Site icon Vistara News

Inox India: ಐನಾಕ್ಸ್‌ ಐಪಿಒ ಡಿ. 14ರಿಂದ ಆರಂಭ; ಪ್ರತಿ ಷೇರಿಗೆ ಎಷ್ಟು ಬೆಲೆ?

inox

inox

ನವದೆಹಲಿ: ಪ್ರಮುಖ ಕ್ರಯೋಜೆನಿಕ್ ಟ್ಯಾಂಕ್ ತಯಾರಕರ ಕಂಪೆನಿ ಐನಾಕ್ಸ್ ಇಂಡಿಯಾ (INOX India) ಸೋಮವಾರ ತನ್ನ ಐಪಿಒ (Initial public offering) ಬೆಲೆಯನ್ನು ಘೋಷಿಸಿದೆ. ಐನಾಕ್ಸ್ ಇಂಡಿಯಾ ಐಪಿಒ ಡಿಸೆಂಬರ್ 14ರಿಂದ ಡಿಸೆಂಬರ್ 18ರ ನಡುವೆ ಸಾರ್ವಜನಿಕರಿಗಾಗಿ ತೆರೆಯಲಾಗುವುದು ಎಂದು ಪ್ರಕಟಣೆ ತಿಳಿಸಿದೆ. 1,459.32 ಕೋಟಿ ರೂ.ಗಳ ಐಪಿಒ ಲಭ್ಯ. ಐನಾಕ್ಸ್ ಇಂಡಿಯಾ ಐಪಿಒ ಡಿಸೆಂಬರ್ 21ರಂದು ಬಿಎಸ್ಇ ಮತ್ತು ಎನ್ಎಸ್ಇ ಎರಡರಲ್ಲೂ ಪ್ರಕಟವಾಗಲಿದೆ. ಷೇರು ಹಂಚಿಕೆಯನ್ನು ಡಿಸೆಂಬರ್ 19ರಂದು ಅಂತಿಮಗೊಳಿಸುವ ಸಾಧ್ಯತೆ ಇದೆ.

ಆ್ಯಂಕರ್ ಹೂಡಿಕೆದಾರರಿಗೆ ಡಿಸೆಂಬರ್ 13ರಂದು ಷೇರು ಹಂಚಿಕೆ ಆಗಲಿದೆ. ಐನಾಕ್ಸ್‌ ಇಂಡಿಯಾ ಐಪಿಒದಲ್ಲಿ 2 ರೂ. ಮುಖಬೆಲೆಯ ಪ್ರತಿ ಈಕ್ವಿಟಿ ಷೇರಿಗೆ ₹ 627ರಿಂದ ₹ 660ರ ಪ್ರೈಸ್‌ ಬ್ಯಾಂಡ್‌ ನಿಗದಿಪಡಿಸಲಾಗಿದೆ. ಈಕ್ವಿಟಿ ಷೇರುಗಳ ಫ್ಲೋರ್‌ ಪ್ರೈಸ್‌ ಮುಖಬೆಲೆಗಿಂತಲೂ 313.5 ಪಟ್ಟು ಹೆಚ್ಚಿದೆ. ಕ್ಯಾಪ್ ಬೆಲೆಯು ಈಕ್ವಿಟಿ ಷೇರುಗಳ ಮುಖಬೆಲೆಯ 330 ಪಟ್ಟು ಹೆಚ್ಚಿದೆ. ಐನಾಕ್ಸ್ ಇಂಡಿಯಾ ಐಪಿಒ ಲಾಟ್ ಗಾತ್ರವು 22 ಈಕ್ವಿಟಿ ಷೇರುಗಳನ್ನು ಒಳಗೊಂಡಿದೆ.

ಕಂಪನಿಯು ಈ ವರ್ಷದ ಆಗಸ್ಟ್‌ನಲ್ಲಿ ಐಪಿಒ ಕುರಿತು ಸೆಬಿಗೆ ಡ್ರಾಫ್ಟ್ ಪೇಪರ್‌ಗಳನ್ನು ಸಲ್ಲಿಸಿತ್ತು. ಈ ತಿಂಗಳ ಆರಂಭದಲ್ಲಿ ಐಪಿಒಗೆ ಅನುಮೋದನೆ ಪಡೆದುಕೊಂಡಿತ್ತು. ಈ ಐಪಿಒದಲ್ಲಿ ಸಂಪೂರ್ಣವಾಗಿ 2.21 ಕೋಟಿ ಷೇರುಗಳನ್ನು ಆಫ್‌ ಫಾರ್‌ ಸೇಲ್‌ (OFS) ಮೂಲಕ ವಿತರಣೆ ಮಾಡಲಾಗುತ್ತಿದೆ. 

ಇದನ್ನೂ ಓದಿ: Tata Tech: ‘ಟಾಟಾ’ ಐಪಿಒ ಖರೀದಿಸಿದವರಿಗೆ ಧಮಾಕಾ; ಷೇರುಗಳ ಮೌಲ್ಯ ಡಬಲ್!

30 ವರ್ಷಗಳ ಅನುಭವವನ್ನು ಹೊಂದಿರುವ ಐನಾಕ್ಸ್ ಇಂಡಿಯಾ ಪ್ರಮುಖ ಕ್ರಯೋಜೆನಿಕ್ ಟ್ಯಾಂಕ್ ತಯಾರಕರಾಗಿ ಗುರುತಿಸಿಕೊಂಡಿದೆ. ಕ್ರಯೋಜೆನಿಕ್ ಟ್ಯಾಂಕ್‌ ವಿನ್ಯಾಸ ಮತ್ತು ಉತ್ಪಾದನೆ ಮೂಲಕ ಜನಪ್ರಿಯವಾಗಿದೆ. 2023ರ ಹಣಕಾಸು ವರ್ಷದಲ್ಲಿ ಕಂಪೆನಿಯ ನಿವ್ವಳ ಲಾಭ ಶೇ. 17ರಷ್ಟು ಏರಿಕೆ ಕಂಡು 152.71 ಕೋಟಿ ರೂ.ಗೆ ತಲುಪಿದೆ. ಕಳೆದ ವರ್ಷ 130.5 ಕೋಟಿ ರೂ.ಗೆ ಇತ್ತು. ಆದರೆ ಇಬಿಐಟಿಡಿಎ ಮಾರ್ಜಿನ್ ಕಳೆದ ವರ್ಷಕ್ಕೆ ಹೋಲಿಸಿದರೆ 23.47%ರಿಂದ 2023ರಲ್ಲಿ 22.62%ಕ್ಕೆ ಇಳಿದಿದೆ. ಮಾರ್ಚ್ 31ರ ವೇಳೆಗೆ ಒಟ್ಟು ಸಾಲವು 8.99 ಕೋಟಿ ರೂ.ಗಳಷ್ಟಿತ್ತು. ಹಿಂದಿನ ವರ್ಷ 54.54 ಕೋಟಿ ರೂ. ಇತ್ತು.

ಟಾಟಾ ಟೆಕ್ನಾಲಜೀಸ್‌ ಷೇರುಗಳ ಮೌಲ್ಯ ಡಬಲ್

ಟಾಟಾ ಗ್ರೂಪ್‌ನ ಟಾಟಾ ಟೆಕ್ನಾಲಜೀಸ್‌ ಕಂಪನಿಯು ಇತ್ತೀಚೆಗೆ ಷೇರು ಪೇಟೆ ಪ್ರವೇಶಿಸಿದ ಮೊದಲ ದಿನವೇ ಹೂಡಿಕೆದಾರರ ಖುಷಿಯನ್ನು ಹೆಚ್ಚಿಸಿದೆ. ಟಾಟಾ ಟೆಕ್‌ (Tata Tech) ಆರಂಭಿಕ ಸಾರ್ವಜನಿಕ ಕೊಡುಗೆ ಆರಂಭಿಸಿದ ಮೊದಲ ದಿನವೇ ಹೂಡಿಕೆದಾರರ ಷೇರುಗಳ ಮೌಲ್ಯವು ಖರೀದಿಗಿಂತ ಎರಡು ಪಟ್ಟು ಹೆಚ್ಚಾಗಿದೆ. ಇದರಿಂದಾಗಿ, ಟಾಟಾ ಐಪಿಒ ಆರಂಭಿಸಿದ ಕೂಡಲೇ ಷೇರುಗಳನ್ನು ಖರೀದಿಸಿದವರಿಗೆ ಭರ್ಜರಿ ಲಾಭವಾಗಿತ್ತು.

ಟಾಟಾ ಟೆಕ್ನಾಲಜೀಸ್‌ ಕಂಪನಿಯು ನವೆಂಬರ್‌ 22ರಿಂದ 24ರವರೆಗೆ ಐಪಿಒ ಬಿಡ್‌ ಸಲ್ಲಿಸಲು ಅವಕಾಶ ನೀಡಿತ್ತು. ಅದರಂತೆ ಭರ್ಜರಿ ಸ್ಪಂದನೆ ವ್ಯಕ್ತವಾಗಿದ್ದು, ಲಕ್ಷಾಂತರ ಜನ ಬಿಡ್‌ ಸಲ್ಲಿಸಿದ್ದರು. ಅದರಂತೆ ಷೇರುಗಳ ಹಂಚಿಕೆಯಾಗಿ, ಗುರುವಾರ (ನವೆಂಬರ್‌ 30) ಟಾಟಾ ಟೆಕ್ನಾಲಜೀಸ್‌ ಕಂಪನಿಯು ಷೇರುಪೇಟೆ ಪ್ರವೇಶಿಸಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಟಾಟಾ ಟೆಕ್ನಾಲಜೀಸ್‌ನ ಒಂದು ಷೇರಿನ ಮೌಲ್ಯವು ಎನ್‌ಎಸ್‌ಇನಲ್ಲಿ (NSE) 1,200 ರೂ. ಆದರೆ ಬಿಎಸ್‌ಇನಲ್ಲಿ (BSE) 1,199 ರೂ. ಆಗಿದೆ. ಇದರೊಂದಿಗೆ ಹೂಡಿಕೆದಾರರ ಷೇರುಗಳ ಮೌಲ್ಯವು ದ್ವಿಗುಣವಾದಂತಾಗಿದೆ.

ಐಪಿಒ ಮೂಲಕ ಟಾಟಾ ಗ್ರೂಪ್‌ನ ಟಾಟಾ ಟೆಕ್ನಾಲಜೀಸ್‌ ಕಂಪನಿಯು ಸುಮಾರು 3 ಸಾವಿರ ಕೋಟಿ ರೂ.ಗಿಂತ ಅಧಿಕ ಹಣ ಸಂಗ್ರಹಿಸುವ ಗುರಿಯೊಂದಿಗೆ ಷೇರು ಮಾರುಕಟ್ಟೆ ಪ್ರವೇಶಿಸಿತ್ತು. ಟಾಟಾ ಟೆಕ್ನಾಲಜೀಸ್‌ ಕಂಪನಿಯ ಬಿಡ್‌ಗೆ ಭಾರಿ ಸ್ಪಂದನೆ ವ್ಯಕ್ತವಾಗಿ, 73.38 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿತ್ತು. ಒಂದು ಷೇರಿಗೆ 475 ರೂ.ನಿಂದ 500 ರೂ. ನಿಗದಿಪಡಿಸಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version