Site icon Vistara News

ಭಾರತದ ಮೊಟ್ಟ ಮೊದಲ ಸ್ವದೇಶಿ ಸಮರ ನೌಕೆ ವಿಕ್ರಾಂತ್ ನೌಕಾಪಡೆಗೆ ಹಸ್ತಾಂತರ

INS Vikrant

ಕೊಚ್ಚಿನ್‌ : ಭಾರತದ ಮೊಟ್ಟ ಮೊದಲ ಸ್ವದೇಶಿ ನಿರ್ಮಾಣದ ಸಮರ ನೌಕೆ ವಿಕ್ರಾಂತ್‌ ಅನ್ನು ಕೊಚ್ಚಿನ್‌ ಶಿಪ್‌ಯಾರ್ಡ್‌ನಲ್ಲಿ ನೌಕಾಪಡೆಗೆ ಗುರುವಾರ ಹಸ್ತಾಂತರಿಸಲಾಯಿತು. ಭಾರತದಲ್ಲೇ ನಿರ್ಮಿಸಿದ ಅತಿ ದೊಡ್ಡ ಯುದ್ಧ ನೌಕೆ ಇದಾಗಿದೆ. ಮುಂದಿನ ತಿಂಗಳಿನಿಂದಲೇ ನೌಕಾಪಡೆಗೆ ಇದರ ಸೇವೆ ಲಭಿಸುವ ನಿರೀಕ್ಷೆ ಇದೆ. ೨೦೦೯ರಿಂದ ಆರಂಭವಾಗಿದ್ದ ಯುದ್ಧ ನೌಕೆ ನಿರ್ಮಾಣದ ೧೩ ವರ್ಷಗಳ ಯಾತ್ರೆ ಇದರೊಂದಿಗೆ ಪೂರ್ಣವಾಗಿದೆ. ‌೫೦,೦೦೦ ಕೋಟಿ ರೂ. ವೆಚ್ಚದ ಐಎನ್‌ಎಸ್‌ ವಿಶಾಲ್‌ ಎಂಬ ಮತ್ತೊಂದು ಸಮರ ನೌಕೆಯ ನಿರ್ಮಾಣ ಕಾರ್ಯ ಆರಂಭವಾಗಿದೆ.

ಈ ವಿಕ್ರಾಂತ್‌ ಯುದ್ಧ ನೌಕೆಯನ್ನು ೨೦,೦೦೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ದೇಶದ ನೌಕಾಪಡೆಯ ಬಲವನ್ನು ಇದು ವೃದ್ಧಿಸಲಿದೆ. ವಿಕ್ರಾಂತ್‌ ಭಾರತದ ೪ನೇ ಏರ್‌ಕ್ರಾಫ್ಟ್‌ ಕ್ಯಾರಿಯರ್‌ ಯುದ್ಧನೌಕೆಯಾಗಲಿದೆ. ಈ ಹಿಂದೆ ಬ್ರಿಟಿಷ್‌ ಮೂಲದ ಮೊದಲ ವಿಕ್ರಾಂತ್‌, (೧೯೬೧-೧೯೯೭), ಐಎನ್‌ಎಸ್‌ ವಿರಾಟ್‌ (ಇದು ಕೂಡ ಬ್ರಿಟಿಷ್‌ ಮೂಲ) ೧೯೮೭-೨೦೧೬, ಐಎನ್‌ಎಸ್‌ ವಿಕ್ರಮಾದಿತ್ಯ (ರಷ್ಯಾ ಮೂಲ) ೨೦೧೩ರಿಂದ ಸೇವೆಯಲ್ಲಿದೆ. ಈ ಹೊಸ ವಿಕ್ರಾಂತ್‌ನಿಂದಾಗಿ ಭಾರತವು ಏರ್‌ಕ್ರಾಫ್ಟ್‌ ಕ್ಯಾರಿಯರ್‌ ಸಮರ ನೌಕೆಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುವ ಅಮೆರಿಕ, ಬ್ರಿಟನ್‌, ರಷ್ಯಾ, ಫ್ರಾನ್ಸ್‌ ಮತ್ತು ಚೀನಾ ಸಾಲಿಗೆ ಸೇರ್ಪಡೆಯಾಗಿದೆ.

ವಿಕ್ರಾಂತ್‌ ವಿಶೇಷತೆ ಹಲವು: ೨೬೨ ಮೀಟರ್‌ ಉದ್ದ‌ ಮತ್ತು ೬೨ ಮೀಟರ್‌ ಅಗಲವಿರುವ ವಿಕ್ರಾಂತ್‌ ಸಮರ ನೌಕೆಯು ೪೫,೦೦೦ ಟನ್‌ ತೂಕವಿದೆ. ೧೯೬೧ರಿಂದ ೧೯೯೭ರ ತನಕ ಸೇವೆಯಲ್ಲಿದ್ದ ಐಎನ್‌ಎಸ್‌ ವಿಕ್ರಾಂತ್‌ನ ಹೆಸರನ್ನು ಇದಕ್ಕೆ ಇಡಲಾಗಿದೆ. ಇದರ ೭೬% ಭಾಗ ಭಾರತದಲ್ಲೇ ತಯಾರಾಗಿದೆ. ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಇದು ಮತ್ತೊಂದು ನಿದರ್ಶನ ಎಂದು ನೌಕಾಪಡೆ ತಿಳಿಸಿದೆ.

ಮಿಗ್-‌೨೯ಕೆ ಯುದ್ಧ ವಿಮಾನ, ಕಮೋವ್-‌೩೧ ಹೆಲಿಕಾಪ್ಟರ್‌, ಎಂಎಚ್-‌೬೦ ಆರ್‌ ಮಲ್ಟಿ ರೋಲ್‌ ಹೆಲಿಕಾಪ್ಟರ್‌ ಸೇರಿದಂತೆ ೩೦ ಯುದ್ಧ ವಿಮಾನಗಳನ್ನು ವಿಕ್ರಾಂತ್‌ ಹಡಗಿನಿಂದ ನಿರ್ವಹಿಸಬಹುದು. 14 ಅಂತಸ್ತು, ೫ ಸೂಪರ್‌ ಸ್ಟ್ರಕ್ಚರ್‌, ೨,೩೦೦ ಕಂಪಾರ್ಟ್‌ಮೆಂಟ್‌, ೧,೭೦೦ ಸಿಬ್ಬಂದಿಗೆ ವಾಸ್ತವ್ಯಕ್ಕೆ ಅನುಕೂಲ, ಮಹಿಳೆಯರಿಗೆ ವಿಶೇಷ ಕ್ಯಾಬಿನ್‌ ಇತ್ಯಾದಿಗಳನ್ನು ಒಳಗೊಂಡಿದೆ. ೨೦೨೩ರಲ್ಲಿ ಪೂರ್ಣ ಪ್ರಮಾಣದಲ್ಲಿ ಸೇನೆಯ ಕಾರ್ಯಾಚರಣೆಗೆ ಸಿದ್ಧವಾಗಲಿದೆ. ಚೀನಾ ಈಗ ಎರಡು ಏರ್‌ಕ್ರಾಫ್ಟ್‌ ಕ್ಯಾರಿಯರ್‌ ಯುದ್ಧ ನೌಕೆಯನ್ನು ಹೊಂದಿದೆ.

Exit mobile version