ನವದೆಹಲಿ: ಮಳೆಗಾಲ ಆರಂಭವಾದರೆ ಸಾಕು, ವಿಮಾನಗಳ ತುರ್ತು ಭೂಸ್ಪರ್ಶ, ವಿಮಾನಗಳ ಹಾರಾಟ ವಿಳಂಬ, ಬೇರೆ ದೇಶಗಳ ವಾಯುಪ್ರದೇಶ ಪ್ರವೇಶಿಸುವುದು ಸೇರಿ ಹಲವು ರೀತಿಯಲ್ಲಿ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಭಾನುವಾರ ಶ್ರೀನಗರ-ಜಮ್ಮು ಇಂಡಿಗೋ (Indigo Flight) ವಿಮಾನವು ದಿಢೀರನೆ ಪಾಕಿಸ್ತಾನದ ವಾಯುಪ್ರದೇಶ ಪ್ರವೇಶಿಸಿದೆ.
ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಶ್ರೀನಗರದಿಂದ ಜಮ್ಮುವಿಗೆ ಹೊರಟ್ಟಿದ್ದ ಇಂಡಿಗೋ 6e-2124 ವಿಮಾನವು ಅನಿವಾರ್ಯವಾಗಿ ಪಾಕಿಸ್ತಾನದ ವಾಯುಪ್ರದೇಶ ಪ್ರವೇಶಿಸಿದೆ. ಇದಾದ ಬಳಿಕ ವಿಮಾನವನ್ನು ಪಂಜಾಬ್‌ನ ಅಮೃತಸರ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಗಿದೆ ಎಂದು ಇಂಡಿಗೋ ಅಧಿಕಾರಿಗಳು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಕೂಡ ಅಮೃತಸರದಿಂದ ಅಹ್ಮದಾಬಾದ್‌ಗೆ ತೆರಳುತ್ತಿದ್ದ ಇಂಡಿಗೋ ವಿಮಾನವು ಪಾಕಿಸ್ತಾನದ ವಾಯುಪ್ರದೇಶ ಪ್ರವೇಶಿಸಿತ್ತು.
ಇಂಡಿಗೋ ವಿಮಾನವು ಪಾಕಿಸ್ತಾನದ ವಾಯುಪ್ರದೇಶ ಪ್ರವೇಶಿಸುತ್ತಲೇ ನೆರೆ ರಾಷ್ಟ್ರದ ಅಧಿಕಾರಿಗಳು ಸಹಕರಿಸಿದ್ದಾರೆ. ಜಮ್ಮು ಹಾಗೂ ಲಾಹೋರ್‌ನ ಏರ್ ಟ್ರಾಫಿಕ್ ಕಂಟ್ರೋಲ್ (ATC) ಅಧಿಕಾರಿಗಳು ಸಂವಹನ ಸಾಧಿಸಿ, ಪರಸ್ಪರ ಸಹಕಾರದಿಂದ ವಿಮಾನವನ್ನು ಅಮೃತಸರದಲ್ಲಿ ಲ್ಯಾಂಡ್ ಮಾಡಲು ಸಾಧ್ಯವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: IndiGo: ಏರ್ ಇಂಡಿಯಾ ದಾಖಲೆಯನ್ನೇ ಉಡೀಸ್ ಮಾಡಿದ ಇಂಡಿಗೋ! ಏನಿದು ದಾಖಲೆ?
ಭಾನುವಾರವೇ ಲಂಡನ್‌ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ (Air India) ವಿಮಾನವನ್ನು ಜೈಪುರದಲ್ಲಿ ಎಮರ್ಜನ್ಸಿ ಲ್ಯಾಂಡಿಂಗ್ ಮಾಡಿದ ಬಳಿಕ ಮತ್ತೆ ವಿಮಾನ ಹಾರಿಸಲು ವಿಮಾನದ ಪೈಲಟ್ ನಿರಾಕರಿಸಿದ ಕಾರಣ ಸುಮಾರು 350 ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಪರದಾಡಿದರು.
ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಎ-112 ವಿಮಾನವು ಲಂಡನ್‌ನಿಂದ ಹಾರಾಟ ಆರಂಭಿಸಿದ್ದ, ದೆಹಲಿ ವಿಮಾನ ನಿಲ್ದಾಣಕ್ಕೆ ಭಾನುವಾರ ಬೆಳಗ್ಗೆ 4 ಗಂಟೆಗೆ ತಲುಪಬೇಕಿತ್ತು. ಆದರೆ, ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ವಿಮಾನವನ್ನು ಜೈಪುರದಲ್ಲಿ ಎಮರ್ಜನ್ಸಿ ಲ್ಯಾಂಡಿಂಗ್ ಮಾಡಲಾಗಿದೆ. ವಿಮಾನ ಲ್ಯಾಂಡ್ ಆದ ಬಳಿಕ ಮತ್ತೆ ಹಾರಾಟ ಆರಂಭಿಸಲು ಪೈಲಟ್ ನಿರಾಕರಿಸಿದ್ದಾರೆ. ಇದರಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ.