ಯುದ್ಧವಿಮಾನಗಳ್ನು ಹೊತ್ತೊಯ್ಯುವ ಸ್ವದೇಶಿ ನಿರ್ಮಿತ ಐಎನ್ಎಸ್ ವಿಕ್ರಾಂತ್ (INS Vikrant) ಹಡಗು ತನ್ನ ಸೇವೆಯನ್ನು ಸೆಪ್ಟೆಂಬರ್ 2ರಿಂದ ಆರಂಭಿಸಲಿದೆ. ಯಾವುದೇ ದೇಶದ ಸೇನಾ ಸಾಮರ್ಥ್ಯ ಹೆಚ್ಚಳದಲ್ಲಿ ಏರ್‌ಕ್ರಾಫ್ಟ್ ಕ್ಯಾರಿಯರ್‌ಗಳು ಬಹಳ ಮಹತ್ವದ ಪಾತ್ರವನ್ನು ವಹಿಸುತ್ತವೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಹಡಗಿನ ಸೇವೆಗೆ ಚಾಲನೆ ನೀಡಲಿದ್ದಾರೆ.
ಜಗತ್ತಿನ ಕೆಲವೇ ಕೆಲವು ರಾಷ್ಟ್ರಗಳ ಸ್ವದೇಶಿಯಾಗಿ ಯುದ್ಧವಿಮಾನಗಳ್ನು ಹೊತ್ತೊಯ್ಯುವ ಹಡಗುಗಳನ್ನು ನಿರ್ಮಾಣ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಈ ಸಾಲಿಗೆ ಈಗ ಭಾರತವು ಸೇರ್ಪಡೆಯಾಗಿದೆ. ಇದಕ್ಕೂ ಮೊದಲು ಭಾರತವು ವಿದೇಶಿ ತಂತ್ರಜ್ಞಾನ ಹಾಗೂ ನೆರವಿನಿಂದ ಏರ್‌ಕ್ರಾಫ್ಟ್ ಕ್ಯಾರಿಯರ್‌ಗಳನ್ನು ಹೊಂದಿತ್ತು. ಇನ್ನು ಮುಂದೆ ಭಾರತವೇ ಈ ಹಡಗುಗಳನ್ನು ನಿರ್ಮಾಣ ಮಾಡಲಿದೆ. ಈ ಹಿನ್ನೆಲೆಯಲ್ಲಿ ಐಎನ್ಎಸ್ ವಿಕ್ರಾಂತ್ ನಿರ್ಮಾಣ ಮಹತ್ವದ ಮೈಲುಗಲ್ಲಾಗಿದೆ ಎಂದು ಹೇಳಬಹುದು.
ಶಿಪ್ ಒಳಗಡೆ ಏನಿದೆ?
ಐಎನ್ಎಸ್ ವಿಕ್ರಾಂತ್ ಹಡಗನ್ನು 20 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು 262 ಮೀಟರ್ ಉದ್ದ ಮತ್ತು 62 ಮೀಟರ್ ಅಗಲವಿದೆ. ಮತ್ತು 59 ಮೀಟರ್ ಎತ್ತರವಿದೆ. ಡಿಸ್‌ಪ್ಲೇಸ್ಮೆಂಟ್ 45 ಸಾವಿರ ಟನ್. ಈ ಹಡಗು 15 ಡೆಕ್ ಹೊಂದಿದ್ದು, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಈಜುಕೋಳ, ಅಡುಗೆಮನೆ ಮತ್ತು ಮಹಿಳೆಯರಿಗಾಗಿಯೇ ಪ್ರತ್ಯೇಕ ಕ್ಯಾಬಿನ್‌ಗಳಿವೆ. ಜತೆಗೆ, ಎಂದಿನಂತೆ ಶಸ್ತ್ರಾಸ್ತ್ರಗಳು ಮತ್ತು ಯುದ್ಧವಿಮಾನಗಳು ಇಲ್ಲಿರಲಿವೆ.
2400 ಕಿ.ಮೀ.ನಷ್ಟು ಕೇಬಲ್ಸ್!
ಐಎನ್ಎಸ್ ವಿಕ್ರಾಂತ್ ಹಡಗಿನ ನಿರ್ಮಾಣದ ಸಂಗತಿಗಳು ನಿಮ್ಮನ್ನು ಕೌತುಕಗೊಳಿಸುತ್ತದೆ. ಈ ಹಡಗಿನಲ್ಲಿ 2,300 ಬಿಡಿ ಭಾಗಗಳಿವೆ. ಬಳಸಲಾದ ಕೇಬಲ್ಸ್ ಒಟ್ಟುಗೂಡಿಸಿದರೆ ಅದು 2,400 ಕಿ.ಮೀ. ಉದ್ದವಾಗುತ್ತದೆ! 8 ದೈತ್ಯಾಕಾರದ ಜನರೇಟರ್‌ಗಳು ಇದರಲ್ಲಿವೆ.
2013ರಲ್ಲಿ ಲಾಂಚ್
ಯುದ್ಧವಿಮಾನ ಹೊತ್ತೊಯ್ಯುವ ಐಎನ್ಎಸ್ ವಿಕ್ರಾಂತ್ ಹಡಗು ನಿರ್ಮಾಣಕ್ಕೆ 2009ರಲ್ಲಿ ಚಾಲನೆ ನೀಡಲಾಯಿತು. ಮುಂದೆ 2013ರಲ್ಲಿ ಹಡಗನ್ನು ಲಾಂಚ್ ಮಾಡಲಾಯಿತು. ಕೊಚ್ಚಿ ಶಿಪ್‌ಯಾರ್ಡ್‌ನಲ್ಲಿ ಅಂದಿನ ರಕ್ಷಣಾ ಸಚಿವರು ಚಾಲನೆ ನೀಡಿದರು. ನಿರ್ಮಾಣ ಆರಂಭವಾಗುವ ಹೊತ್ತಿಗೆ ಹಡಗಿನ ಶೇ.83ರಷ್ಟು ಫ್ಯಾಬ್ರಿಕೇಷನ್ ಹಾಗೂ ಶೇ.75ರಷ್ಟು ಕನ್ಸ್‌ಟ್ರಕ್ಷನ್ ಕೆಲಸವು ಮುಗಿದಿತ್ತು. ಜತೆಗೆ, ಈ ಹಡಗಿನ ಶೇ.90ರಷ್ಟು ವಿನ್ಯಾಸವನ್ನು ಪೂರ್ಣಗೊಳಿಸಲಾಗಿತ್ತು. ಐಎನ್ಎಸ್ ವಿಕ್ರಾಂತ್ ಅನ್ನು 2022ರ ಜುಲೈ 28ರಂದು ಸೇನೆ ತನ್ನ ವಶಕ್ಕೆ ಪಡೆದುಕೊಂಡಿದ್ದು, 2022ರ ಸೆಪ್ಟೆಂಬರ್ 2ರಿಂದ ಈ ಹಡಗಿನ ಸೇವೆ ಆರಂಭವಾಗಲಿದೆ.
ಎಲೈಟ್ ಗ್ರೂಪ್ ಸೇರಿದ ಭಾರತ
ಸ್ವಂತ ಬಲದ ಮೇಲೆ ಯುದ್ಧವಿಮಾನ ಹೊತ್ತೊಯ್ಯುವ ಹಡಗು ನಿರ್ಮಿಸುವ ಜಗತ್ತಿನ ಕೆಲವೇ ರಾಷ್ಟ್ರಗಳ ಸಾಲಿಗೆ ಈಗ ಭಾರತವು ಸೇರ್ಪಡೆಯಾಗಿದೆ. ಅಮೆರಿಕ, ರಷ್ಯಾ, ಚೀನಾ, ಇಟಲಿ, ಇಂಗ್ಲೆಂಡ್ ಮತ್ತು ಫ್ರಾನ್ಸ್ ರಾಷ್ಟ್ರಗಳ ಮಾತ್ರ ಇಂಥ ಸಾಮರ್ಥ್ಯವನ್ನು ಹೊಂದಿವೆ. ಭಾರತವು ಕೂಡ ತನ್ನ ಹೊಸ ಹಡಗನ್ನು ಸ್ವದೇಶಿಯಾಗಿ ನಿರ್ಮಿಸುವ ಮೂಲಕ ವಿಕ್ರಮಗೈದಿದೆ.
ಯಾವ ಯುದ್ಧವಿಮಾನಗಳು?
ಈ ಐಎನ್ಎಸ್ ವಿಕ್ರಾಂತ್ ಹಡಗಿನಲ್ಲಿ ಫಿಕ್ಸೆಡ್ ವಿಂಗ್ ಮತ್ತು ರೋಟರಿ ಏರ್‌ಕ್ರಾಫ್ಟ್ಸ್‌ನಂಥ ಮಿಗ್ 29ಕೆ ಫೈಟರ್ ಜೆಟ್ಸ್, ಕಮೋವ್ 31 ಮತ್ತು ಎಂಎಚ್-60ಆರ್ ಮಲ್ಟಿ ರೋಲ್ ಹೆಲಿಕಾಪ್ಟರ್ ಮತ್ತು ಸ್ವದೇಶಿಯವಾಗಿ ನಿರ್ಮಿತ ಅಡ್ವಾನ್ಸ್ಡ್ ಹೆಲಿಕಾಫ್ಟರ್ಸ್(ಎಎಲ್ಎಚ್) ಮತ್ತು ಲೈಟ್ ಏರ್‌ಕ್ರಾಫ್ಟ್(ಎಲ್‌ಸಿಎ)ಗಳನ್ನು ಕಾರ್ಯನಿರ್ವಹಿಸುವ ಸಾಮರ್ಥ್ಯವಿದೆ.
ಸ್ವದೇಶಿ ಉಪಕರಣಗಳು
ಬಿಇಎಲ್, ಬಿಎಚ್ಇಎಲ್, ಜಿಆರ್‌ಎಸ್‌ಇ, ಕೆಲ್ಟ್ರಾನ್, ಕಿರ್ಲೋಸ್ಕರ್, ಲಾರ್ಸೆನ್ ಮತ್ತು ಟುಬ್ರೊ, ವರ್ಟ್‌ಸಿಲಾ ಇಂಡಿಯಾ ಇತ್ಯಾದಿ ಕಂಪನಿಗಳು ನಿರ್ಮಾಣದ ಮಾಡಿದ ಉಪಕರಣಗಳನ್ನು ಈ ಐಎನ್ಎಸ್ ವಿಕ್ರಾಂತ್ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ. ಜತೆಗೆ, 100ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಉತ್ಪಾದಿಸಿದ ಉಪಕರಣಗಳನ್ನು ಬಳಸಿಕೊಳ್ಳಲಾಗಿದೆ.
ಯಾಕಿಷ್ಟು ಮಹತ್ವ?
ಐಎನ್ಎಸ್ ವಿಕ್ರಾಂತ್ ನಿರ್ಮಾಣಕ್ಕೆ ಬಳಕೆಯಾದ ಒಟ್ಟು ವಸ್ತುಗಳು ಮತ್ತು ಉಪಕರಣಗಳ ಪೈಕಿ ಶೇ.76ರಷ್ಟು ಉಪಕರಣಗಳು ಮತ್ತು ವಸ್ತುಗಳನ್ನು ಸ್ವದೇಶಿಯವಾಗಿ ಬಳಸಿಕೊಳ್ಳಲಾಗಿದೆ. ಈ ಕಾರಣಕ್ಕಾಗಿಯೇ ಈ ಹಡಗು ನಿರ್ಮಾಣದ ಭಾರತದ ಮಟ್ಟಿಗೆ ತುಂಬಾ ಮಹತ್ವ ಎನಿಸಿಕೊಂಡಿದೆ.
ಮತ್ತ್ಯಾವು ಏರ್‌ಕ್ರಾಫ್ಟ್ಸ್ ಕ್ಯಾರಿಯರ್ಸ್?
ಅಡ್ಮಿರಲ್ ಗೋಸ್ಕೋವ್, ಐಎನ್ಎಸ್ ವಿರಾಟ್, ಐಎಎನ್ ವಿಶಾಲ್, ವಿಕ್ರಾಂತ್, ಐಎನ್ಎಸ್ ವಿಕ್ರಮಾದಿತ್ಯ ಮತ್ತು ಐಎನ್ಎಸ್ ವಿಕ್ರಾಂತ್. ಸದ್ಯ ಐಎನ್ಎಸ್ ವಿಕ್ರಮಾದಿತ್ಯ ಮಾತ್ರವೇ ಸೇವೆಯಲ್ಲಿದ್ದು, ಶೀಘ್ರವೇ ಐಎನ್ಎಸ್ ವಿಕ್ರಾಂತ್ ಸೇವೆಗೆ ದೊರೆಯಲಿದೆ. ಹಾಗಾಗಿ, ಸದ್ಯ ಭಾರತದ ಬಳಿ ಕೇವಲ ಒಂದೇ ಯುದ್ಧವಿಮಾನ ಹೊತ್ತೊಯ್ಯುವ ಹಡಗು ಇದೆ.
ಇದನ್ನೂ ಓದಿ | ಐಎನ್‌ಎಸ್ ವಿಕ್ರಮಾದಿತ್ಯ ಯುದ್ಧ ನೌಕೆಯಲ್ಲಿ ಅಗ್ನಿ ಅವಘಡ; ಬೆಂಕಿ ನಂದಿಸಿದ ಸಿಬ್ಬಂದಿ