡ ಅಂತಹದ್ದೇ ಪ್ರಕರಣವಾಗಿದೆ ಎಂಬುದಾಗಿ ಗುಜರಾತ್‌ ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?

ಮಾನವ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಆರೋಪದಲ್ಲಿ ಕೆಲ ದಿನಗಳ ಹಿಂದಷ್ಟೇ ವಿಮಾನವನ್ನು ಫ್ರಾನ್ಸ್‌ನಲ್ಲಿ ಲ್ಯಾಂಡ್‌ ಮಾಡಿಸಲಾಗಿತ್ತು. ಅಮೆರಿಕ (USA) ಅಥವಾ ಕೆನಡಾಗೆ (Canada) ವಿಮಾನದಲ್ಲಿದ್ದ ಭಾರತೀಯ ಕಾನೂನುಬಾಹಿರವಾಗಿ ತೆರಳುವ ಉದ್ದೇಶ ಹೊಂದಿದ್ದರು ಎಂಬ ಆರೋಪ ಕೇಳಿಬಂದಿದ್ದವು. ವಿಮಾನದಲ್ಲಿ ಭಾರತೀಯರೇ ಹೆಚ್ಚಿರುವ ಕಾರಣ ಆತಂಕ ಹೆಚ್ಚಾಗಿತ್ತು. ಆದರೆ, ತನಿಖೆಯ ಬಳಿಕ ವಿಮಾನವನ್ನು ಭಾರತಕ್ಕೆ ಕಳುಹಿಸಲಾಗಿದೆ. ಸದ್ಯ 276 ಪ್ರಯಾಣಿಕರು ಭಾರತಕ್ಕೆ ಆಗಮಿಸಿದ್ದು, ಇನ್ನೂ 25 ಪ್ರಯಾಣಿಕರು ಫ್ರಾನ್ಸ್‌ನಲ್ಲೇ ಉಳಿದಿದ್ದು, ಆಶ್ರಯ ಕೋರಿದ್ದರು.

ಇದನ್ನೂ ಓದಿ: Plane grounded : ಫ್ರಾನ್ಸ್​ನಲ್ಲಿ ಸಿಲುಕಿದ 303 ಭಾರತೀಯರಿಗೆ ಸಂಪೂರ್ಣ ನೆರವು

ದುಬೈನಿಂದ ಹೊರಟ ಈ ವಿಮಾನವು ರೊಮೇನಿಯನ್ ಚಾರ್ಟರ್ ಕಂಪನಿಗೆ ಸೇರಿದ್ದಾಗಿತ್ತು. ಇದು ನಕಾರಗುವಾಗೆ ಹೊರಟಿತ್ತು ಎಂದು ತಿಳಿದುಬಂದಿದೆ. ಪೊಲೀಸರು ಅಡ್ಡಿಪಡಿಸಿದ ಬಳಿಕವು ತಾಂತ್ರಿಕ ನಿಲುಗಡೆಗಾಗಿ ಸಣ್ಣ ವ್ಯಾಟ್ರಿ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡಿಂಗ್ ಮಾಡಿತು ಎಂದು ತಿಳಿದುಬಂದಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version