ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿಟ್ಟಿರುವ ಆತ್ಮನಿರ್ಭರ ಭಾರತದ ಕಲ್ಪನೆಯಡಿ ರಕ್ಷಣಾ ಕ್ಷೇತ್ರದಲ್ಲಿ ಆದಷ್ಟು ಶೀಘ್ರವಾಗಿ ಸಂಪೂರ್ಣ ಸ್ವಾವಲಂಬನೆ ಸಾಧಿಸಲು ಉತ್ಸುಕವಾಗಿದೆ. ಈ ನಿಟ್ಟಿನಲ್ಲಿ ತ್ವರಿತ ಕಾರ್ಯಯೋಜನೆಗಳೂ ನಡೆಯುತ್ತಿವೆ. ಇವೆಲ್ಲವೂ ಯೋಜನೆಯಂತೆಯೇ ಸಾಧಿತವಾದಲ್ಲಿ ಭಾರತ ಜಗತ್ತಿನ ಪ್ರಬಲ ಶಕ್ತಿಯಾಗುವುದರಲ್ಲಿ ಸಂದೇಹವಿಲ್ಲ. ದೇಶೀಯ ಅವಳಿ-ಎಂಜಿನ್ ಡೆಕ್ ಆಧಾರಿತ ಯುದ್ಧವಿಮಾನಗಳು ಸಾಕಾರಗೊಳ್ಳಲು ಇನ್ನೂ ಒಂದು ದಶಕದಷ್ಟು ಕಾಯಬೇಕಾಗಿದೆ. ಹೀಗಾಗಿ ಭಾರತೀಯ ನೌಕಾಪಡೆಯ ಶಿಫಾರಸಿನ ಮೇರೆಗೆ ಸರ್ಕಾರ- ಸರ್ಕಾರಗಳ ನಡುವಣ ಒಪ್ಪಂದದ ಆಧಾರದಲ್ಲಿ ನರೇಂದ್ರ ಮೋದಿ ಸರ್ಕಾರವು ಶೀಘ್ರದಲ್ಲೇ ನಿಯೋಜನೆಗೊಳ್ಳಲಿರುವ ಐಎನ್‌ಎಸ್ ವಿಕ್ರಾಂತ್ (INS VIKRANT) ಗಾಗಿ 26 ವಾಹಕ ಆಧಾರಿತ ಯುದ್ಧವಿಮಾನಗಳನ್ನು ಖರೀದಿಸಲಿದೆ.
ಫ್ರೆಂಚ್ ರಫೇಲ್-ಮರೀನ್ ಆಯ್ಕೆಗಾಗಿ ಹಾರಾಟ ಪರೀಕ್ಷಾ ಪ್ರಯೋಗಗಳನ್ನು ಈಗಾಗಲೇ ಗೋವಾದಲ್ಲಿರುವ ಭಾರತೀಯ ನೌಕಾಪಡೆಯ ತೀರ ಮೂಲದ ಪರೀಕ್ಷಾ ಕೇಂದ್ರದಲ್ಲಿ ಈ ಜನವರಿಯಲ್ಲಿ ನಡೆಸಲಾಗಿದೆ. ಇದೀಗ ಯುಎಸ್- F-18 ಸೂಪರ್ ಹಾರ್ನೆಟ್‌ನ ಪ್ರಾಯೋಗಿಕ ಹಾರಾಟ ಜೂನ್ 15 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ 26 ವಿಮಾನಗಳ ಪೈಕಿ, 8 ಅವಳಿ ಆಸನಗಳ ತರಬೇತಿ ವಿಮಾನಗಳು ಇರಬೇಕೆಂದು ಭಾರತೀಯ ನೌಕಾಪಡೆಯು ಬಯಸುತ್ತದೆ, ಇದನ್ನು ಯುದ್ಧ ಪರಿಸ್ಥಿತಿಗಳಲ್ಲಿಯೂ ಬಳಸಬಹುದು. ಎರಡೂ ಫೈಟರ್‌ಗಳು ವಾಸ್ತವಿಕವಾಗಿ ಒಂದೇ ವಿಂಟೇಜ್ (ತಯಾರಿಕೆಯ ವರ್ಷ) ನದ್ದಾಗಿವೆ ಮತ್ತು ಎರಡೂ ತಯಾರಕರು ಭಾರತದಲ್ಲಿ ನಿರ್ವಹಣೆ, ದುರಸ್ತಿ ಮತ್ತು ಕೂಲಂಕಷ ತಪಾಸಣಾ ಸೌಲಭ್ಯಗಳನ್ನು ಹೊಂದಿದ್ದಾರೆ.
ಎರಡೂ ವಿಮಾನಗಳು ಗೋವಾದಲ್ಲಿನ ಪರೀಕ್ಷಾ ಕೇಂದ್ರದಲ್ಲಿ ತೀವ್ರವಾದ ಪರೀಕ್ಷಾ ಪ್ರಯೋಗಗಳಲ್ಲಿ ಉತ್ತೀರ್ಣಗೊಂಡಿವೆ. ಆದರೆ ಭಾರತದ ಏಕೈಕ ವಿಮಾನ ವಾಹಕ ನೌಕೆ ಐಎನ್‌ಎಸ್ ವಿಕ್ರಮಾದಿತ್ಯದಲ್ಲಿ ಇಳಿದಿರಲಿಲ್ಲ, ಏಕೆಂದರೆ ಇದು ಕಾರವಾರದಲ್ಲಿ ಪ್ರಮುಖ ನಿರ್ವಹಣೆಯಲ್ಲಿದೆ ಮತ್ತು ಜೂನ್ ನಂತರ ಈ ನೌಕೆ ಮತ್ತೆ ಯಾನವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಭಾರತದ ಸ್ವದೇಶಿ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಸಮುದ್ರ ಪ್ರಯೋಗಕ್ಕೆ ಒಳಗಾಗುತ್ತಿದ್ದು, ಆಗಸ್ಟ್ 15, 2022 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಇದರ ಕಾರ್ಯಾರಂಭಕ್ಕೆ ಚಾಲನೆ ನೀಡುವ ನಿರೀಕ್ಷೆಯಿದೆ.
ರಕ್ಷಣಾ ಇಲಾಖೆ ಅಧಿಕಾರಿಗಳ ಪ್ರಕಾರ, ಭಾರತವು ಐಎನ್‌ಎಸ್ ವಿಕ್ರಾಂತ್‌ಗೆ ಯುದ್ಧವಿಮಾನಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲು ಬಯಸುತ್ತಿಲ್ಲ. ಆದರೆ ಭಾರತೀಯ ನೌಕಾಪಡೆಯ ವಾಯುಯಾನ ವಿಭಾಗದ ಮೌಲ್ಯಮಾಪನದ ಆಧಾರದ ಮೇಲೆ ಫ್ರೆಂಚ್ ಡಸಾಲ್ಟ್ ಅಥವಾ ಯುಎಸ್ ಬೋಯಿಂಗ್‌ನಿಂದ ಡೆಕ್ ಆಧಾರಿತ ಯುದ್ಧವಿಮಾನಗಳನ್ನು ಸಂಪೂರ್ಣ ಜಿ-ಟು-ಜಿ (ಗವರ್ನಮೆಂಟ್ ಟು ಗವರ್ನಮೆಂಟ್) ಆಧಾರದಲ್ಲಿ ನೇರವಾಗಿ ಖರೀದಿಸಲಿದೆ. ಎರಡೂ ಕಂಪನಿಗಳು ಭಾರತೀಯ ವಾಯುಪಡೆಯೊಂದಿಗೆ ಡಸ್ಸಾಲ್ಟ್ ರಫೇಲ್ ಯುದ್ಧವಿಮಾನಗಳನ್ನು ಮಾರಾಟ ಮಾಡುತ್ತಿವೆ. ಅಲ್ಲದೆ, ಬೋಯಿಂಗ್ P8I ಜಲಾಂತರ್ಗಾಮಿ ವಿರೋಧಿ ಯುದ್ಧ ವೇದಿಕೆ, ಚಿನೂಕ್ ಹೆಲಿಕಾಪ್ಟರ್‌ಗಳು ಮತ್ತು C-17 ಹೆವಿ ಲಿಫ್ಟ್ ವಿಮಾನಗಳನ್ನು ಮಾರಾಟ ಮಾಡುತ್ತಿವೆ. ಎರಡು ವಿಮಾನಗಳು ಅಮೆರಿಕ ನೌಕಾಪಡೆಯಿಂದ ಅಫ್ಘಾನ್ ಮತ್ತು ಇರಾಕ್ ಯುದ್ಧಗಳಲ್ಲಿ F-18 ಅನ್ನು ಪರೀಕ್ಷಿಸುವುದರೊಂದಿಗೆ ಖಾತ್ರಿಯಾದ ಟ್ರ್ಯಾಕ್ ರೆಕಾರ್ಡ್‌ಗಳನ್ನು ಹೊಂದಿವೆ.
ಭಾರತೀಯ ಖಾಸಗಿ ವಲಯದ ಕಂಪನಿಗಳ ಸಹಭಾಗಿತ್ವದೊಂದಿಗೆ “ಆತ್ಮನಿರ್ಭರ್ ಭಾರತ್” ಉಪಕ್ರಮದ ಅಡಿಯಲ್ಲಿ ಭಾರತವು ವಿಮಾನ ಎಂಜಿನ್ ತಯಾರಿಕೆಯನ್ನು ಅನ್ವೇಷಿಸುತ್ತಿದೆ. ಹೀಗಾಗಿ ವಾಹಕ-ಆಧಾರಿತ ಯುದ್ಧವಿಮಾನ ಒಪ್ಪಂದ ಮಾಡಿಕೊಳ್ಳಲಾಗಿರುವ ದೇಶದೊಂದಿಗೆ ಹಿರಿದಾದ ಕಾರ್ಯತಂತ್ರದ ವ್ಯವಸ್ಥೆಯನ್ನು ಜೋಡಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ. ಫ್ರೆಂಚ್ ಸಫ್ರಾನ್ ಭಾರತೀಯ ಘಟಕಗಳೊಂದಿಗೆ 100 ಕಿಲೋ ನ್ಯೂಟನ್ ಎಂಜಿನ್‌ಗಳನ್ನು ಯಾವುದೇ ಪೂರ್ವ-ಷರತ್ತುಗಳಿಲ್ಲದೆ ತಯಾರಿಸಲು ಉತ್ಸುಕವಾಗಿದೆ,
ಸದ್ಯ ಸ್ಥಳೀಯ ತೇಜಸ್ ಯುದ್ಧ ವಿಮಾನದಲ್ಲಿ GE-404 ಎಂಜಿನ್ ಅನ್ನು ಬಳಸಲಾಗಿದೆ ಮತ್ತು ಮುಂದಕ್ಕೆ GE-414 ಅನ್ನು ಅಳವಡಿಸಲು ಪರಿಗಣಿಸಲಾಗಿದೆ.
ಡಿಆರ್‌ಡಿಓದ ಅವಳಿ ಎಂಜಿನ್ ಸುಧಾರಿತ ಬಹು-ಪಾತ್ರ ಯುದ್ಧ ವಿಮಾನ (AMCA) ಯೋಜನೆಯನ್ನು ಸಾಕಾರಗೊಳಿಸಲು ಜಿಇ-414 ಎಂಜಿನ್ ಅಗತ್ಯವಾಗಿದೆ. ಅದಕ್ಕಾಗಿ ರಕ್ಷಣಾ ಸಚಿವಾಲಯವು ಅಮೆರಿಕದ ಜತೆ ಸಮಾಲೋಚನೆ ನಡೆಸುತ್ತಿದೆ.
ಇದನ್ನೂ ಓದಿ| ಭಾರತೀಯ ನೌಕಾದಳ ವಿಶ್ವದಲ್ಲೇ ಅತ್ಯಂತ ಸಶಕ್ತ: ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್