Site icon Vistara News

Social Media | ಜಾಲತಾಣದಲ್ಲಿ ಉತ್ಪನ್ನಗಳ ಪ್ರಚಾರ ಮಾಡುವವರಿಗೆ ಕೇಂದ್ರದಿಂದ ಶೀಘ್ರವೇ ಮೂಗುದಾರ!

Photo

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ (Social Media) ಯಾವುದೇ ಉತ್ಪನ್ನಗಳ ಬಗ್ಗೆ ಪ್ರಚಾರ ಮಾಡುವ ಪ್ರಭಾವಿಗಳಿಗೆ ಕೇಂದ್ರ ಸರ್ಕಾರವು ಶೀಘ್ರವೇ ಮೂಗುದಾರ ಹಾಕಲಿದೆ. ಅಂದರೆ, ಯಾವುದೇ ಪ್ರಭಾವಿ ವ್ಯಕ್ತಿಗಳು, ಸೆಲೆಬ್ರಿಟಿಗಳು, ಜಾಲತಾಣದಲ್ಲಿ ಹೆಚ್ಚಿನ ಪ್ರಚಾರ ಮಾಡುವವರು, ಪ್ರಚಾರ ಮಾಡುವ ಮುನ್ನ ತಾವು ಆ ಉತ್ಪನ್ನ ಅಥವಾ ಬ್ರ್ಯಾಂಡ್‌ ಜತೆ ಹೊಂದಿರುವ ನಂಟಿನ ಕುರಿತು ಘೋಷಿಸುವುದನ್ನು ಕಡ್ಡಾಯಗೊಳಿಸಿ ಕೇಂದ್ರವು ಶೀಘ್ರದಲ್ಲಿಯೇ ಮಾರ್ಗಸೂಚಿ ಹೊರಡಿಸಲಿದೆ ಎಂದು ತಿಳಿದುಬಂದಿದೆ.

“ಜಾಲತಾಣಗಳಲ್ಲಿ ಉತ್ಪನ್ನಗಳ ಪ್ರಚಾರ ಮಾಡುವವರು ಬ್ರ್ಯಾಂಡ್‌ ಜತೆ ತಾವು ಹೊಂದಿರುವ ನಂಟಿನ ಬಗ್ಗೆ ಘೋಷಿಸುವುದು ಸೇರಿ ಹಲವು ಮಾರ್ಗಸೂಚಿ ಹೊರಡಿಸುವ ಸಾಧ್ಯತೆ ಇದೆ. ಅಂದರೆ, ತಾವು ಬ್ರ್ಯಾಂಡ್‌ ಮಾಲೀಕರೋ ಅಥವಾ ಹಣ ಪಡೆದು ಜಾಹೀರಾತು ಮಾಡಲಾಗುತ್ತಿದೆಯೇ ಎಂಬುದನ್ನು ಘೋಷಿಸುವ ಮಾರ್ಗಸೂಚಿಗಳನ್ನು ಗ್ರಾಹಕ ವ್ಯವಹಾರಗಳ ಇಲಾಖೆಯು ೧೫ ದಿನದಲ್ಲಿ ಹೊರಡಿಸುವ ಸಾಧ್ಯತೆ ಇದೆ” ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಫಾಲೋವರ್‌ಗಳನ್ನು ಹೊಂದಿರುವ ಪ್ರಭಾವಿಗಳು ಉತ್ಪನ್ನಗಳ ಕಂಪನಿಯಿಂದ ಹಣ ಪಡೆದು ಉತ್ಪನ್ನಗಳ ಪ್ರಚಾರ ಮಾಡುವುದನ್ನು ತಡೆಯಲು ಹಾಗೂ ಪ್ರಭಾವಿಗಳ ಮಾತು ನಂಬಿ ಜನ ಕಳಪೆ ಉತ್ಪನ್ನಗಳನ್ನು ಖರೀದಿಸುವುದಕ್ಕೆ ಅಂಕುಶ ಹಾಕಲು ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಲು ಮುಂದಾಗಿದೆ. ಪ್ರಭಾವಿಗಳು ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂಬುದು ಮಾರ್ಗಸೂಚಿಯಲ್ಲಿ ಇರಲಿದೆ ಎಂದು ತಿಳಿದುಬಂದಿದೆ. ನಿಯಮ ಉಲ್ಲಂಘಿಸಿದರೆ ಭಾರಿ ದಂಡವೂ ಕಟ್ಟಬೇಕಾಗುತ್ತದೆ.

ಇದನ್ನೂ ಓದಿ | ಸೆಲೆಬ್ರಿಟಿಗಳೇ, ನೀವು ಪ್ರಮೋಟ್‌ ಮಾಡುವ ಉತ್ಪನ್ನಗಳನ್ನು ನೀವು ಬಳಸ್ತೀರಾ ಹೇಳಿ!

Exit mobile version