Site icon Vistara News

IndiGo Flight: ಇಂಡಿಗೊ ವಿಮಾನದಲ್ಲಿ ಮತ್ತೊಂದು ಎಡವಟ್ಟು; ನಿಂತುಕೊಂಡೇ ಪ್ರಯಾಣಿಸಲು ಮುಂದಾದ ಪ್ಯಾಸೆಂಜರ್‌!

Bomb Threat

Bomb Threat

ಮುಂಬೈ: ಬಸ್‌, ರೈಲಿನಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿರುವುದನ್ನು ನೋಡಿದ್ದೇವೆ. ಹಲವರು ಸೀಟು ಸಿಗದೆ ನಿಂತುಕೊಂಡೇ ಪ್ರಯಾಣಿಸುವುದನ್ನು ಗಮನಿಸಿದ್ದೇವೆ. ಇದೀಗ ವಿಮಾನದ ಸರದಿ. ಅಪರೂಪದ ಪ್ರಸಂಗವೊಂದರಲ್ಲಿ ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (CSMIA)ದಿಂದ ವಾರಣಾಸಿಗೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನೊಬ್ಬ ಸೀಟು ಇಲ್ಲದೆ ನಿಂತು ಪ್ರಯಾಣಿಸಲು ಮುಂದಾದ ಘಟನೆ ನಡೆದಿದೆ. ಕೊನೆಯ ಕ್ಷಣದಲ್ಲಿ ಇದನ್ನು ಗಮನಿಸಿದ ಸಿಬ್ಬಂದಿ ವಿಮಾನವನ್ನು ನಿಲ್ಲಿಸಿ ಆತನನ್ನು ಕೆಳಗೆ ಇಳಿಸಿದ್ದಾರೆ. ಮುಂಬೈಯಿಂದ ವಾರಣಾಸಿಗೆ ತೆರಳುತ್ತಿದ್ದ ಇಂಡಿಗೊ ವಿಮಾನ (IndiGo Flight)ದಲ್ಲಿ ಈ ಘಟನೆ ನಡೆದಿದೆ.

ಮಂಗಳವಾರ (ಮೇ 21) ಟೇಕ್ ಆಫ್ ಆಗುವ ಮೊದಲು ಓವರ್ ಬುಕ್ ಮಾಡಿದ್ದ ಪ್ರಯಾಣಿಕನನ್ನು ಸಿಬ್ಬಂದಿ ಗುರುತಿಸಿದ್ದು, ನಂತರ ಆತನನ್ನು ಇಳಿಸಿ ಸ್ವಲ್ಪ ತಡವಾಗಿ ವಿಮಾನ ಹೊರಡಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ.

ಪ್ರಕರಣದ ವಿವರ

ಮಂಗಳವಾರ ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 7.50ಕ್ಕೆ ಇಂಡಿಗೊ 6ಇ 6543 (6E 6543) ವಿಮಾನ ಹಾರಲು ಸಿದ್ಧತೆ ನಡೆಸಿತ್ತು. ಇನ್ನೇನು ಹಾರಾಟ ನಡೆಸಬೇಕು ಎನ್ನುವಷ್ಟರಲ್ಲಿ ವಿಮಾನದ ಹಿಂಭಾಗದಲ್ಲಿ ಪುರುಷ ಪ್ರಯಾಣಿಕರೊಬ್ಬ ನಿಂತಿರುವ ಬಗ್ಗೆ ಸಿಬ್ಬಂದಿ ಪೈಲಟ್‌ಗೆ ಎಚ್ಚರಿಕೆ ನೀಡಿದ್ದರು. ಬಳಿಕ ವಿಮಾನವನ್ನು ನಿಲ್ದಾಣದಲ್ಲೇ ಲ್ಯಾಂಡ್‌ ಮಾಡಲಾಯಿತು.

ಅಧಿಕಾರಿಗಳು ಹೇಳೋದೇನು?

ಘಟನೆಯ ಬಗ್ಗೆ ಮಾತನಾಡಿದ ಇಂಡಿಗೊ ಏರ್‌ಲೈನ್ಸ್‌ ವಕ್ತಾರರು, “ಮುಂಬೈಯಿಂದ ವಾರಣಾಸಿಗೆ ತೆರಳುವ 6ಇ 6543 ವಿಮಾನದ ಪ್ರಯಾಣಿಕರ ಬೋರ್ಡಿಂಗ್ ಪ್ರಕ್ರಿಯೆಯಲ್ಲಿ ದೋಷ ಸಂಭವಿಸಿದೆ. ವಿಮಾನದಲ್ಲಿ ನಿಂತಿದ್ದ ಪ್ರಯಾಣಿಕನಿಗೆ ಮೊದಲೇ ಬೇರೋಬ್ಬರು ಕಾಯ್ದಿರಿಸಿದ ಆಸನವನ್ನು ನಿಗದಿಪಡಿಸಿದ್ದು ಎಡವಟ್ಟಿಗೆ ಕಾರಣ. ವಿಮಾನ ಹೊರಡುವ ಮೊದಲು ದೋಷವನ್ನು ಗಮನಿಸಲಾಯಿತು ಮತ್ತು ನಿಂತಿದ್ದ ಪ್ರಯಾಣಿಕರನ್ನು ವಿಮಾನದಿಂದ ಇಳಿಸಲಾಯಿತು. ಇದರಿಂದ ವಿಮಾನದ ನಿರ್ಗಮಕ್ಕೆ ಸ್ವಲ್ಪ ವಿಳಂಬವಾಯಿತು. ಇಂಡಿಗೊ ತನ್ನ ಕಾರ್ಯಾಚರಣೆಯ ಪ್ರಕ್ರಿಯೆಗಳನ್ನು ಬಲಪಡಿಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಘಟನೆಗೆ ವಿಷಾಧ ವ್ಯಕ್ತಪಡಿಸುತ್ತದೆʼʼ ಎಂದು ಹೇಳಿದ್ದಾರೆ.

ಸೀಟು ಖಾಲಿ ಇರುವುದನ್ನು ತಪ್ಪಿಸಲು ಕೆಲವೊಮ್ಮೆ ವಿಮಾನಯಾನ ಸಂಸ್ಥೆಗಳು ಓವರ್ ಬುಕ್ ಮಾಡುತ್ತವೆ. ಹೀಗೆ ಟಿಕೆಟ್‌ ಓವರ್‌ ಬುಕ್‌ ಮಾಡಿದ್ದರಿಂದ ಈ ಎಡವಟ್ಟು ನಡೆದಿದೆ ಎಂದು ಮೂಲಗಳು ತಿಳಿಸಿವೆ. ಕೊನೆಗೆ ಈ ವಿಮಾನ 8.41ಕ್ಕೆ ನಿಲ್ದಾಣದಿಂದ ಹೊರಟಿದೆ.

ಇದನ್ನೂ ಓದಿ: Turbulence: ಟರ್ಬುಲೆನ್ಸ್‌ಗೆ ತುತ್ತಾದ ವಿಮಾನ; ಒಬ್ಬ ಪ್ರಯಾಣಿಕ ಸಾವು, 30 ಮಂದಿಗೆ ಗಾಯ, ಇಲ್ಲಿದೆ ಭೀಕರ ವಿಡಿಯೊ

ನಿಯಮ ಏನು ಹೇಳುತ್ತದೆ?

ಈ ಹಿಂದೆ ಬುಕ್‌ ಮಾಡಲಾದ ಟಿಕೆಟ್‌ನಲ್ಲಿ ಬೋರ್ಡಿಂಗ್ ನಿರಾಕರಿಸಿದ್ದಕ್ಕಾಗಿ ವಿಮಾನಯಾನ ಸಂಸ್ಥೆಗಳಿಗೆ ದಂಡ ವಿಧಿಸಿದ ಘಟನೆಯೂ ನಡೆದಿತ್ತು. ಇನ್ನು 2016ರ ನಿಯಮದ ಪ್ರಕಾರ, ನಿಗದಿತ ವಿಮಾನದ ನಿರ್ಗಮನದ ಒಂದು ಗಂಟೆಯೊಳಗೆ ಪ್ರಯಾಣಿಕರಿಗೆ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಿದರೆ ವಿಮಾನಯಾನ ಸಂಸ್ಥೆ ಪರಿಹಾರ ನೀಡಬೇಕಾಗಿಲ್ಲ. ಆದಾಗ್ಯೂ ವಿಮಾನ ಯಾನವು ಬೋರ್ಡಿಂಗ್ ನಿರಾಕರಿಸಿದ 24 ಗಂಟೆಗಳ ಒಳಗೆ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಿದ್ದರೆ ವಿಮಾನಯಾನ ಇಂಧನ ಶುಲ್ಕದ ಜತೆಗೆ ಕಾಯ್ದಿರಿಸಿದ ಒನ್-ವೇ ಮೂಲ ಶುಲ್ಕದ ಶೇ. 200ರಷ್ಟು ಮೊತ್ತವನ್ನು ಪಾವತಿಸಬೇಕು. ಇದರ ಗರಿಷ್ಠ ಮೊತ್ತ 10,000 ರೂ.

Exit mobile version