ಶ್ರೀನಗರ: ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾಗ ಭಾರತದ ಯೋಧರು ರಕ್ತ ಕೊಟ್ಟು ಉಳಿಸಿದ್ದ ಪಾಕಿಸ್ತಾನದ ಉಗ್ರ (Pak Terrorist) ತಬರಾಕ್ ಹುಸೇನ್ (Tabarak Hussain) ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಭಾರತದ ಯೋಧರ ಮೇಲೆ ದಾಳಿ ಮಾಡಲೆಂದೇ ಪಾಕಿಸ್ತಾನದ ಕರ್ನಲ್ ಒಬ್ಬರಿಂದ ಹಣ ಪಡೆದು, ಒಳನುಸುಳಲು ಯತ್ನಿಸಿದಾಗ ಯೋಧರು ಉಗ್ರನನ್ನು ಬಂಧಿಸಿದ್ದರು.
ಆಗಸ್ಟ್ 21ರಂದು ಗಡಿಯಲ್ಲಿ ಒಳನುಸುಳಲು ಯತ್ನಿಸಿದಾಗ ಭಾರತದ ಯೋಧರು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ತಬರಕ್ ಹುಸೇನ್‌ನನ್ನು ರಾಜೌರಿಯ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲದೆ, ಉಗ್ರನ ಜೀವ ಉಳಿಸಲು ರಕ್ತದಾನ ಮಾಡಿದ್ದರು.
“ಪಾಕಿಸ್ತಾನದ ಕರ್ನಲ್ ಒಬ್ಬರಿಂದ 30 ಸಾವಿರ ರೂ. ಪಡೆದು ಭಾರತದ ಸೇನೆ ಮೇಲೆ ದಾಳಿ ನಡೆಸಲು ಪಿಒಕೆ ಮೂಲಕ ಉಗ್ರನು ಒಳನುಸುಳಲು ಯತ್ನಿಸಿದ್ದ. ಆದರೆ, ಯೋಧರು ಗುಂಡಿನ ದಾಳಿ ನಡೆಸಿದ ಕಾರಣ ಆತನ ಕಾಲು ಹಾಗೂ ತೋಳಿಗೆ ಗಾಯವಾಗಿದ್ದವು. ಈತನು ಹೃದಯಾಘಾತದಿಂದಾಗಿ ಶನಿವಾರ ಮೃತಪಟ್ಟಿದ್ದಾನೆ” ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | ರಕ್ತ ಬಸಿಯಲು ಬಂದಿದ್ದ ಪಾಕ್ ಉಗ್ರನಿಗೆ ರಕ್ತ ನೀಡಿ ಬದುಕುಳಿಸಿದ ಭಾರತೀಯ ಸೇನಾ ಯೋಧರು!