ನವ ದೆಹಲಿ: ಭಾರತದ ಆರ್ಥಿಕಾಭಿವೃದ್ಧಿಯು ಶೇ.7.5 ದರದಲ್ಲಿ ಬೆಳವಣಿಗೆಯಾಗಲಿದೆ. ಇದು ಜಗತ್ತಿನಲ್ಲೇ ಅತಿ ಹೆಚ್ಚು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಉಜ್ಬೇಕಿಸ್ತಾನದ ಸಮರಕಂಡದಲ್ಲಿ ಆಯೋಜಿಸಲಾಗಿರುವ ಶಾಂಘೈ ಸಹಕಾರ(CSO Summit) ಶೃಂಗದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಎರಡು ದಿನಗಳ ಕಾಲ ನಡೆಯುತ್ತಿರುವ ಈ ಶೃಂಗದಲ್ಲಿ ಭಾರತ, ಚೀನಾ, ಪಾಕಿಸ್ತಾನ, ರಷ್ಯಾ ಸೇರಿದಂತೆ ಸೆಂಟ್ರಲ್ ಏಷ್ಯಾ ವ್ಯಾಪ್ತಿಯ ರಾಷ್ಟ್ರಗಳು ಪಾಲ್ಗೊಂಡಿವೆ.
ಭಾರತದಲ್ಲಿ ಈಗ 70 ಸಾವಿರಕ್ಕೂ ಅಧಿಕ ಸ್ಟಾರ್ಟ್‌ಅಪ್‌ಗಳಿವೆ, 100ಕ್ಕೂ ಅಧಿಕ ಯೂನಿಕಾರ್ನ್ ಕಂಪನಿಗಳಿವೆ. ನಾವು ಜನ ಕೇಂದ್ರೀತ ಅಭಿವೃದ್ಧಿ ಮಾದರಿಯನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ನಾವು ಎಲ್ಲ ಕ್ಷೇತ್ರಗಳಲ್ಲೂ ನಾವೀನ್ಯತೆಯನ್ನು ಪ್ರೋತ್ಸಾಹಿಸುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇದೇ ವೇಳೆ ತಿಳಿಸಿದರು.
ಗುಜರಾತ್‌ನಲ್ಲಿ ಪ್ರಾಚೀನ ಔಷಧಗಳಿಗೆ ಸಂಬಂಧಿಸಿದಂತೆ ಗ್ಲೋಬಲ್ ಸೆಂಟರ್ ಫಾರ್ ಟ್ರಡಿಷನಲ್ ಮೆಡಿಷನ್ಸ್ ಕೇಂದ್ರ ಆರಂಭಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ಆರಂಭಿಸಿದ ಏಕೈಕ ಸಂಸ್ಥೆ ಇದಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಚೀನ ಔಷಧಗಳಿಗೆ ಸಂಬಂಧಿಸಿದಂತೆ ಭಾರತವು ಹೊಸ ಉಪಕ್ರಮಗಳನ್ನು ಕೈಗೊಳ್ಳಲು ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇದೇ ವೇಳೆ ತಿಳಿಸಿದರು.
ಮುಂಬರುವ ಶಾಂಘೈ ಸಹಕಾರ ಶೃಂಗಕ್ಕೆ ಭಾರತ ಆತಿಥ್ಯ
ಮುಂದಿನ ವರ್ಷ ನಡೆಯಲಿರುವ ಶಾಂಘೈ ಸಹಕಾರ ಶೃಂಗಕ್ಕೆ ಭಾರತವು ಆತಿಥ್ಯ ವಹಿಸಲಿದೆ. ಶೃಂಗದ ಅಧ್ಯಕ್ಷತೆಯನ್ನು ಭಾರತವು ವಹಿಸಿಕೊಳ್ಳುತ್ತಿದ್ದು, ಅಗತ್ಯವಿರುವ ಎಲ್ಲ ಸಹಕಾರವನ್ನು ನೀಡಲಾಗುವುದು ಎಂದು ಚೀನಾ ಅಧ್ಯಕ್ಷ ಜಿನ್‌ಪಿಂಗ್ ಅವರು ತಿಳಿಸಿದ್ದಾರೆ.
ಇದನ್ನೂ ಓದಿ | SCO Summit | ಏನಿದು ಎಸ್‌ಸಿಒ ಶೃಂಗ? ಮೋದಿ ಏಕೆ ಉಜ್ಬೇಕಿಸ್ತಾನಕ್ಕೆ ಹೊರಟಿರುವುದು?