Site icon Vistara News

Tapan Kumar Deka: ಗುಪ್ತಚರ ಇಲಾಖೆ ಮುಖ್ಯಸ್ಥ ತಪನ್‌ ಕುಮಾರ್‌ ದೇಕಾ ಅವಧಿ 1 ವರ್ಷ ವಿಸ್ತರಣೆ; ಇವರ ಹಿನ್ನೆಲೆ ಏನು?

Tapan Kumar Deka

Intelligence Bureau chief Tapan Kumar Deka gets one-year extension

ನವದೆಹಲಿ: ಭಯೋತ್ಪಾದನೆ ನಿಗ್ರಹ, ಈಶಾನ್ಯ ರಾಜ್ಯಗಳಲ್ಲಿ ಶಾಂತಿ ಸ್ಥಾಪನೆ, ನಕ್ಸಲರನ್ನು ಮಟ್ಟಹಾಕುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಐಪಿಎಸ್‌ ಅಧಿಕಾರಿ (IPS Officer), ಗುಪ್ತಚರ ಇಲಾಖೆ (Intelligence Bureau) ಮುಖ್ಯಸ್ಥ ತಪನ್‌ ಕುಮಾರ್‌ ದೇಕಾ (Tapan Kumar Deka) ಅವರ ಅಧಿಕಾರದ ಅವಧಿಯನ್ನು ಕೇಂದ್ರ ಸರ್ಕಾರವು (Central Government) ಒಂದು ವರ್ಷ ವಿಸ್ತರಿಸಿದೆ. 2024ರ ಜೂನ್‌ 30ಕ್ಕೆ ತಪನ್‌ ಕುಮಾರ್‌ ದೇಕಾ ಅವರ ಅವಧಿ ಮುಗಿಯಬೇಕಿತ್ತು. ಈಗ ಕೇಂದ್ರ ಸರ್ಕಾರವು ಅವರ ಅವಧಿಯನ್ನು 2025ರ ಜೂನ್‌ 30ರವರೆಗೆ ವಿಸ್ತರಣೆ ಮಾಡಿದೆ.

ತಪನ್‌ ಕುಮಾರ್‌ ದೇಕಾ ಅವರ ಅಧಿಕಾರದ ಅವಧಿಯನ್ನು ವಿಸ್ತರಿಸಿ ಕೇಂದ್ರ ಸಿಬ್ಬಂದಿ ಸಚಿವಾಲಯವು ಆದೇಶ ಹೊರಡಿಸಿದೆ. ಇವರ ಅಧಿಕಾರ ಅವಧಿ ವಿಸ್ತರಣೆಗೆ ನೇಮಕಾತಿಗಳ ಕುರಿತ ಸಂಪುಟ ಸಮಿತಿಯು ಅನುಮೋದನೆ ನೀಡಿತ್ತು. ಈಶಾನ್ಯ ರಾಜ್ಯಗಳಲ್ಲಿ ಗಲಭೆಯನ್ನು ನಿಯಂತ್ರಿಸುವುದು, ಬಸ್ತಾರ್‌ನಲ್ಲಿ ಮಾವೋವಾದಿಗಳನ್ನು ನಿಗ್ರಹಿಸುವುದು ಸೇರಿ ಹಲವು ಕಾರ್ಯಾಚರಣೆಗಳ ರೂವಾರಿ ಆಗಿರುವ ಇವರ ಅಧಿಕಾರವನ್ನು ಮುಂದುವರಿಸುವ ಕುರಿತು ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.

ಯಾರಿವರು ತಪನ್‌ ಕುಮಾರ್‌ ದೇಕಾ?

‘ಕ್ರೈಸಿಸ್‌ ಮ್ಯಾನ್’‌ ಎಂದೇ ಖ್ಯಾತಿಯಾಗಿರುವ ತಪನ್‌ ಕುಮಾರ್‌ ದೇಕಾ ಅವರು 1988ರ ಬ್ಯಾಚ್‌, ಹಿಮಾಚಲ ಪ್ರದೇಶ ಕೇಡರ್‌ನ ಐಪಿಎಸ್‌ ಅಧಿಕಾರಿಯಾಗಿದ್ದಾರೆ. 2009ರಲ್ಲಿ ಮುಂಬೈನಲ್ಲಿ ನಡೆದ ಉಗ್ರರ ದಾಳಿಯ ವೇಳೆ ಇವರು ಉಗ್ರರ ನಿಗ್ರಹ ಕಾರ್ಯಾಚರಣೆಯ ನೇತೃತ್ವವನ್ನು ವಹಿಸಿಕೊಂಡಿದ್ದರು. ಜಮ್ಮು-ಕಾಶ್ಮೀರದಲ್ಲಿ ಇಂಡಿಯನ್‌ ಮುಜಾಹಿದ್ದೀನ್‌ ಉಗ್ರರ ನಿಗ್ರಹ, ಈಶಾನ್ಯ ರಾಜ್ಯಗಳಲ್ಲಿ ಗಲಭೆಕೋರರ ನಿಯಂತ್ರಣ, ಛತ್ತೀಸ್‌ಗಢದ ಬಸ್ತಾರ್‌ನಲ್ಲಿ ಮಾವೋವಾದಿಗಳ ಹೆಡೆಮುರಿ ಕಟ್ಟುವುದು ಸೇರಿ ಹಲವು ಯಶಸ್ವಿ ಕಾರ್ಯಾಚರಣೆಗಳಿಗೆ ಇವರೇ ರೂವಾರಿಯಾಗಿದ್ದಾರೆ.

ಜಮ್ಮು-ಕಾಶ್ಮೀರ ಸರ್ಕಾರಕ್ಕೆ ಇವರು ಪ್ರಮುಖ ಸಲಹೆಗಾರರಾಗಿದ್ದರು. ಅದರಲ್ಲೂ, ಪಾಕಿಸ್ತಾನ ಪೋಷಿತ ಉಗ್ರವಾದವನ್ನು ನಿಗ್ರಹಿಸುವ ದಿಸೆಯಲ್ಲಿ ಇವರು ತೋರಿದ ಮಾರ್ಗದರ್ಶನವು ಸೇನೆಯ ಯಶಸ್ಸಿಗೆ ಕಾರಣವಾಗಿದೆ ಎಂದೇ ಹೇಳಲಾಗುತ್ತಿದೆ. ಅಸ್ಸಾಂ ಮೂಲದವರಾದ ಇವರನ್ನು 2019ರಲ್ಲಿ ಪೌರತ್ವ ತಿದ್ದುಪಡಿ ಜಾರಿಗೆ ಕೇಂದ್ರ ಸರ್ಕಾರ ಮುಂದಾದಾಗ ಅಸ್ಸಾಂನಲ್ಲಿ ಗಲಭೆ ಉಂಟಾಗಿತ್ತು. ಇದನ್ನು ನಿಯಂತ್ರಿಸಲು ಅಮಿತ್‌ ಶಾ ಅವರೇ ತಪನ್‌ ಕುಮಾರ್‌ ದೇಕಾ ಅವರನ್ನು ಅಸ್ಸಾಂಗೆ ಕಳುಹಿಸಿದ್ದರು. ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರವು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರ ಅಧಿಕಾರದ ಅವಧಿಯನ್ನು ಮೂರನೇ ಅವಧಿಗೆ ವಿಸ್ತರಣೆ ಮಾಡಿತ್ತು.

ಇದನ್ನೂ ಓದಿ: Ajit Doval: ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್‌ ದೋವಲ್‌ 3ನೇ ಅವಧಿಗೆ ನೇಮಕ; ಉಗ್ರರಿಗೆ ನಡುಕ

Exit mobile version