Site icon Vistara News

India’s First Voter | ಸ್ವತಂತ್ರ ಭಾರತದ ಮೊದಲ ಮತದಾರ, 106 ವರ್ಷದ ಶ್ಯಾಮ್ ಸರನ್ ನೇಗಿ ಸಾವು

Shyam Saran Negi

ನವದೆಹಲಿ: ಸ್ವತಂತ್ರ ಭಾರತದ ಮೊದಲ ಮತದಾರ (India’s First Voter) ಸ್ಯಾಮ್ ಸರನ್ ನೇಗಿ ಅವರು ಹಿಮಾಚಲ ಪ್ರದೇಶದ ಕಲ್ಪಾದಲ್ಲಿ ನಿಧನರಾದರು. ಅವರಿಗೆ 106 ವರ್ಷ ವಯಸ್ಸಾಗಿತ್ತು. ಹಿಮಾಚಲ ಪ್ರದೇಶದ 14ನೇ ಅಸೆಂಬ್ಲಿ ಎಲೆಕ್ಷನ್‌ಗೆ ಮತ ಚಲಾಯಿಸಿದ ಮಾರನೇ ದಿನವೇ ಅವರು ಕೊನೆಯುಸಿರೆಳೆದಿದ್ದಾರೆ. 1951 ಅಕ್ಟೋಬರ್ 23ರಂದು ಕಲ್ಪಾ ಪೋಲಿಂಗ್ ಬೂತ್‌ನಲ್ಲಿ ಮತ ಚಲಾಯಿಸುವ ಮೂಲಕ ಸ್ವತಂತ್ರ ಭಾರತದ ಮೊದಲ ಮತದಾರ ಎಂಬ ಖ್ಯಾತಿ ಗಳಿಸಿದರು. ಈ ವರೆಗೆ ಅವರು ಒಟ್ಟು 34 ಬಾರಿ ಮತದಾನ ಮಾಡಿದ್ದಾರೆ. ಕಳೆದ ನವೆಂಬರ್ 2ರಂದು ಅವರು ತಮ್ಮ ಕೊನೆಯ ಬಾರಿ ಮತವನ್ನು (ಪೋಸ್ಟಲ್ ಬ್ಯಾಲೆಟ್) ಚಲಾಯಿಸಿದರು. ಸಕಲ ಸರ್ಕಾರಿ ಗೌರವಗಳೊಂದಿಗೆ ನೇಗಿ ಅವರ ಅಂತ್ಯ ಸಂಸ್ಕಾರವನ್ನು ನಡೆಸಲು ಸರ್ಕಾರ ನಿರ್ಧರಿಸಿದೆ.

ನೇಗಿ ಸಾವಿಗೆ ಸಂತಾಪ ವ್ಯಕ್ತಪಡಿಸಿರುವ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರು, ದೇಶದ ಮೊದಲ ಮತದಾರರ ನೇಗಿ ಅವರು ತಮ್ಮ ಕೊನೆಯ ಮತ ಚಲಾಯಿಸಿದ್ದು ಭಾವನಾತ್ಮಕ ಸಂಗತಿಯಾಗಿದೆ. ಅವರ ಸಾವಿನ ಸುದ್ದಿ ಕೇಳಿ ದುಃಖವಾಯಿತು. ನವೆಂಬರ್ 2ರಂದು ಅವರು ತಮ್ಮ ಕೊನೆಯ ಹಾಗೂ ಒಟ್ಟಾರೆ 34ನೇ ಬಾರಿ ಮತವನ್ನು ಚಲಾಯಿಸಿದರು ಎಂದು ಅವರು ಟ್ವೀಟ್ ಮಾಡಿದ್ದಾರೆ. ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಮಾಸ್ಟರ್ ಶ್ಯಾಮ್ ಎಂದೇ ಅವರು ಖ್ಯಾತರಾಗಿದ್ದರು. 1952ರ ಜನವರಿ ಮತ್ತು ಫೆಬ್ರವರಿಯಲ್ಲಿ ಸ್ವತಂತ್ರ ಭಾರತದ ಮೊದಲ ಸಾರ್ವತ್ರಿಕ ಚುನಾವಣೆ ನಡೆಯಿತು. ಆದರೆ, ಹಿಮ ಮತ್ತು ಹವಾಮಾನ ವೈಪರೀತ್ಯವನ್ನು ಗಮನದಲ್ಲಿಟ್ಟುಕೊಂಡು ಹಿಮಾಚಲದಲ್ಲಿ 1951 ಅಕ್ಟೋಬರ್‌ನಲ್ಲಿ ಚುನಾವಣೆ ನಡೆಸಲಾಯಿತು. ಹಾಗಾಗಿ, ದೇಶದ ಮೊದಲ ಚುನಾವಣೆಯಲ್ಲಿ ಪ್ರಥಮ ಮತ ಚಲಾಯಿಸಿದ ಕೀರ್ತಿ ನೇಗಿಯವರದ್ದಾಯಿತು. ಅಲ್ಲಿಂದ ಇಲ್ಲಿಯವರೆಗೆ ಅವರು ಪ್ರತಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಪಾಲ್ಗೊಂಡ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ.

ಇದನ್ನೂ ಓದಿ | ವಿಸ್ತಾರ Explainer | ಬುಡಕಟ್ಟು ಮತದಾರರನ್ನು ಸೆಳೆಯಲು ಬಿಜೆಪಿ ಹಾಕಿದ ಪಟ್ಟು ಯಾವುದು?

Exit mobile version