ಟೊರೊಂಟೊ: ಕೆನಡಾದ ಟೊರೊಂಟೊದಲ್ಲಿರುವ ಭಾರತದ ರಾಜತಾಂತ್ರಿಕ ಕಚೇರಿ ಎದುರು ಹಲವು ಖಲಿಸ್ತಾನಿ ಉಗ್ರರು ಜಮೆಯಾಗಿ ಪ್ರತಿಭಟನೆ ನಡೆಸಿದ್ದು, ಖಲಿಸ್ತಾನಿ (Khalistani Terrorists) ಧ್ವಜ ಬೀಸಿದ್ದಾರೆ. ಆದರೆ, ಖಲಿಸ್ತಾನಿಗಳಿಗೆ ಪ್ರತಿಯಾಗಿ ಅನಿವಾಸಿ ಭಾರತೀಯರು ತಿರಂಗಾ ಬೀಸುವ ಮೂಲಕ ತಕ್ಕ ತಿರುಗೇಟು ನೀಡಿದ್ದಾರೆ. ಖಲಿಸ್ತಾನಿಗಳು ತಮ್ಮ ಸಂಘಟನೆ ಧ್ವಜ ಹಾರಿಸುತ್ತಿದ್ದರೆ, ಅವರ ಎದುರು ನಿಂತ ಭಾರತೀಯರು ತಿರಂಗಾ ಬೀಸಿ ತಕ್ಕ ಪ್ರತ್ಯುತ್ತರ ನೀಡಿರುವ ವಿಡಿಯೊ ಈಗ ವೈರಲ್ ಆಗಿದೆ.
ಟೊರೊಂಟೊದಲ್ಲಿರುವ ರಾಜತಾಂತ್ರಿಕ ಕಚೇರಿ ಎದುರು ಖಲಿಸ್ತಾನಿಗಳು ಶನಿವಾರ ಸಂಜೆ ಜಮೆಯಾಗಿದ್ದಾರೆ. ಹೀಗೆ ಜಮೆಯಾಗಿ ಭಾರತದ ವಿರುದ್ಧ ಅವರು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಇಷ್ಟಕ್ಕೇ ಸುಮ್ಮನಾಗದ ಉಗ್ರರು ಖಲಿಸ್ತಾನಿ ಧ್ವಜ ಬೀಸಿದ್ದಾರೆ. ಖಲಿಸ್ತಾನಿಗಳು ಇಷ್ಟೆಲ್ಲ ಮಾಡಿದ ಕಾರಣ ಕೆರಳಿದ ಭಾರತೀಯರು ರಾಷ್ಟ್ರಧ್ವಜವನ್ನು ಬೀಸಿದ್ದಾರೆ. ಇದಾದ ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಖಲಿಸ್ತಾನಿಗಳು ಕಾಲ್ಕಿತ್ತಿದ್ದಾರೆ ಎಂದು ತಿಳಿದುಬಂದಿದೆ.
#WATCH | Pro-Khalistan supporters protested in front of the Indian consulate in Canada's Toronto on July 8
— ANI (@ANI) July 9, 2023
Members of the Indian community with national flags countered the Khalistani protesters outside the Indian consulate in Toronto pic.twitter.com/IF5LUisVME
ಲಂಡನ್‌ನಲ್ಲೂ ಉಗ್ರರ ಉಪಟಳ
ಶನಿವಾರ ಸಂಜೆ ಖಲಿಸ್ತಾನಿ ಉಗ್ರರು ಉಗ್ರ ಸಂಘಟನೆಯ ಧ್ವಜ ಹಿಡಿದು ಲಂಡನ್‌ನಲ್ಲಿರುವ ಹೈಕಮಿಷನ್ ಕಚೇರಿ ಎದುರು ಕೂಡ ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ಭದ್ರತೆ ಹೆಚ್ಚಿಸಿದ ಪೊಲೀಸರು ಹೆಚ್ಚು ಹೊತ್ತು ಉಗ್ರರು ಕಚೇರಿ ಎದುರು ಇರಲು ಬಿಟ್ಟಿಲ್ಲ. ಕೊನೆಗೆ ಪೊಲೀಸರಿಗೆ ಹೆದರಿದ ಉಗ್ರರು ಅಲ್ಲಿಂದ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಕೆಲ ತಿಂಗಳ ಹಿಂದಷ್ಟೇ ಪಂಜಾಬ್‌ನಲ್ಲಿ ಅಮೃತ್‌ಪಾಲ್ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದಾಗ ಲಂಡನ್ ಹೈಕಮಿಷನ್ ಕಚೇರಿಗೆ ನುಗ್ಗಿದ್ದ ಖಲಿಸ್ತಾನಿಗಳು ಭಾರತದ ಧ್ವಜವನ್ನು ತೆರವುಗೊಳಿಸಿದ್ದರು. ಇದಕ್ಕೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.
ಇದನ್ನೂ ಓದಿ: Khalistani Terrorists: ಲಂಡನ್ ಹೈಕಮಿಷನ್ ಎದುರು ಖಲಿಸ್ತಾನಿಗಳ ಪ್ರತಿಭಟನೆ; ಪೊಲೀಸರಿಗೆ ಅಂಜಿ ಓಡಿದ ಉಗ್ರರು
ಖಲಿಸ್ತಾನಿ ಉಗ್ರರ ಹತ್ಯೆ
ಕೆಲ ತಿಂಗಳಲ್ಲಿ ವಿದೇಶದಲ್ಲಿರುವ ಮೂವರು ಖಲಿಸ್ತಾನಿ ಉಗ್ರರು ಹತ್ಯೆಗೀಡಾಗಿದ್ದಾರೆ. ಮೇ ತಿಂಗಳಲ್ಲಿ ಪಾಕಿಸ್ತಾನ ಮೂಲದ ಖಲಿಸ್ತಾನಿ ಉಗ್ರ ಪರಮ್‌ಜಿತ್ ಸಿಂಗ್ ಪಂಜ್ವಾರ್, ಜೂನ್‌ನಲ್ಲಿ ಅವತಾರ್ ಸಿಂಗ್ ಖಂಡಾ ಬ್ರಿಟನ್‌ನಲ್ಲಿ ಹತ್ಯೆಗೀಡಾಗಿದ್ದಾರೆ. ಹಾಗೆಯೇ, ಜೂನ್‌ನಲ್ಲಿಯೇ ಕೆನಡಾದಲ್ಲಿ ಖಲಿಸ್ತಾನಿಗಳ ನಾಯ ಹರ್ದೀಪ್ ಸಿಂಗ್ ನಿಜ್ಜಾರ್‌ನನ್ನು ಹತ್ಯೆ ಮಾಡಲಾಗಿದೆ. ಇದರಿಂದಾಗಿ ಖಲಿಸ್ತಾನಿ ಉಗ್ರರು ಒತ್ತಡದಲ್ಲಿದ್ದಾರೆ. ಏಕಾಏಕಿ ತಮ್ಮ ನಾಯಕರ ಹತ್ಯೆಯಿಂದ ಅವರು ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.