Site icon Vistara News

Unemployment: ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ ಭಾರತದ ನಿರುದ್ಯೋಗ ದರ ಏರಿಕೆ!

India's unemployment rate hits three-month high

ನವದೆಹಲಿ: ಭಾರತೀಯ ಆರ್ಥಿಕತೆಯ ಮೇಲ್ವಿಚಾರಣಾ ಕೇಂದ್ರ (CMIE) ವರದಿಯನ್ನು ಬಿಡುಗಡೆ ಮಾಡಿದ್ದು, ಭಾರತದಲ್ಲಿ ನಿರುದ್ಯೋಗ (Unemployment) ಪ್ರಮಾಣದ ಹೆಚ್ಚಳವಾಗುತ್ತಿರುವ ಅಂಶವನ್ನು ಕಂಡುಕೊಂಡಿದೆ. ಮಾರ್ಚ್‌ ತಿಂಗಳಲ್ಲಿ ಕಳೆದ ಮೂರು ತಿಂಗಳಲ್ಲೇ ಗರಿಷ್ಠ ನಿರುದ್ಯೋಗ ದರ ದಾಖಲಾಗಿದೆ. ಭಾರತವೂ ಸೇರಿದಂತೆ ಜಾಗತಿಕ ಉದ್ಯೋಗ ಕಡಿತ ಪ್ರವೃತ್ತಿಯಿಂದಾಗಿ ಬೆಳವಣಿಗೆ ನಡೆದಿದೆ. ಈಗಾಗಲೇ ಬೃಹತ್ ಕಂಪನಿಗಳು ಉದ್ಯೋಗಿಗಳನ್ನು ಮನೆಗೆ ಕಳುಹಿಸಿವೆ ಮತ್ತು ಈ ಹಾದಿಯನ್ನು ಇನ್ನಷ್ಟು ಕಂಪನಿಗಳು ತುಳಿಯುವ ಸಾಧ್ಯತೆಗಳಿವೆ.

2022ರ ಡಿಸೆಂಬರ್‌ನಲ್ಲಿ ಗರಿಷ್ಠ ಶೇ.30ರಷ್ಟಿದ್ದ ನಿರುದ್ಯೋಗ ಪ್ರಮಾಣವು 2023ರ ಜನವರಿಯಲ್ಲಿ ಶೇ.7.14ಕ್ಕೆ ಕುಸಿತವಾಗಿತ್ತು. ಬಳಿಕ ಫೆಬ್ರವರಿಯಲ್ಲಿನಿರುದ್ಯೋಗ ಪ್ರಮಾಣವು ಮತ್ತೆ ಹೆಚ್ಚಳವಾಗಿ, ಮಾರ್ಚ್‌ ತಿಂಗಳಲ್ಲಿ ಶೇ.7.8ಕ್ಕೆ ಏರಿಕೆಯಾಗಿದೆ. ನಗರ ಪ್ರದೇಶದಲ್ಲಿ ನಿರುದ್ಯೋಗ ದರ ಶೇ.8.4ಕ್ಕೆ ಏರಿಕೆಯಾದರೆ, ಗ್ರಾಮೀಣ ಪ್ರದೇಶದಲ್ಲಿ ಈ ದರ ಶೇ.7.5ರಷ್ಟಿದೆ.

ಸಿಎಂಐಇ ಮ್ಯಾನೇಜಿಂಗ್ ಡೈರೆಕ್ಟರ್ ಮಹೇಶ್ ವ್ಯಾಸ್, 2023 ಮಾರ್ಚ್ ತಿಂಗಳಲ್ಲಿ ಭಾರತದ ಕಾರ್ಮಿಕ ಮಾರುಕಟ್ಟೆಯಲ್ಲಿ ಅಭಾವ ಕಂಡುಬಂದಿದೆ. ಜತೆಗೆ, ಉದ್ಯೋಗ ಕಡಿತವೇ ನಿರುದ್ಯೋಗ ಪ್ರಮಾಣ ಹೆಚ್ಚಳಕ್ಕೆ ಮುಖ್ಯವಾಗಿ ಕಾರಣವಾಗಿದೆ. ಉದ್ಯೋಗ ಕಡಿತದ ಕೊಡುಗೆ ಶೇ.39.8ರಷ್ಟಿದೆ ಎಂದು ಅವರು ಹೇಳಿದ್ದಾರೆ.

ಸಿಎಂಐಇ ಮಾಹಿತಿಯ ಪ್ರಕಾರ, ಉದ್ಯೋಗ ದರವು ಫೆಬ್ರವರಿಯಲ್ಲಿ ಶೇ.36.9ದಿಂದ ಮಾರ್ಚ್‌ನಲ್ಲಿ ಶೇ.36.7ಕ್ಕೆ ಕುಸಿದಿದೆ. ಉದ್ಯೋಗಿಗಳ ಸಂಖ್ಯೆ 409.9 ಮಿಲಿಯನ್‌ನಿಂದ 407.6 ಮಿಲಿಯನ್‌ಗೆ ಇಳಿಕೆಯಾಗಿದೆ. ಇದೇ ವೇಳೆ, ಮಾರ್ಚ್ ‌ತಿಂಗಳಲ್ಲಿ ಗರಿಷ್ಠ ನಿರುದ್ಯೋಗ ಪ್ರಮಾಣ ಹರ್ಯಾಣದಲ್ಲಿ ಕಂಡು ಬಂದಿದೆ. ಹರ್ಯಾಣ ಶೇ.26.8 ನಿರುದ್ಯೋಗ ದರವನ್ನು ದಾಖಲಿಸಿದೆ. ನಂತರದ ಸ್ಥಾನದಲ್ಲಿ ರಾಜಸ್ಥಾನ(ಶೇ.26.6), ಜಮ್ಮು ಮತ್ತುಕಾಶ್ಮೀರ(ಶೇ.23.1), ಸಿಕ್ಕಿಮ್(ಶೇ.20.7), ಬಿಹಾರ(ಶೇ.17.6) ಮತ್ತು ಜಾರ್ಖಂಡ್‌(ಶೇ.17.5) ರಾಜ್ಯಗಳಿವೆ.

ಫೆಬ್ರವರಿ ತಿಂಗಳಲ್ಲಿ ಎಷ್ಟಿತ್ತು ನಿರುದ್ಯೋಗ ದರ?

ಭಾರತದಲ್ಲಿ ನಿರುದ್ಯೋಗದ ಪ್ರಮಾಣ ಫೆಬ್ರವರಿಯಲ್ಲಿ 7.14%ರಿಂದ 7.45%ಕ್ಕೆ ಏರಿಕೆಯಾಗಿದೆ ಎಂದು ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಎಕಾನಮಿ ( Centre for monitoring Indian economy) ತಿಳಿಸಿದೆ.

ಇದನ್ನೂ ಓದಿ: Karnataka Election: ಎಎಪಿಯಿಂದ 300 ಯೂನಿಟ್‌ ವಿದ್ಯುತ್‌ ಉಚಿತ, 3000 ರೂ. ನಿರುದ್ಯೋಗ ಭತ್ಯೆ, ಒಪಿಎಸ್‌ ಜಾರಿ ಗ್ಯಾರಂಟಿ

ನಗರ ಮಟ್ಟದ ನಿರುದ್ಯೋಗ ದರ 8.55ರಿಂದ 7.93%ಕ್ಕೆ ಇಳಿಕೆಯಾಗಿದೆ. ಆದರೆ ಗ್ರಾಮೀಣ ನಿರುದ್ಯೋಗ ದರ 6.48%ರಿಂದ 7.23%ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ. ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಕಡಿತ ಸಂಭವಿಸಿದೆ. ಸ್ಟಾರ್ಟಪ್‌ ವಲಯದಲ್ಲಿ ಕೂಡ ಉದ್ಯೋಗ ನಷ್ಟ ಸಂಭವಿಸಿದೆ.

Exit mobile version