ಬೆಂಗಳೂರು: ಮಂಡ್ಯ ಜಿಲ್ಲೆಯ ರೈತರ ಜೀವನಾಡಿಯಾದ, ಬೆಂಗಳೂರಿಗೂ ಕುಡಿಯುವ ನೀರು ಪೂರೈಸುವ, ತಮಿಳುನಾಡಿನ ರೈತರಿಗೂ ಆಶ್ರಯದಾತವಾಗಿರುವ ಕೃಷ್ಣರಾಜಸಾಗರ ಅಣೆಕಟ್ಟೆಗೆ (KRS Dam) ದಾಖಲೆ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು (KRS Inflow), ರಾಜ್ಯದಲ್ಲಿ ಹಳದಿ ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರ ಕನ್ನಡ, ಉಡುಪಿ ಸೇರಿ ರಾಜ್ಯದ ಹಲವೆಡೆ ಭಾರಿ ಮಳೆಯಾಗುತ್ತಿದೆ. ಕಾವೇರಿ ಉಕ್ಕಿ ಹರಿಯುತ್ತಿದ್ದಾಳೆ. ಇದರಿಂದಾಗಿ ಕೆಆರ್‌ಎಸ್‌ಗೆ ಭಾನುವಾರ (ಜುಲೈ 7) ದಾಖಲೆಯ 11,027 ಕ್ಯುಸೆಕ್ ನೀರು ಹರಿದುಬರುತ್ತಿದೆ.
ಮಳೆಯ ಹಿನ್ನೆಲೆಯಲ್ಲಿ ಕೆಆರ್‌ಎಸ್ ಡ್ಯಾಮ್‌ನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಭಾರಿ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಜುಲೈ 7ರ ಬೆಳಗ್ಗೆಯ ವರದಿ ಪ್ರಕಾರ 31.09 ಟಿಎಂಸಿ ನೀರು ಸಂಗ್ರಹವಾಗಿತ್ತು. 2023ರ ಜುಲೈ 7ರಂದು 24.23 ಟಿಎಂಸಿ ನೀರು ಸಂಗ್ರಹವಾಗಿತ್ತು. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಇನ್ನಷ್ಟು ಮಳೆಯಾಗುವ ಸಾಧ್ಯತೆ ಇರುವುದರಿಂದ ಕೆಆರ್‌ಎಸ್‌ಗೆ ಇನ್ನಷ್ಟು ನೀರು ಹರಿದುಬರಲಿದೆ ಎಂದು ಹೇಳಲಾಗುತ್ತಿದೆ.
ಕರ್ನಾಟಕದ ಹಲವು ಅಣೆಕಟ್ಟೆಗಳಲ್ಲಿಯೂ ಉತ್ತಮ ಒಳಹರಿವು ಇದೆ. ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಡ್ಯಾಮ್‌ಗೆ 59,306 ಕ್ಯುಸೆಕ್, ವಿಜಯನಗರ ಜಿಲ್ಲೆಯ ತುಂಗಭದ್ರಾ ಅಣೆಕಟ್ಟೆಗೆ 50,715 ಕ್ಯುಸೆಕ್ ನೀರು ಒಳಹರಿವು ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಗರಿಷ್ಠ ಪ್ರಮಾಣದ ನೀರು ಹರಿದುಬರುತ್ತಿದೆ. ಕಬಿನಿ, ಹಾರಂಗಿ ಹಾಗೂ ಹೇಮಾವತಿ ಅಣೆಕಟ್ಟೆಗಳಲ್ಲಿ ಕೂಡ ಉತ್ತಮವಾಗಿ ನೀರು ಸಂಗ್ರಹವಾಗಿದೆ. ಕೃಷಿ ಸಚಿವರೂ ಆಗಿರುವ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಬೆಂಗಳೂರಿನಲ್ಲಿ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿದ್ದು, ಜುಲೈ 8ರಿಂದ ನಾಲೆಗಳಿಗೆ ನೀರು ಬಿಡಲು ತೀರ್ಮಾನಿಸಿದ್ದಾರೆ.
ಉತ್ತರ ಕನ್ನಡದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಶಾಲೆ-ಕಾಲೇಜುಗಳಿಗೆ ಸೋಮವಾರ (ಜುಲೈ 8) ರಜೆ ಘೋಷಿಸಲಾಗಿದೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕಿನ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. ಅವರು ರಜೆ ಆದೇಶ ಹೊರಡಿಸಿದ್ದಾರೆ. ಮಕ್ಕಳ ಹಿತದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ರಜೆ ಘೋಷಣೆ ಮಾಡಲಾಗಿದೆ. ಇನ್ನೂ ಘಟ್ಟದ ಮೇಲಿನ ತಾಲೂಕುಗಳ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಇಲ್ಲ.
ಇದನ್ನೂ ಓದಿ: Student Death : ಕೇರಳದಿಂದ ಪ್ರವಾಸ ಬಂದಿದ್ದ ವಿದ್ಯಾರ್ಥಿನಿ ಕೆಆರ್‌ಎಸ್‌ನಲ್ಲಿ ಮೃತ್ಯು