ನ್ಯೂಯಾರ್ಕ್: ಎನ್.ಆರ್.ನಾರಾಯಣಮೂರ್ತಿ (Narayana Murthy) ಅವರು ಇನ್ಫೋಸಿಸ್ (Infosys) ಸಂಸ್ಥೆ ಕಟ್ಟಿ ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಸಾವಿರಾರು ಕೋಟಿ ರೂಪಾಯಿಗೆ ಒಡೆಯರೂ ಆಗಿದ್ದಾರೆ. ಇವರ ಅಳಿಯ ರಿಷಿ ಸುನಕ್ (Rishi Sunak) ಅವರು ಬ್ರಿಟನ್ ಪ್ರಧಾನಿ ಆಗಿದ್ದಾರೆ. ಇಷ್ಟೆಲ್ಲ ಆಗರ್ಭ ಶ್ರೀಮಂತರಾಗಿರುವ, ಪ್ರಭಾವಿಯಾಗಿರುವ ನಾರಾಯಣಮೂರ್ತಿ ಅವರು 120 ಗಂಟೆ ಉಪವಾಸದಿಂದ ನರಳಿದೆ ಎಂಬುದಾಗಿ ಹೇಳಿದ್ದಾರೆ. ವಿಶ್ವಸಂಸ್ಥೆಯಲ್ಲಿ (United Nations) ನಡೆದ ಕಾರ್ಯಕ್ರಮದಲ್ಲಿ ಉಪವಾಸದ ಕುರಿತು ಅವರು ಪ್ರಸ್ತಾಪಿಸಿದ್ದಾರೆ.
ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಭಾರತದ ಕಾಯಂ ಮಿಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “50 ವರ್ಷಗಳ ಹಿಂದೆ ನಾನು ಯುರೋಪ್‌ಗೆ ಭೇಟಿ ನೀಡಿದ್ದೆ. ನಾನು ಆಗ ಬಲ್ಗೇರಿಯಾ ಹಾಗೂ ಯುಗೊಸ್ಲಾವಿಯಾ (ಈಗಿನ ಸರ್ಬಿಯಾ) ನಡುವಿನ ಒಂದು ಪಟ್ಟಣವಾದ ನಿಶ್ ಎಂಬಲ್ಲಿ ಇದ್ದೆ. ನನಗೆ ಅಲ್ಲಿ ಊಟ ಸಿಗಲಿಲ್ಲ. ಇದರಿಂದಾಗಿ ನಾನು ಸತತ 120 ಗಂಟೆ ಉಪವಾಸದಿಂದ ನರಳಿದೆ” ಎಂಬುದಾಗಿ ನಾರಾಯಣಮೂರ್ತಿ ಹೇಳಿಕೊಂಡಿದ್ದಾರೆ.
Most of you have not experienced hunger. I have. Fifty years ago, I experienced hunger for 120 hours non-stop when I was hitchhiking in Europe: @Infosys Founder NR Narayana Murthy @UN HQ. pic.twitter.com/RVwVP0f478
— Yoshita Singh योषिता सिंह (@Yoshita_Singh) April 3, 2024
“ತುಂಬ ಭಾರತೀಯರು ಇಲ್ಲಿದ್ದಾರೆ. ನಾನು ಭಾರತ ಸರ್ಕಾರದಿಂದ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ಪಡೆದಿದ್ದೇನೆ. ದೇಶದಿಂದ ಎಲ್ಲವನ್ನೂ ಪಡೆದುಕೊಳ್ಳುವ ನಾವು ನಾಗರಿಕರಾಗಿ ದೇಶಕ್ಕೂ ನಮ್ಮ ಕೊಡುಗೆ ನೀಡಬೇಕು. ಮುಂದಿನ ಪೀಳಿಗೆಗಳಿಗೆ ನಾವು ಸಹಾಯ ಮಾಡಬೇಕು. ಅದರಲ್ಲೂ, ಬಡವರು ಹಾಗೂ ದಮನಿತರು ಶಿಕ್ಷಣ ಪಡೆಯಲು ಸಹಕಾರ ನೀಡಬೇಕು. ವಿಶ್ವಸಂಸ್ಥೆ ಕೂಡ ಭಾರತದಲ್ಲಿ ಜಾರಿಯಲ್ಲಿರುವ ಅಕ್ಷಯ ಪಾತ್ರಾ ಮಾದರಿಯ ಯೋಜನೆಗಳನ್ನು ಬೇರೆ ದೇಶಗಳಲ್ಲಿ ಜಾರಿಗೆ ತಂದು ಬಡವರಿಗೆ ಅನುಕೂಲ ಕಲ್ಪಿಸಬೇಕು” ಎಂದು ಮನವಿ ಮಾಡಿದರು.
ಇದನ್ನೂ ಓದಿ: NR Narayana Murthy: 4 ತಿಂಗಳ ಮೊಮ್ಮಗನಿಗೆ ನಾರಾಯಣಮೂರ್ತಿಯಿಂದ 240 ಕೋಟಿ ರೂ. ಷೇರುಗಳ ಗಿಫ್ಟ್!
“ಭಾರತ ಸರ್ಕಾರವು ಸಹಭಾಗಿತ್ವದಲ್ಲಿ ಅಕ್ಷಯ ಪಾತ್ರಾ ಯೋಜನೆ ಜಾರಿಗೆ ತಂದಿದೆ. ಇದರಿಂದ ಬಡಮಕ್ಕಳ ಆರೋಗ್ಯ, ವಿಶ್ವಾಸ, ಆತ್ಮಸ್ಥೈರ್ಯ ಹೆಚ್ಚಾಗಲು ಕಾರಣವಾಗಿದೆ. ಭಾರತದಲ್ಲಿ ವಿಶ್ವದಲ್ಲೇ ಬೃಹತ್ ಆಹಾರ ಸುರಕ್ಷತೆ ಯೋಜನೆಯಾದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಜಾರಿಗೊಳಿಸಲಾಗಿದೆ. ಬಡತನ ಎಂಬುದು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ವಿಶ್ವವ್ಯಾಪಿಯಾಗಿದೆ. ಹಾಗಾಗಿ, ಸಮಾಜದಲ್ಲಿರುವ ಗಣ್ಯರು, ಉತ್ತಮ ಸ್ಥಿತಿಯಲ್ಲಿರುವವರು ಬಡವರ ಏಳಿಗೆಗೆ ಸಹಾಯಹಸ್ತ ಚಾಚಬೇಕು” ಎಂದು ತಿಳಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ