ನವದೆಹಲಿ: ರಿಯಾದ್‌ಗೆ ತೆರಳುತ್ತಿದ್ದ ಇಂಡಿಗೊ ವಿಮಾನ (IndiGo Flight)ದ ಶೌಚಾಲಯದೊಳಗೆ ಬೀಡಿ ಸೇದುತ್ತಿದ್ದ 42 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ದೆಹಲಿ-ಮುಂಬೈ-ರಿಯಾದ್‌ನ ಈ ವಿಮಾನ (Delhi-Mumbai-Riyadh flight) ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣ ಆತನನ್ನು ವೈಮಾನಿಕ ಕಾಯಿದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಯಿತು.
ಆರೋಪಿ ಸೆಕ್ಯುರಿಟಿ ಕಣ್ಣು ತಪ್ಪಿಸಿ ಲೈಟರ್ ಮತ್ತು ಬೀಡಿಯನ್ನು ವಿಮಾನದೊಳಕ್ಕೆ ಸಾಗಿಸಿದ್ದ ವಿಚಾರವೇ ಅಧಿಕಾರಿಗಳಿಗೆ ಕಳವಳವನ್ನುಂಟು ಮಾಡಿದೆ. ಆರೋಪಿಯನ್ನು ಮೊಹಮ್ಮದ್ ಫಕ್ರುದ್ದೀನ್ ಮೊಹಮ್ಮದ್ ಅಮ್ಮುರುದ್ದೀನ್ ಎಂದು ಗುರುತಿಸಲಾಗಿದ್ದು, ಈತ ಮುಂಬೈ ಮೂಲಕ ರಿಯಾದ್‌ಗೆ ತೆರಳುತ್ತಿದ್ದ.
“ಅಮ್ಮುರುದ್ದೀನ್ ವಿಮಾನದ ಶೌಚಾಲಯದಿಂದ ನಿರ್ಗಮಿಸಿದ ನಂತರ ವಿಮಾನದ ಭದ್ರತಾ ಅಧಿಕಾರಿಯೊಬ್ಬರು ಹೊಗೆ ಹರಡಿರುವುದನ್ನು ಗಮನಿಸಿದರು. ಈ ವೇಳೆ ಆತ ಬೀಡಿ ಸೇದಿರುವ ವಿಚಾರ ಬೆಳಕಿಗೆ ಬಂದಿದೆ. ವಿಮಾನವು ಮುಂಬೈನಲ್ಲಿ ಇಳಿದ ನಂತರ, ಅಮ್ಮುರುದ್ದೀನ್‌ನನ್ನು ಕ್ಯಾಬಿನ್ ಸಿಬ್ಬಂದಿ ವಶಕ್ಕೆ ತೆಗೆದುಕೊಂಡು ಪೊಲೀಸರಿಗೆ ಹಸ್ತಾಂತರಿಸಿದರುʼʼ ಎಂದು ಅಧಿಕಾರಿ ತಿಳಿಸಿದ್ದಾರೆ. ಅಮ್ಮುರುದ್ದೀನ್ ರಿಯಾದ್‌ನಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ ಎಂದು ವಿಮಾನಯಾನ ಸಿಬ್ಬಂದಿ ಹೇಳಿದ್ದಾರೆ.
“ವಿಚಾರಣೆಯ ವೇಳೆ ಆತ ತನ್ನ ಪ್ಯಾಂಟ್ ಜೇಬಿನಲ್ಲಿ ಬೀಡಿ ಮತ್ತು ಲೈಟರ್ ಅನ್ನು ಬಚ್ಚಿಟ್ಟು ದೆಹಲಿ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯನ್ನು ಯಶಸ್ವಿಯಾಗಿ ದಾಟಿರುವುದನ್ನು ಬಾಯಿ ಬಿಟ್ಟಿದ್ದಾನೆ. ಈ ವೇಳೆ ಔದ್ರತಾ ಸಿಬ್ಬಂದಿಯ ಗಮನಕ್ಕೆ ಇದು ಬರದಿರುವುದು ಅಚ್ಚರಿ ಮೂಡಿಸಿದೆ” ಎಂದು ಮೂಲಗಳು ತಿಳಿಸಿವೆ.
ಪ್ರಕರಣ ದಾಖಲು
ಅಮ್ಮುರುದ್ದೀನ್ ವಿರುದ್ಧ ಭಾರತೀಯ ದಂಡ ಸಂಹಿತೆ(ಐಪಿಸಿ)ಯ 336 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯ) ಮತ್ತು ವಿಮಾನ ಕಾಯ್ದೆ ಸೇರಿದಂತೆ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆತನನ್ನು ಸ್ಥಳೀಯ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ.
ಹಿಂದೆಯೂ ನಡೆದಿತ್ತು
ಇಂಡಿಗೋ ವಿಮಾನದಲ್ಲಿ ಬೀಡಿ ಸೇದಿ ಸಿಕ್ಕಿಬಿದ್ದ ಘಟನೆ ಈ ಹಿಂದೆಯೂ ನಡೆದಿತ್ತು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೋಲ್ಕತ್ತಾದಿಂದ ಬೆಂಗಳೂರಿಗೆ ಆಗಮಿಸಿದ್ದ ಇಂಡಿಗೋ ವಿಮಾನದ ಶೌಚಾಲಯದಲ್ಲಿ ಬೀಡಿ ಸೇದುತ್ತಿದ್ದಾಗ ಪ್ರಯಾಣಿಕ ಸಿಕ್ಕಿಬಿದ್ದಿದ್ದ. ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿದ ತಕ್ಷಣ ಆರೋಪಿ ಜಿ.ಕರುಣಾಕರನ್‌ನನ್ನು ವೈಮಾನಿಕ ಕಾಯಿದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು.
ಇದನ್ನೂ ಓದಿ: IndiGo: ಏರ್ ಇಂಡಿಯಾ ದಾಖಲೆಯನ್ನೇ ಉಡೀಸ್ ಮಾಡಿದ ಇಂಡಿಗೋ! ಏನಿದು ದಾಖಲೆ?
ಇಂತಹದೇ ಪ್ರಕರಣ ಕೆಲವು ದಿನಗಳ ಹಿಂದೆ ಆಕಾಸ್ ಏರ್‌ಲೈನ್ಸ್‌ನಲ್ಲಿಯೂ ವರದಿಯಾಗಿತ್ತು. ಅಹ್ಮದಾಬಾದ್‌ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಅಕಾಸ ಏರ್‌ಲೈನ್ಸ್‌ನಲ್ಲಿ ಪ್ರಯಾಣಿಸುತ್ತಿದ್ದ 56 ವರ್ಷದ ಎಂ.ಪ್ರವೀಣ್ ಕುಮಾರ್ ಎಂಬಾತ ವಿಮಾನದೊಳಗೆ ಬೀಡಿ ಸೇದಿದ್ದ. ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತನನ್ನು ಬಂಧಿಸಲಾಗಿತ್ತು. ಕೂಲಿ ಕಾರ್ಮಿಕನಾಗಿದ್ದ ಈತ ರಾಜಸ್ಥಾನದ ಪಾಲಿ ಜಿಲ್ಲೆಯ ಮಾರ್ವಾರ್ ಜಂಕ್ಷನ್ ನಿವಾಸಿ. ಬಳಿಕ ಆತನನ್ನು ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು. ಶೌಚಾಲಯದೊಳಗೆ ಧೂಮಪಾನ ಮಾಡುತ್ತಿರುವುದನ್ನು ಸಿಬ್ಬಂದಿ ಗಮನಿಸಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ