Site icon Vistara News

Mohan Bhagwat: ಟೀಕೆಯ ಭರದಲ್ಲಿ ಭಾರತದ ಶಕ್ತಿಗೆ ಧಕ್ಕೆ ಕೂಡದು; ರಾಹುಲ್‌ ಗಾಂಧಿಗೆ ಮೋಹನ್‌ ಭಾಗವತ್‌ ಚಾಟಿ

Mohan Bhagwat At Nagpur RSS Programme

RSS Chief Mohan Bhagwat Speaks At Nagpur RSS Programme

ನಾಗ್ಪುರ: ಬೇರೆ ದೇಶಗಳಲ್ಲಿ ಭಾರತದ ಕುರಿತು, ಭಾರತದ ಪ್ರಜಾಪ್ರಭುತ್ವದ ಕುರಿತು ಮಾತನಾಡುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ (Mohan Bhagwat) ಪರೋಕ್ಷವಾಗಿ ಚಾಟಿ ಬೀಸಿದ್ದಾರೆ. “ಟೀಕೆ, ರಾಜಕೀಯದ ಭರದಲ್ಲಿ ಭಾರತದ ಒಗ್ಗಟ್ಟನ್ನು ಒಡೆಯಬಾರದು ಹಾಗೂ ದೇಶದ ಜನರಲ್ಲಿ ಭಿನ್ನಾಭಿಪ್ರಾಯ ಬಿತ್ತಬಾರದು” ಎಂದು ಹೇಳಿದರು.

ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ತೃತೀಯ ವರ್ಷದ ಸಂಘ ಶಿಕ್ಷಾವರ್ಗದ ಸಮಾರೋಪ ಸಮಾರಂಭದಲ್ಲಿ ಮೋಹನ್‌ ಭಾಗವತ್ ಮಾತನಾಡಿದರು. “ನಮ್ಮ ದೇಶದ ಸ್ವಾತಂತ್ರ್ಯವನ್ನು ಹಾಳು ಮಾಡಲು ಶತ್ರು ಕಾದು ಕುಳಿತಿದ್ದಾನೆ. ಆದರೆ, ನಾವು ನಮ್ಮ ಶಕ್ತಿ ಪ್ರದರ್ಶನ ಮಾಡುವ ಬದಲು, ನಾವೇ ಕಚ್ಚಾಡುತ್ತಿದ್ದೇವೆ. ನಾವು ಒಬ್ಬರ ನಡುವೆ ಒಬ್ಬರು ಸೆಣಸಾಡುತ್ತಿದ್ದೇವೆ. ರಾಜಕಾರಣಕ್ಕೂ ಒಂದು ಸೀಮೆ ಇರಬೇಕು. ಪರಸ್ಪರ ಆರೋಪ ಮಾಡಿಕೊಳ್ಳುವಷ್ಟು ರಾಜಕೀಯ ಇರಲಿ. ಆದರೆ, ದೇಶದ ಜನರ ನಡುವೆಯೇ ಭಿನ್ನಾಭಿಪ್ರಾಯ ಬಿತ್ತುವ ಕೆಲಸ ಮಾಡಬಾರದು. ನಮ್ಮ ಜಗಳದಿಂದ ಶತ್ರುಗಳ ಉತ್ಸಾಹ ಹೆಚ್ಚಾಗುತ್ತದೆ” ಎಂದು ಹೇಳಿದರು.

ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಕೇಂದ್ರೀಯ ತನಿಖಾ ಸಂಸ್ಥೆಗಳ ದುರ್ಬಳಕೆಯಾಗುತ್ತಿದೆ ಎಂದು ಹೇಳಿದ್ದರು. ಇದಕ್ಕೂ ಮೊದಲು ಕೂಡ ರಾಹುಲ್‌ ಗಾಂಧಿ ವಿದೇಶದಲ್ಲಿ ಇಂತಹ ಹೇಳಿಕೆ ನೀಡಿದ್ದರು. ಹಾಗಾಗಿ, ಮೋಹನ್‌ ಭಾಗವತ್‌ ಅವರು ರಾಹುಲ್‌ ಗಾಂಧಿ ಹೆಸರು ಉಲ್ಲೇಖಿಸದೆ ಅಸಮಾಧಾನ ವ್ಯಕ್ತಪಡಿಸಿದರು.

ನಾಗ್ಪುರದಲ್ಲಿ ನಡೆದ ತೃತೀಯ ವರ್ಷದ ಸಂಘ ಶಿಕ್ಷಾವರ್ಗದ ಸಮಾರೋಪ ಸಮಾರಂಭ

ಭಾರತದಲ್ಲಿ ಇಸ್ಲಾಂ ಸುರಕ್ಷಿತ

“ಭಾರತವು ಮಾತೃಭೂಮಿಯಾಗಿದ್ದು, ಎಲ್ಲರೂ ಇದನ್ನೇ ಅಳವಡಿಸಿಕೊಳ್ಳಬೇಕು. ಸ್ಪೇನ್‌ನಿಂದ ಹಿಡಿದು ಮಂಗೋಲಿಯಾತನಕ ಇಸ್ಲಾಂ ದಾಳಿ ನಡೆದಿದೆ. ಕಾಲದ ನಂತರ ಆಕ್ರಮಣಕಾರರನ್ನು ಆಯಾ ದೇಶಗಳು ಹೊರದಬ್ಬಿದವು. ಭಾರತದಿಂದ ಬ್ರಿಟಿಷರು ಹೋದರು. ಆದರೆ, ಭಾರತದಲ್ಲೇ ಉಳಿದ ಮುಸ್ಲಿಮರು ಇಂದಿಗೂ ಸುರಕ್ಷಿತರಾಗಿದ್ದಾರೆ. ಭಾರತದಲ್ಲಿ ಇಸ್ಲಾಂ ಆಚರಣೆಯು ಸುರಕ್ಷಿತವಾಗಿದೆ. ನಾವು ಬೇರೆ ಬೇರೆ ರೀತಿ ಕಾಣಬಹುದು, ಆಚಾರ-ವಿಚಾರಗಳು ಬೇರೆ ಬೇರೆ ಇರಬಹುದು, ವಿದೇಶಿ ಆಚರಣೆಗಳು ಕೂಡ ಇರಬಹುದು. ಆದರೂ, ಇದನ್ನು ಹೊರತಾಗಿ ನಾವು ಒಗ್ಗಟ್ಟಾಗಿ ಇರಬೇಕು. ನಮ್ಮ ವೈವಿಧ್ಯತೆಯ ಮಧ್ಯೆಯೂ ಏಕತೆಯನ್ನು ಮೆರೆಯಬೇಕು. ಇದು ನಮ್ಮ ಸಂಸ್ಕೃತಿಯಾಗಿದ್ದು, ಇದನ್ನು ಮರೆಯಬಾರದು” ಎಂದು ಹೇಳಿದರು.

ಭಾಗವತ್‌ ಭಾಷಣದ ವಿಡಿಯೊ

ಇದನ್ನೂ ಓದಿ: Mohan Bhagwat: ಭಾರತ ವಿಶ್ವಗುರು ಆಗುವುದನ್ನು ತಡೆಯಲು ಷಡ್ಯಂತ್ರ: ಮೋಹನ್‌ ಭಾಗವತ್‌

ಕೇಂದ್ರ ಸರ್ಕಾರಕ್ಕೆ ಮೆಚ್ಚುಗೆ

ಕೊರೊನಾ ನಿರ್ವಹಣೆ, ಜಿ-20 ಸಭೆಯ ಅಧ್ಯಕ್ಷತೆ, ಹೊಸ ಸಂಸತ್‌ ಭವನ ನಿರ್ಮಾಣ ಸೇರಿ ಹಲವು ವಿಷಯಗಳನ್ನು ಪ್ರಸ್ತಾಪಿಸಿ ಕೇಂದ್ರ ಸರ್ಕಾರಕ್ಕೆ ಆರ್‌ಎಸ್‌ಎಸ್‌ ಮೆಚ್ಚುಗೆ ಸೂಚಿಸಿತು. “ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತವು ವಿಶ್ವದಲ್ಲಿಯೇ ಮಾದರಿಯಾಗಿ ನಿರ್ವಹಣೆ ಮಾಡಿದೆ. ಜಿ-20 ಸಭೆಗಳ ಅಧ್ಯಕ್ಷತೆ ಭಾರತಕ್ಕೆ ಸಿಕ್ಕಿದೆ. ಇನ್ನು, ನೂತನ ಸಂಸತ್‌ ಭವನ, ಅಲ್ಲಿರುವ ಚಿತ್ರಗಳನ್ನು ನೋಡಿದರೆ ದೇಶದಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗುತ್ತಿದೆ. ಇದರಿಂದ ಜನಸಾಮಾನ್ಯರಿಗೆ ಸಂತಸ ಎನಿಸುತ್ತದೆ” ಎಂದು ಮೋಹನ್‌ ಭಾಗವತ್‌ ಹೇಳಿದರು. ಸಮಾರೋಪ ಕಾರ್ಯಕ್ರಮದಲ್ಲಿ ಕರ್ನಾಟಕದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಭಾಗಿಯಾಗಿದ್ದರು.

ದೇಶದ ಮತ್ತಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Exit mobile version