Site icon Vistara News

IndiGo: ಇಂಡಿಗೋ ವಿಮಾನ ಪ್ರಯಾಣಿಕರಿಗೆ ಗುಡ್‌ ನ್ಯೂಸ್;‌ ಟಿಕೆಟ್‌ ದರ ಕಡಿತ

IndiGo Flight

IndiGo removes fuel charge on tickets following reduction in ATF prices

ನವದೆಹಲಿ: ಇಂಡಿಗೋ (IndiGo) ವಿಮಾನಗಳಲ್ಲಿ ಪ್ರಯಾಣಿಸುವವರಿಗೆ ಇಂಡಿಗೋ ವಿಮಾನಯಾನ ಸಂಸ್ಥೆಯ (IndiGo Airlines) ಸಂಸ್ಥೆಯು ಸಿಹಿ ಸುದ್ದಿ ನೀಡಿದೆ. ಗುರುವಾರದಿಂದಲೇ (ಜನವರಿ 4) ಜಾರಿಗೆ ಬರುವಂತೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುವವರಿಗೆ ಟಿಕೆಟ್‌ ಮೇಲಿನ ಇಂಧನ ಸುಂಕವನ್ನು (Fuel Charges) ರದ್ದುಗೊಳಿಸಲಾಗುವುದು ಎಂದು ವಿಮಾನಯಾನ ಸಂಸ್ಥೆಯು ತಿಳಿಸಿದೆ. ಇದರಿಂದಾಗಿ ಇಂಡಿಗೋ ಪ್ರಯಾಣಿಕರಿಗೆ ಟಿಕೆಟ್‌ ಬೆಲೆ ಕಡಿಮೆಯಾಗಲಿದೆ.

“ಇಂಡಿಗೋ ವಿಮಾನಯಾನ ಸಂಸ್ಥೆಯು 2023ರ ಅಕ್ಟೋಬರ್‌ನಲ್ಲಿ ಟಿಕೆಟ್‌ಗೆ ಬೆಲೆಗೆ ಇಂಧನ ಸುಂಕವನ್ನೂ ಸೇರಿಸಿತ್ತು. ಏವಿಯೇಷನ್‌ ಟರ್ಬೈನ್‌ ಫುಯೆಲ್‌ (ATF) ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಇಂಡಿಗೋ ಇಂತಹ ತೀರ್ಮಾನ ತೆಗೆದುಕೊಂಡಿತ್ತು. ಆದರೆ ಈಗ, ಟಿಕೆಟ್‌ ಬೆಲೆಯಿಂದ ಇಂಧನ ಸುಂಕವನ್ನು ಹಿಂತೆಗೆದುಕೊಳ್ಳಲಾಗಿದೆ” ಎಂದು ಇಂಡಿಗೋ ವಿಮಾನಯಾನ ಸಂಸ್ಥೆ ವಕ್ತಾರ ತಿಳಿಸಿದ್ದಾರೆ. ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಪ್ರಯಾಣಿಸುವವರಿಗೆ ಇಂಧನ ಸುಂಕದ ಹೊರೆ ಕಡಿಮೆಯಾಗಲಿದೆ.

ಕೆಲ ದಿನಗಳ ಹಿಂದಷ್ಟೇ ಏವಿಯೇಷನ್‌ ಟರ್ಬೈನ್‌ ಫುಯೆಲ್‌ ಬೆಲೆ ಇಳಿಕೆಯಾದ ಕಾರಣ ಇಂಡಿಗೋ ಸಂಸ್ಥೆಯು ಇಂಧನ ಸುಂಕ ಇಳಿಸಿದೆ ಎಂದು ತಿಳಿದುಬಂದಿದೆ. ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಇಂಡಿಗೋ ಸಂಸ್ಥೆಯ ನಿವ್ವಳ ಲಾಭವು 189 ಕೋಟಿ ರೂ. ಇದೆ. ವಿಮಾನಯಾನ ಸಂಸ್ಥೆಯ ಲಾಭವು ಶೇ.20.6ರಷ್ಟು ಜಾಸ್ತಿಯಾಗಿದ್ದು, ಒಟ್ಟು 15,502 ಕೋಟಿ ರೂ. ತಲುಪಿದೆ. ಸದ್ಯ ಇಂಡಿಗೋ ಬಳಿ 334 ವಿಮಾನಗಳಿವೆ. ಎಂಜಿನ್‌ ಸಮಸ್ಯೆ ಹಾಗೂ ಇಂಧನ ಬೆಲೆಯೇರಿಕೆ ಸೇರಿ ಹಲವು ಕಾರಣಗಳಿಂದಾಗಿ 40 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.

ಇದನ್ನೂ ಓದಿ: IndiGo Flights: ಬೆಂಗಳೂರಿಗೆ ಆಗಮಿಸುತ್ತಿದ್ದ ವಿಮಾನ ಸೇರಿ ಇಂಡಿಗೋದ 2 ವಿಮಾನಗಳ ಎಂಜಿನ್‌ ದೋಷ, ಪ್ರಯಾಣಿಕರಿಗೆ ಆತಂಕ

ಕೊರೊನಾ ಬಿಕ್ಕಟ್ಟಿನ ನಂತರದಲ್ಲಿ ವಿಮಾನಗಳ ಇಂಧನದ ಬೆಲೆಯಲ್ಲಿ ಶೇ.40ರಷ್ಟು ಏರಿಕೆಯಾಗಿತ್ತು. ಇದರಿಂದಾಗಿ ಈಗಾಗಲೇ ನಷ್ಟದಲ್ಲಿರುವ ವಿಮಾನಯಾನ ಸಂಸ್ಥೆಗಳಿಗೆ ಕಷ್ಟವಾಗಿತ್ತು. ಹಾಗೆಯೇ, ವಿಮಾನದ ಟಿಕೆಟ್‌ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಿತ್ತು. ಇತ್ತೀಚೆಗೆ ಇಂಧನ ಬೆಲೆ ಇಳಿಕೆಯಾದ ಕಾರಣ ವಿಮಾನಯಾನ ಸಂಸ್ಥೆಗಳ ಹೊರೆ ಕಡಿಮೆಯಾಗಿದೆ. ಮೂಲಗಳ ಪ್ರಕಾರ, ಕಳೆದ ಕೆಲ ತಿಂಗಳಿಂದ ಇಂಡಿಗೋ ಇಂಧನ ವೆಚ್ಚವು ಶೇ.6ರಷ್ಟು ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version