Site icon Vistara News

CAA Row: ಸಿಎಎ ನಮ್ಮ ಆಂತರಿಕ ವಿಚಾರ, ಮೂಗು ತೂರಿಸದಿರಿ; ಅಮೆರಿಕಕ್ಕೆ ಭಾರತ ಕ್ಲಾಸ್

Randhir Jaiswal

India's Citizenship Amendment Act Is Internal Matter, US Concerns Misplaced and Unwarranted: MEA

ನವದೆಹಲಿ: ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆ (CAA Row) ಜಾರಿಗೊಳಿಸಿ ಅಧಿಸೂಚನೆ ಹೊರಡಿಸಿದೆ. ಇದರ ಕುರಿತು ಪರ-ವಿರೋಧ ಚರ್ಚೆಯಾಗುತ್ತಿದೆ. ಇದರ ಮಧ್ಯೆಯೇ, ಸಿಎಎ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕ ಕಳವಳ ವ್ಯಕ್ತಪಡಿಸಿದ್ದು, ಇದಕ್ಕೆ ಭಾರತ ಕೂಡ ಸರಿಯಾಗಿಯೇ ತಿರುಗೇಟು ನೀಡಿದೆ. “ಸಿಎಎ ಭಾರತದ ಆಂತರಿಕ ವಿಚಾರವಾಗಿದೆ. ಇದರ ವಿಷಯದಲ್ಲಿ ಬೇರೆಯವರು ಅನವಶ್ಯಕವಾಗಿ ಮಾತನಾಡುವುದು ಸರಿಯಲ್ಲ” ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ (Randhir Jaiswal) ಹೇಳಿದ್ದಾರೆ.

“ಪೌರತ್ವ ತಿದ್ದುಪಡಿ ಕಾಯ್ದೆಯು ಭಾರತದ ಆಂತರಿಕ ವಿಚಾರವಾಗಿದೆ. ಇದರ ಕುರಿತು ಅನಗತ್ಯವಾಗಿ, ತಪ್ಪು ಮಾಹಿತಿ ಇರುವ ರೀತಿ ಯಾರು ಕೂಡ ಮಾತನಾಡಬಾರದು. ಅಷ್ಟಕ್ಕೂ, ಪೌರತ್ವ ತಿದ್ದುಪಡಿ ಕಾಯ್ದೆ ಎಂದರೆ, ಭಾರತದ ಪೌರತ್ವ ನೀಡುವುದೇ ಹೊರತು, ಯಾರಿಂದಲೂ ಕಿತ್ತುಕೊಳ್ಳುವುದಲ್ಲ. ಇದರಿಂದ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫಘಾನಿಸ್ತಾನದಲ್ಲಿ ಸಂಕಷ್ಟ ಸಿಲುಕಿದವರಿಗೆ ಭಾರತದ ಪೌರತ್ವ ಸಿಗುತ್ತಿದೆ. ಇದು ಮಾನವೀಯತೆ ಹಾಗೂ ಮಾನವ ಹಕ್ಕುಗಳ ರಕ್ಷಣೆಯ ಸಂಕೇತವಾಗಿದೆ” ಎಂದು ರಣಧೀರ್‌ ಜೈಸ್ವಾಲ್‌ ತಿಳಿಸಿದ್ದಾರೆ.

ಅಮೆರಿಕ ಹೇಳಿದ್ದೇನು?

ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರ ಮ್ಯಾಥ್ಯೂ ಮಿಲ್ಲರ್ ಅವರು ಸಿಎಎ ಕುರಿತು ಅನಗತ್ಯ ಕಳವಳ ವ್ಯಕ್ತಪಡಿಸಿದ್ದರು. “ಮಾರ್ಚ್ 11ರಂದು ಹೊರಡಿಸಲಾದ ಪೌರತ್ವ (ತಿದ್ದುಪಡಿ) ಕಾಯಿದೆಯ ಅಧಿಸೂಚನೆಯ ಬಗ್ಗೆ ನಾವು ಚಿಂತಿತರಾಗಿದ್ದೇವೆ. ಈ ಕಾಯಿದೆಯನ್ನು ಹೇಗೆ ಕಾರ್ಯಗತಗೊಳಿಸಲಾಗುತ್ತದೆ ಎಂಬುದನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಧಾರ್ಮಿಕ ಸ್ವಾತಂತ್ರ್ಯವನ್ನು ಗೌರವಿಸುವುದು ಮತ್ತು ಕಾನೂನಿನಡಿಯಲ್ಲಿ ಎಲ್ಲ ಸಮುದಾಯಗಳನ್ನು ಸಮಾನವಾಗಿ ಪರಿಗಣಿಸುವುದು ಪ್ರಜಾಪ್ರಭುತ್ವದ ಮೂಲಭೂತ ತತ್ವಗಳಾಗಿವೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Citizenship Amendment Act : ಸಿಎಎ ಜಾರಿಯಿಂದ ಮುಸ್ಲಿಂ ವಲಸಿಗರಿಗೆ ಸಮಸ್ಯೆಯಿದೆಯೇ? ಸರ್ಕಾರ ಹೇಳಿದ್ದೇನು?

ಸಿಎಎ ವಾಪಸ್‌ ಇಲ್ಲ ಎಂದಿರುವ ಅಮಿತ್‌ ಶಾ

ಸಿಎಎ ಹಿಂಪಡೆಯುವ ಮಾತೇ ಇಲ್ಲ ಎಂದು ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸ್ಪಷ್ಟಪಡಿಸಿದ್ದಾರೆ. “ನಮ್ಮ ದೇಶದಲ್ಲಿ ಭಾರತೀಯ ಪೌರತ್ವವನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಸಾರ್ವಭೌಮ ಹಕ್ಕು. ನಾವು ಇದರಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಸಿಎಎ ಅನ್ನು ಎಂದಿಗೂ ಹಿಂತೆಗೆದುಕೊಳ್ಳುವುದಿಲ್ಲ. ಪ್ರತಿಪಕ್ಷಗಳಿಗೆ ಬೇರೆ ಕೆಲಸವಿಲ್ಲ. ಅವರದು ಹೇಳುವುದು ಒಂದು, ಮಾಡುವುದು ಇನ್ನೊಂದು ಎಂಬ ಇತಿಹಾಸ. ಆದರೆ ಪ್ರಧಾನಿ ಮೋದಿ ಮತ್ತು ಬಿಜೆಪಿ ಇತಿಹಾಸ ವಿಭಿನ್ನ. ಬಿಜೆಪಿ ಅಥವಾ ಪ್ರಧಾನಿ ಮೋದಿ ಹೇಳುವುದು ಕಲ್ಲಿನಲ್ಲಿ ಕೆತ್ತಿದಂತೆ. ಮೋದಿ ನೀಡಿದ ಪ್ರತಿಯೊಂದು ಭರವಸೆಯೂ ಈಡೇರಿದೆ” ಎಂದು ಅಮಿತ್‌ ಶಾ ಹೇಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version