Site icon Vistara News

Monsoon Deficit 2023: ದೇಶದಲ್ಲಿ 5 ವರ್ಷದಲ್ಲೇ ಕನಿಷ್ಠ ಮಳೆ; ಶೀಘ್ರವೇ ಬೆಲೆ ಏರಿಕೆ ಗ್ಯಾರಂಟಿ!

Rain Deficit In India

India's 2023 monsoon hit five-year low due to El Nino, agriculture under threat

ನವದೆಹಲಿ: ದೇಶದ ಬಹುತೇಕ ಭಾಗಗಳಲ್ಲಿ ಈ ಬಾರಿಯ ಮುಂಗಾರು ಮಳೆ ಪ್ರಮಾಣ (Monsoon Deficit 2023) ಗಣನೀಯವಾಗಿ ಕುಸಿದಿದೆ. ಇತ್ತೀಚಿನ ವರದಿಗಳ ಪ್ರಕಾರ, 2023ರಲ್ಲಿ ಮುಂಗಾರು ಮಳೆಯು ಕಳೆದ ಐದು ವರ್ಷದಲ್ಲಿಯೇ ಕನಿಷ್ಠ ಪ್ರಮಾಣ ಆಗಿರುವ ಕಾರಣ ಕೃಷಿಗೆ (Agriculture) ಭಾರಿ ಹೊಡೆತ ಬಿದ್ದಿದೆ ಎಂದು ತಿಳಿದುಬಂದಿದೆ. ಹಾಗಾಗಿ, ದೇಶದಲ್ಲಿ ಆಹಾರ ಕೊರತೆ, ಬೇಳೆ-ಕಾಳುಗಳು ಸೇರಿ ಅಗತ್ಯ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಲಿದೆ ಎಂದೇ ಹೇಳಲಾಗುತ್ತಿದೆ.

ಭಾರತವು 3 ಲಕ್ಷ ಕೋಟಿ ಡಾಲರ್‌ ಆರ್ಥಿಕತೆಯನ್ನು ಹೊಂದಿದ್ದು, ಇದಕ್ಕೆ ಕೃಷಿ ಪಾಲು ಹೆಚ್ಚಿದೆ. ಅದರಲ್ಲೂ, ಮುಂಗಾರು ಮಳೆಯು ದೇಶದ ಶೇ.70ರಷ್ಟು ಕೃಷಿ ಭೂಮಿಗೆ ನೀರು ಒದಗಿಸುತ್ತದೆ. ಮುಂಗಾರು ಮಳೆಯ ಮೇಲೆ ಭಾರತದ ಬಹುತೇಕ ಕೃಷಿಯು ಅವಲಂಬನೆಯಾಗಿದೆ. ಆದರೆ, ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆಯ ಕೊರತೆಯಾದ ಕಾರಣ ಕೃಷಿಗೆ ಭಾರಿ ಪೆಟ್ಟು ಬಿದ್ದಿದೆ ಎಂದು ವರದಿ ತಿಳಿಸಿದೆ. ಇದಕ್ಕೆ ಎಲ್‌ನಿನೋ (ಪೆಸಿಫಿಕ್‌ ಮಹಾಸಾಗರದಲ್ಲಿ ಉಷ್ಣಾಂಶ ಹೆಚ್ಚಾಗಿ, ಮಳೆಯ ಮಾರುತ ದಿಕ್ಕು ಬದಲಿಸುವುದು) ಪರಿಣಾಮ ಪ್ರಮುಖ ಕಾರಣ ಎಂದೇ ಹೇಳಲಾಗುತ್ತಿದೆ.

ಯಾವ ತಿಂಗಳಲ್ಲಿ ಎಷ್ಟು ಕೊರತೆ?

ಮುಂಗಾರು ಮಳೆ ಅವಧಿಯಾದ ಜೂನ್‌ನಿಂದ ಸೆಪ್ಟೆಂಬರ್‌ ಅವಧಿಯಲ್ಲಿ ದೇಶದಲ್ಲಿ ಶೇ.94ರಷ್ಟು ಮಳೆಯಾಗಿದೆ. ಇದು ವಾಡಿಕೆಯ ಮಳೆಗಿಂತ ಶೇ.4ರಷ್ಟು ಕಡಿಮೆಯಾಗಿದೆ. ಅದರಲ್ಲೂ ಬಿತ್ತನೆ ಮಾಡಬೇಕಾದ ಜೂನ್‌ನಲ್ಲಿ ಶೇ.9ರಷ್ಟು, ಜುಲೈನಲ್ಲಿ ಶೇ.13ರಷ್ಟು, ಆಗಸ್ಟ್‌ನಲ್ಲಿ ಶೇ.36ರಷ್ಟು ಹಾಗೂ ಸೆಪ್ಟೆಂಬರ್‌ನಲ್ಲಿ ಶೇ.13ರಷ್ಟು ಮುಂಗಾರು ಮಳೆ ಕೊರತೆಯಾಗಿದೆ. ಇದು ದೇಶದ ಕೃಷಿಯ ಮೇಲೆ ಭಾರಿ ಪರಿಣಾಮ ಬೀರಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ.

ಇದನ್ನೂ ಓದಿ: karnataka weather forecast : ಕರಾವಳಿಯಲ್ಲಿ ಪ್ರಬಲವಾದ ಮುಂಗಾರು; ಬಿರುಗಾಳಿ ಸಾಥ್‌

ಮಳೆ ಕೊರತೆಯಿಂದಾಗಿ ಸಕ್ಕರೆ, ಕಾಳುಗಳು, ಅಕ್ಕಿ ಹಾಗೂ ತರಕಾರಿ ಸೇರಿ ಹಲವು ಆಹಾರ ಪದಾರ್ಥಗಳ ಉತ್ಪಾದನೆ ಕುಂಠಿತವಾಗಿದೆ. ಇದರಿಂದಾಗಿ ಇವುಗಳ ಬೆಲೆಯು ಈಗಾಗಲೇ ಏರಿಕೆಯಾಗಿದೆ. ಭಾರತವು ಅಕ್ಕಿ, ಗೋಧಿ ಹಾಗೂ ಸಕ್ಕರೆ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಎರಡನೇ ಸ್ಥಾನ ಪಡೆದಿದೆ. ಹೀಗಿದ್ದರೂ ಇವುಗಳ ರಫ್ತಿನ ಮೇಲೆ ಅಧಿಕ ಸುಂಕ ವಿಧಿಸುವ ಮೂಲಕ ದೇಶದಲ್ಲಿ ಆಹಾರ ಕೊರತೆ ಉಂಟಾಗದಂತೆ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಂಡಿದೆ. ಇಷ್ಟಾದರೂ ಮುಂದಿನ ದಿನಗಳಲ್ಲಿ ಬೆಲೆಯೇರಿಕೆ ತಪ್ಪಿದ್ದಲ್ಲ ಎಂದು ತಜ್ಞರು ತಿಳಿಸಿದ್ದಾರೆ.

Exit mobile version