ನವದೆಹಲಿ: 2023-24ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದ (2nd Quarter) ಒಟ್ಟು ರಾಷ್ಟ್ರೀಯ ಉತ್ಪನ್ನದ ಮಾಹಿತಿಯನ್ನು (GDP Data) ನವೆಂಬರ್ 30ರಂದು ಬಿಡುಗಡೆ ಮಾಡಲಾಗುತ್ತದೆ. ಜಿಡಿಪಿ ಬೆಳವಣಿಗೆ ಕುರಿತು ರಾಷ್ಟ್ರೀಯ ಅಂಕಿ-ಅಂಶ ಕಚೇರಿಯು (National Statistical Office) ಡೇಟಾ ಬಿಡುಗಡೆ ಮಾಡಲಿದೆ. ಕೊರೊನಾ ಬಿಕ್ಕಟ್ಟಿನ ನಂತರ ದೇಶದ ಆರ್ಥಿಕ ವ್ಯವಸ್ಥೆ ಸರಿದಾರಿಗೆ ಬರುತ್ತಿರುವ ಕಾರಣ ಎರಡನೇ ತ್ರೈಮಾಸಿಕದ ಮಾಹಿತಿಯು ಹೆಚ್ಚು ಕುತೂಹಲ ಹುಟ್ಟಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಗವರ್ನರ್ ಶಕ್ತಿಕಾಂತ ದಾಸ್ ಅವರು ಈಗಾಗಲೇ ಎರಡನೇ ತ್ರೈಮಾಸಿಕದ ಮಾಹಿತಿಯು ಎಲ್ಲರನ್ನೂ ಅಚ್ಚರಿಗೊಳಿಸುತ್ತದೆ ಎಂದಿದ್ದಾರೆ. ಹಾಗೆಯೇ, ಭಾರತದ ಜಿಡಿಪಿ ಬೆಳವಣಿಗೆಯು ಎರಡನೇ ತ್ರೈಮಾಸಿಕದಲ್ಲಿ ಶೇ.6.5ರಿಂದ ಶೇ.7.1ರಷ್ಟು ಇರಲಿದೆ ಎಂದು ಅಂದಾಜಿಸಿದ್ದಾರೆ. ಹಾಗಾಗಿ, ಈ ಬಾರಿಯ ಡೇಟಾ ಸಕಾರಾತ್ಮಕವಾಗಿರಲಿದೆ ಎಂಬುದು ಎಲ್ಲರ ನಿರೀಕ್ಷೆಯಾಗಿದೆ.
ತಜ್ಞರು, ಬ್ಯಾಂಕ್‌ಗಳ ವರದಿ ಏನು?
ರೇಟಿಂಗ್ ಏಜನ್ಸಿಯಾದ ಇಕ್ರಾ ಸಂಸ್ಥೆಯ ತಜ್ಞರ ಪ್ರಕಾರ ಭಾರತದ ಜಿಡಿಪಿಯು ಎರಡನೇ ತ್ರೈಮಾಸಿಕದಲ್ಲಿ ಶೇ.7ರಷ್ಟು ಇರಲಿದೆ. ಇನ್ನು ಭಾರತೀಯ ಸ್ಟೇಟ್ ಬ್ಯಾಂಕ್ (SBI) ಶೇ.6.9ರಿಂದ ಶೇ.7.1ರಷ್ಟು ಜಿಡಿಪಿ ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಿದೆ. ಅದೇ ರೀತಿ, ಬಾರ್‌ಕ್ಲೇಸ್ ಇಂಡಿಯಾ ಶೇ.6.5ರಷ್ಟು ಇರಲಿದೆ ಎಂದು ಅಂದಾಜಿಸಿದೆ. ಎಲ್ಲ ವರದಿಗಳು ಸಕಾರಾತ್ಮಕ ಬೆಳವಣಿಗೆಯನ್ನು ಬಿಂಬಿಸುತ್ತಿವೆ.
“ದೇಶಾದ್ಯಂತ ಮಳೆ ಕೊರತೆ ಆಗಿದೆ. ಆದರೂ, ನಿರ್ಮಾಣ ಚಟುವಟಿಕೆಗಳು ಹೆಚ್ಚಾಗಿ ನಡೆದಿವೆ. ಇದರಿಂದಾಗಿ ಜಿಡಿಪಿ ಬೆಳವಣಿಗೆ ದರ ಸಕಾರಾತ್ಮಕವಾಗಿರಲಿದೆ” ಎಂದು ಇಕ್ರಾ ತಿಳಿಸಿದೆ. “ದೇಶೀಯ ಬಳಕೆ ಹೆಚ್ಚಾಗಿದೆ. ಯುಟಿಲಿಟಿ ಸೆಕ್ಟರ್‌ನಲ್ಲಿ ಗಮನಾರ್ಹ ಏಳಿಗೆಯಾಗಿದೆ. ಹಾಗಾಗಿ, ಜಿಡಿಪಿ ಬೆಳವಣಿಗೆ ಕುರಿತು ವಿಶ್ವಾಸವಿದೆ” ಎಂದು ಬಾರ್‌ಕ್ಲೇ ವರದಿ ಹೇಳಿದೆ. ಸಾಗಣೆ, ಸೇವಾ ವಲಯದ ಬೆಳವಣಿಗೆಯು ವಿಶ್ವಾಸ ಹೆಚ್ಚಿಸಲು ಕಾರಣ ಎಂದು ತಿಳಿಸಿದೆ. ಹೀಗೆ ಹಲವು ವರದಿಗಳು ಜಿಡಿಪಿ ಬೆಳವಣಿಗೆಯ ಕುರಿತು ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿವೆ. ಹಾಗಾಗಿ, ಈ ಬಾರಿಯ ಜಿಡಿಪಿ ಡೇಟಾ ನಿರೀಕ್ಷೆ ಹೆಚ್ಚಿಸಿದೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: 4 ಟ್ರಿಲಿಯನ್ ಡಾಲರ್ ಜಿಡಿಪಿ; ಭಾರತದ ಅಭಿವೃದ್ಧಿಯ ದ್ಯೋತಕ