ವಾಷಿಂಗ್ಟನ್, ಅಮೆರಿಕ: ಜಾಗತಿಕ ವ್ಯವಾಹಾರಗಳ (World Affairs) ಮೇಲೆ ಭಾರತದ ಪ್ರಭಾವ ಹೆಚ್ಚಾಗುತ್ತಿದೆ (India’s Influence) ಎಂದು ಭಾರತೀಯರು ಭಾವಿಸಿದರೆ, ಜಗತ್ತಿನ ಇತರ ಜನರು ಹಾಗೇನೂ ಇಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಭಾರತದ ಜಾಗತಿಕ ಪ್ರಭಾವ ಹಾಗೂ ವಿದೇಶಾಂಗ ವಿಷಯಗಳ ಕುರಿತು ಪ್ಯೂ ಸಂಶೋಧನಾ ಕೇಂದ್ರ(Pew Research Center) ಕೈಗೊಂಡ ಅಧ್ಯಯನದಲ್ಲಿ ಈ ವಿಷಯ ಬಹಿರಂಗವಾಗಿದೆ. ವಿಶ್ವದಲ್ಲಿ ಭಾರತದ ಪ್ರಭಾವ ಹೆಚ್ಚಾಗಿದೆ ಎಂದು ಭಾರತದ ಶೇ.68 ಜನರು ಅಭಿಪ್ರಾಯಪಟ್ಟರೆ, ಸಮೀಕ್ಷೆ ಕೈಗೊಂಡ 19 ರಾಷ್ಟ್ರಗಳ ಪೈಕಿ ಶೇ.28 ವಯಸ್ಕರು ಮಾತ್ರ ಹೌದು ಹೆಚ್ಚಿದೆ ಎಂದು ಹೇಳಿದ್ದಾರೆ. ಇದೇ ವೇಳೆ, ಪಿಎಂ ನರೇಂದ್ರ ಮೋದಿ (PM Narendra Modi) ಅವರು ಸರಿಯಾದ ಕೆಲಸಗಳನ್ನು ಮಾಡುತ್ತಾರೆಂದು ಶೇ.79 ಭಾರತೀಯರ ವಿಶ್ವಾಸ ಹೊಂದಿದ್ದರೆ, 12 ದೇಶಗಳಲ್ಲಿ ಶೇ.37 ಮಾತ್ರ ಆ ವಿಶ್ವಾಸ ಹೊಂದಿದ್ದಾರೆ(Pew Survey).
ಇದೇ ವೇಳೆ, ಹೆಚ್ಚಿನ ದೇಶಗಳು ಭಾರತದ ಕಡೆಗೆ ಧನಾತ್ಮಕವಾಗಿ ವಾಲುತ್ತಿವೆ. 23 ದೇಶಗಳಲ್ಲಿ ಸರಾಸರಿ ಶೇ.46 ವಯಸ್ಕರು ಸಾಮಾನ್ಯವಾಗಿ ಭಾರತದ ಬಗ್ಗೆ ಅನುಕೂಲಕರವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದದಾರೆ. ಶೇ.34 ಜನರು ಮಾತ್ರ ನಕಾರಾತ್ಮಕ ಭಾವನೆಯನ್ನು ಹೊಂದಿದ್ದಾರೆ. ಸಮೀಕ್ಷೆನ ನಡೆಸಿದ ದೇಶಗಳ ಪೈಕಿ ಇಸ್ರೇಲ್‌ನಲ್ಲಿ ಭಾರತದೆಡೆಗೆ ಅತಿ ಹೆಚ್ಚು ಧನಾತ್ಮಕ ರೇಟಿಂಗ್ ನೀಡಿದ್ದಾರೆ.
ಈ ಸಮೀಕ್ಷೆಯನ್ನು ಈ ವರ್ಷದ ಫೆಬ್ರವರಿ ಮತ್ತು ಮೇ 22ರ ನಡುವೆ ನಡೆಸಲಾಗಿದೆ. ಭಾರತದ ನವದೆಹಲಿಯಲ್ಲಿ ಜಿ20 ಶೃಂಗ ನಡೆಯಲಿರುವ ವಾರದ ಮೊದಲೇ ಈ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಭಾರತವು ಸೇರಿದಂತೆ 24 ದೇಶಗಳ 30861 ಜನರನ್ನು ಮಾತನಾಡಿಸಿ ಸಮೀಕ್ಷೆಯನ್ನು ಸಿದ್ಧಪಡಿಸಲಾಗಿದೆ.
ಭಾರತವನ್ನು ಜಗತ್ತು ಹೇಗೆ ನೋಡುತ್ತದೆ?
ಭಾರತದ ಬಗ್ಗೆ ಜಗತ್ತಿನೆಲ್ಲೆಡೆ ಉತ್ತಮ ಅಭಿಪ್ರಾಯವೇ ಇದೆ. ಅಮೆರಿಕನ್ನರು, ಜಪಾನಿಗರು, ಆಸ್ಟ್ರೇಲಿಯನ್ಸ್ ಧನಾತ್ಮಕ ದೃಷ್ಟಿಕೋನ ಹೊಂದಿದ್ದಾರೆ. ಇನ್ನು ಆಫ್ರಿಕಾ ಖಂಡದ ಕೆನ್ಯಾ, ನೈಜೇರಿಯಾ ಕೂಡ ಒಳ್ಳೆಯ ಅಭಿಪ್ರಾಯವನ್ನು ಹೊಂದಿದೆ. ಆದರೆ, ದಕ್ಷಿಣ ಆಫ್ರಿಕಾದ ಜನರಲ್ಲಿ ಭಾರತದ ಬಗ್ಗೆ ಅಂಥ ಒಲವಿಲ್ಲ. ಲ್ಯಾಟಿನ್ ಅಮೆರಿಕದಲ್ಲಿ ಮೆಕ್ಸೆಕೋದಲ್ಲಿ ಮಾತ್ರ ಭಾರತ ಹೆಚ್ಚು ಪ್ರಿಯವಾಗಿದೆ. ಬ್ರೆಜಿಲ್ ಮತ್ತು ಅರ್ಜೆಂಟೀನಾ ಜನರು ಭಾರತದ ಬಗ್ಗೆ ಋಣಾತ್ಮಕ ಭಾವನೆ ಹೊಂದಿದ್ದಾರೆ.
ಈ ಸುದ್ದಿಯನ್ನೂ ಓದಿ: Narendra Modi: ಮೋದಿಯನ್ನು ಬಾಸ್ ಎಂದ ಆಸ್ಟ್ರೇಲಿಯಾ ಪ್ರಧಾನಿ; ಅಮೆರಿಕ ರಾಕ್‌ಸ್ಟಾರ್ ಜನಪ್ರಿಯತೆಗೆ ಹೋಲಿಕೆ
ಮೋದಿ ಬಗ್ಗೆ ಏನು ಹೇಳುತ್ತದೆ ಜಗತ್ತು?
12 ರಾಷ್ಟ್ರಗಳಲ್ಲಿನ ಹಿರಿಯರಿಗೆ ಮೋದಿ ಕುರಿತು ಅಭಿಪ್ರಾಯ ತಿಳಿಸುವಂತೆ ಕೇಳಲಾಯಿತು. ಪೈಕಿ ಶೇ.40 ಜನರು, ಜಾಗತಿಕ ವ್ಯವಹಾರಗಳಲ್ಲಿ ಭಾರತದ ಪ್ರಧಾನಿ ಒಳ್ಳೆಯ ಕೆಲಸ ಮಾಡುತ್ತಾರೆಂಬುದಕ್ಕೆ ನಂಬಿಕೆ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಶೇ.37ರಷ್ಟು ಜನ ನಂಬಿಕೆ ಹೊಂದಿದ್ದಾರೆ. ಅಮೆರಿಕದಲ್ಲಿ ಶೇ.37 ಜನರಿಗೆ ಮೋದಿ ಮೇಲೆ ಭರವಸೆ ಇಲ್ಲ. ಶೇ.40 ಜನರು ಮೋದಿಯ ಬಗ್ಗೆ ಕೇಳಿಯೇ ಇಲ್ಲ ಎಂದು ಹೇಳಿದ್ದಾರೆ. ಇನ್ನು ಇಸ್ರೇಲ್ ಮತ್ತು ಆಸ್ಟ್ರೇಲಿಯಾದಲ್ಲಿ ಒಳ್ಳೆಯ ಭಾವನೆ ಇದೆ. ಆದರೆ, ಕೆನ್ಯಾ ಮತ್ತು ನೈಜಿರಿಯಾ ಜನರು ಮಾತ್ರ ಮೋದಿ ಮೇಲೆ ಭಾರೀ ಪ್ರಮಾಣದ ನಂಬಿಕೆಯನ್ನು ಹೊಂದಿದ್ದಾರೆ. ಲ್ಯಾಟಿನ್ ಅಮೆರಿಕದಲ್ಲಿ ಮೋದಿ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ. ಶೇ.60ರಷ್ಟು ಮೆಕ್ಸಿಕನ್ಸ್, ಶೇ.54ರಷ್ಟು ಬ್ರೆಜಿಲಿಯನ್ಸ್ ಮತ್ತು ಶೇ.41ರಷ್ಟು ಅರ್ಜಿಂಟೀನ್ಸ್ ಮೋದಿಯ ಮೇಲೆ ನಂಬಿಕೆಯನ್ನು ಹೊಂದಿಲ್ಲ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.