“ಅರುಣಾಚಲ ಪ್ರದೇಶ (Arunachal Pradesh) ಭೌಗೋಳಿಕವಾಗಿ ತನ್ನ ಗಡಿಗೇ ಸೇರಿದ್ದು” ಎಂದು ಚೀನಾ ಮತ್ತೊಮ್ಮೆ ಪ್ರತಿಪಾದಿಸಿದೆ. ಈ ಹಿಂದೆಯೂ ಚೀನಾ ಹೀಗೆ ಪ್ರತಿಪಾದಿಸಿತ್ತು. ನಿನ್ನೆಯಷ್ಟೇ ಅಮೆರಿಕದ ವಿದೇಶಾಂಗ ಇಲಾಖೆ, “ಅರುಣಾಚಲ ಪ್ರದೇಶ ಭಾರತಕ್ಕೆ ಸೇರಿದ್ದು” ಎಂದು ಹೇಳಿತ್ತು. ಈ ಅಂತಾರಾಷ್ಟ್ರೀಯ ಬೆಂಬಲದಿಂದ ಸಂತೋಷಗೊಂಡಿರುವ ಭಾರತವನ್ನು ಚುಚ್ಚಲೆಂದೇ ಚೀನಾ ಮತ್ತೊಮ್ಮೆ ಅರುಣಾಚಲದ ವಿಷಯ ಎತ್ತಿದೆ. ಹಿಂದೆಯೂ “ಚೀನಾದ ಈ ನಿಲುವು ಅಸಂಬದ್ಧ ಹಾಗೂ ಹಾಸ್ಯಾಸ್ಪದ” ಎಂದು ಭಾರತ ತಳ್ಳಿಹಾಕಿತ್ತು. ಈಗಲೂ ಅದನ್ನೇ ಪುನರುಚ್ಚರಿಸಿದೆ. ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ನೀಡಿದ್ದ ಹೇಳಿಕೆಗೆ ಸೋಮವಾರ ಪ್ರತಿಕ್ರಿಯಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್, ಅರುಣಾಚಲ ಪ್ರದೇಶದ ಮೇಲೆ ಹಕ್ಕು ಸಾಧಿಸುವ ಮಾತಾಡಿದ್ದಾರೆ. “ಚೀನಾದ ಹೇಳಿಕೆಯಲ್ಲಿ ಹೊಸದೇನಿಲ್ಲ. ಅದು ಇಂದಿಗೂ ಹಾಸ್ಯಾಸ್ಪದವೇ ಆಗಿದೆ” ಎಂದು ಜೈಶಂಕರ್ ಹೇಳಿದ್ದರು.
ಅರುಣಾಚಲ ಪ್ರದೇಶ ಭಾರತಕ್ಕೇ ಸೇರಿದ್ದು ಎಂದು ಸ್ಪಷ್ಟವಾಗಿ ಗೊತ್ತಿದ್ದರೂ ಚೀನಾ ಮತ್ತೆ ಮತ್ತೆ ಆ ಪ್ರದೇಶದ ಬಗೆಗೆ ಹಕ್ಕು ಸಾಧಿಸುವ ಮಾತುಗಳನ್ನಾಡದೇ ಬಿಡುವುದಿಲ್ಲ. ಅದರ ಜೊತೆಗೆ ಇನ್ನೂಕೆಲವಷ್ಟು ಚೇಷ್ಟೆಗಳನ್ನೂ ಅದು ಮಾಡುತ್ತದೆ. ಉದಾಹರಣೆಗೆ 2023ರ ಏಪ್ರಿಲ್‌ನಲ್ಲಿ ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಮರುನಾಮಕರಣ ಮಾಡಿತ್ತು. ಹೆಸರು ಬದಲಿಸಿದ 11 ಸ್ಥಳಗಳು ಇರುವ ಒಟ್ಟಾರೆ ಪ್ರದೇಶವನ್ನು ಚೀನಾ ದಕ್ಷಿಣ ಟಿಬೆಟ್ ಎಂದು ಕರೆದಿದೆ. ಪರ್ವತ ಶ್ರೇಣಿಗಳು, ನದಿಗಳು, ಜನವಸತಿ ಪ್ರದೇಶಗಳ ಹೆಸರುಗಳ ಬದಲಾವಣೆ ಮಾಡಿರುವ ಆ ದೇಶ, ಇಷ್ಟು ದಿನ ಇದ್ದ ಹೆಸರನ್ನು ತೆಗೆದುಹಾಕಿ ಚೀನಿ ಭಾಷೆಯ ನಾಮಕರಣ ಮಾಡಿದೆ. ಅರುಣಾಚಲ ಪ್ರದೇಶದಲ್ಲಿ ಚೀನಾ ದೇಶ ಹೀಗೆ ಹೆಸರು ಬದಲಾವಣೆಯ ಅಧಿಕಪ್ರಸಂಗತನ ತೋರುತ್ತಿರುವುದು ಇದು ಮೂರನೇ ಬಾರಿ. ಈ ಹಿಂದೆ 2017ರ ಏಪ್ರಿಲ್ನಲ್ಲಿ 6 ಮತ್ತು 2021ರ ಡಿಸೆಂಬರ್ನಲ್ಲಿ 15 ಪ್ರದೇಶಗಳ ಹೆಸರನ್ನು ಏಕಪಕ್ಷೀಯವಾಗಿ ನಿರ್ಣಯ ಮಾಡಿ ಬದಲಿಸಿತ್ತು. ನಂತರ ಕಳೆದ ವರ್ಷ ಆಗಸ್ಟ್‌ನಲ್ಲಿ ಅಲ್ಲಿನ ನೈಸರ್ಗಿಕ ಸಂಪನ್ಮೂಲಗಳ ಸಚಿವಾಲಯ ಬಿಡುಗಡೆ ಮಾಡಿದ ನಕ್ಷೆಯಲ್ಲಿ ಅರುಣಾಚಲ ಪ್ರದೇಶದ ಹಲವು ಪ್ರದೇಶಗಳನ್ನು ತನ್ನ ವ್ಯಾಪ್ತಿಯೊಳಗೆ ತೋರಿಸಿಕೊಂಡಿತ್ತು. ಇದರಲ್ಲಿ ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರಕ್ಕೆ ಸಮೀಪದ ಪಟ್ಟಣವೂ ಸೇರಿದೆ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಚಂದ್ರಯಾನ 3 ಇಳಿದ ಜಾಗವೀಗ ‘ಶಿವಶಕ್ತಿ’; ದೇಶದ ಸಾಧನೆ ಚಿರಾಯು
ಇವೆಲ್ಲವನ್ನೂ ಮಾಡುತ್ತಿರುವುದು ಚೀನಾದ ಹತಾಶೆಯ ಪ್ರತೀಕ. ಯಾಕೆಂದರೆ, ಅರುಣಾಚಲ ಪ್ರದೇಶದಲ್ಲಿ ಎನ್‌ಡಿಎ ಸರ್ಕಾರ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ. ಇಲ್ಲಿನ ಪೌರರಿಗೆ ಸುಗಮ ಬದುಕಿಗೆ ಅವಶ್ಯವಾದ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿದೆ. ಇಲ್ಲಿನ ಗಡಿ ಪ್ರದೇಶಗಳಿಗೆ ಕ್ಷಿಪ್ರವಾಗಿ ಧಾವಿಸಬಲ್ಲ ಸರ್ವಋತು ರಸ್ತೆಗಳನ್ನು ನಿರ್ಮಿಸುತ್ತಿದೆ. ಇತ್ತೀಚೆಗೆ ಲೋಕಾರ್ಪಣೆಯಾದ ಸೆಲಾ ಸುರಂಗ ಅವುಗಳಲ್ಲಿ ಒಂದು. ಇದನ್ನು ಸ್ವತಃ ಪ್ರಧಾನಿ ಮೋದಿ ಅಲ್ಲಿಗೆ ತೆರಳಿ ಉದ್ಘಾಟಿಸಿದ್ದಾರೆ. ತವಾಂಗ್ ಪ್ರದೇಶದಲ್ಲಿ ಈ ಸುರಂಗವು ಸಂಪರ್ಕ ಕಲ್ಪಿಸಲಿದೆ. ಇದರಿಂದ ತವಾಂಗ್ ಪ್ರದೇಶದಲ್ಲಿ ಭಾರತೀಯ ಸೇನೆಯು ಹೆಚ್ಚು ನಿಗಾ ಇರಿಸಲು ಸಾಧ್ಯವಾಗಲಿದೆ. ಚಳಿಗಾಲದಲ್ಲಿ ಗಡಿಯಲ್ಲಿ ಯಾವುದೇ ತುರ್ತು ಸಂದರ್ಭ ಎದುರಾದರೆ, ಸೇನೆಯು ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಲು ಸುರಂಗವು ಅನುಕೂಲ ಕಲ್ಪಿಸಲಿದೆ. ವಾಸ್ತವ ಗಡಿ ನಿಯಂತ್ರಣ ರೇಖೆಯ ಬಳಿ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ಕ್ಷಿಪ್ರವಾಗಿ ನಿಯೋಜಿಸಲು, ಶಸ್ತ್ರಾಸ್ತ್ರಗಳನ್ನು ಸಾಗಿಸಲು ಕೂಡ ಅನುಕೂಲವಾಗಲಿದೆ. ಇವೆಲ್ಲವೂ ಚೀನಾವನ್ನು ಕೆರಳಿಸಿದೆ.
ಚೀನಾ ಏನು ಬೇಕಿದ್ದರೂ ಹೇಳಲಿ, ಅರುಣಾಚಲ ಪ್ರದೇಶ ನಮ್ಮದೆಂಬ ಭಾರತದ ನಿಲುವಿನಲ್ಲೇನೂ ಬದಲಾವಣೆಯಿಲ್ಲ. 1962ರಲ್ಲಿ ನಡೆದ ಯುದ್ಧದಲ್ಲಿ ಅರುಣಾಚಲ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿತ್ತು. ಆದರೆ 2019ರಲ್ಲಿ ನಡೆದ ಗಲ್ವಾನ್ ಗಡಿ ಚಕಮಕಿಯಲ್ಲಿ ಚೀನಾಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ. 1962ರ ಭಾರತಕ್ಕೂ 2024ರ ಭಾರತಕ್ಕೂ ವ್ಯತ್ಯಾಸವಿದೆ. ಗಡಿಯಲ್ಲಿ ಹಾಗೂ ಮಿಲಿಟರಿಯಲ್ಲಿ ಸಕಲ ಸನ್ನದ್ಧತೆಯೇ ಇಂದಿನ ಭಾರತದ ಸ್ವಾಭಿಮಾನ, ಸಾರ್ವಭೌಮತೆಗೆ ಕಾರಣ. ಲಕ್ಷದ್ವೀಪದಲ್ಲಿ ಸೇನಾ ನೆಲೆ ಸ್ಥಾಪಿಸುವ ಮೂಲಕ ಚೀನಾದ ಸಾಗರ ವಿಸ್ತರಣೆಗೆ ಭಾರತ ಪರೋಕ್ಷ ಉತ್ತರವನ್ನೂ ನೀಡಿದೆ. ಹೀಗೆ ವ್ಯೂಹಾತ್ಮಕ ಸನ್ನದ್ಧತೆ ಹಾಗೂ ರಾಜನೈತಿಕತೆ- ಎರಡೂ ಹಾದಿಗಳಲ್ಲಿ ಭಾರತದ ಉಪಕ್ರಮಗಳು ಚೀನಾವನ್ನು ಪರಿಣಾಮಕಾರಿಯಾಗಿ ಎದುರಿಸಿವೆ