Site icon Vistara News

Interest rate hike | ನಾಳೆ ಮತ್ತೊಂದು ಸುತ್ತಿನ 0.50% ಬಡ್ಡಿ ದರ ಏರಿಕೆ ಸಂಭವ, ಪರಿಣಾಮವೇನು?

RBI imposed huge fine on ICICI Bank, Kotak Mahindra Bank

ಮುಂಬಯಿ: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಹಣಕಾಸು ನೀತಿ ಸಮಿತಿಯು ನಾಳೆ ( ಸೆಪ್ಟೆಂಬರ್‌ 30) ಮತ್ತೊಂದು ಸುತ್ತಿನಲ್ಲಿ 0.50% ಬಡ್ಡಿದರ ಏರಿಕೆ (Interest rate hike) ಮಾಡುವ ಸಾಧ್ಯತೆ ಇದೆ. ಇದರಿಂದಾಗಿ ರಿವರ್ಸ್‌ ರೆಪೊ ದರ 5.9%ಕ್ಕೆ ಹೆಚ್ಚಳವಾಗುವ ನಿರೀಕ್ಷೆ ಇದೆ.

ಬ್ಲೂಮ್‌ ಬರ್ಗ್‌ ನಡೆಸಿದ ಸಮೀಕ್ಷೆಯಲ್ಲಿ 35 ಆರ್ಥಿಕ ತಜ್ಞರನ್ನು ಸಂದರ್ಶಿಸಲಾಗಿತ್ತು. ಈ ಪೈಕಿ 24 ಎಕನಾಮಿಸ್ಟ್‌ಗಳ ಪ್ರಕಾರ ರೆಪೊ ದರದಲ್ಲಿ 0.50% ಹೆಚ್ಚಳವಾಗಲಿದೆ. ಹಣದುಬ್ಬರವನ್ನು ಹತ್ತಿಕ್ಕುವ ಸಲುವಾಗಿ ಬಡ್ಡಿ ದರವನ್ನು ಹೆಚ್ಚಿಸುವ ನಿರ್ಧಾರವನ್ನು ಆರ್‌ಬಿಐ ಕೈಗೊಳ್ಳುವ ನಿರೀಕ್ಷೆ ಇದೆ.

ಅಮೆರಿಕದ ಫೆಡರಲ್‌ ರಿಸರ್ವ್‌ ಸೇರಿದಂತೆ ಕೆಲ ಪ್ರಮುಖ ಸೆಂಟ್ರಲ್‌ ಬ್ಯಾಂಕ್‌ಗಳು ಬಡ್ಡಿ ದರವನ್ನು ಇತ್ತೀಚೆಗೆ ಏರಿಸಿವೆ. ಇದೇ ಮಾದರಿಯಲ್ಲಿ ಆರ್‌ಬಿಐ ಕೂಡ ಬಡ್ಡಿ ದರ ಹೆಚ್ಚಿಸುವ ಸಾಧ್ಯತೆ ಇದೆ. ಆರ್‌ಬಿಐನ ಹಣಕಾಸು ಸಮಿತಿ ಸಭೆ ಸೆಪ್ಟೆಂಬರ್‌ 28-30ರ ಅವಧಿಯಲ್ಲಿ ನಡೆಯುತ್ತಿದೆ.

ಭಾರತದ ಚಿಲ್ಲರೆ ಹಣದುಬ್ಬರವು ಕಳೆದ ಎಂಟು ತಿಂಗಳಿನಿಂದ ಆರ್‌ಬಿಐನ ಸಹಿಷ್ಣುತಾ ಮಟ್ಟಕ್ಕಿಂತ ಮೇಲಿದೆ. 2023ರ ಜನವರಿ-ಮಾರ್ಚ್‌ಗೆ ಮುನ್ನ ಇದು ಕಡಿಮೆಯಾಗುವ ಸಾಧ್ಯತೆ ಇಲ್ಲ.

ರೆಪೊ ದರ ಏರಿದರೆ ಪರಿಣಾಮವೇನು? ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ತನ್ನ ರೆಪೊ ದರವನ್ನು ಏರಿಸಿದರೆ ಬ್ಯಾಂಕ್‌ಗಳಿಗೆ ಆರ್‌ಬಿಐನಿಂದ ಅಲ್ಪಾವಧಿಗೆ ಪಡೆಯುವ ಫಂಡ್‌ಗೆ ತಗಲುವ ವೆಚ್ಚ ಹೆಚ್ಚುತ್ತದೆ. ಹೀಗಾಗಿ ಬ್ಯಾಂಕ್‌ಗಳಲ್ಲಿ ಸಾಲಗಳ ಬಡ್ಡಿ ದರಗಳು ಏರಿಕೆಯಾಗಲಿವೆ. ಮತ್ತೊಂದು ಕಡೆ ಬ್ಯಾಂಕ್‌ಗಳು ಫಂಡ್‌ ಸಂಗ್ರಹಿಸಲು ಠೇವಣಿಗಳಿಗೆ ನೀಡುವ ಬಡ್ಡಿ ದರವನ್ನು ಏರಿಸುವ ಸಾಧ್ಯತೆ ಇದೆ. ಹೀಗಾಗಿ ಬ್ಯಾಂಕ್‌ ಎಫ್‌ಡಿಗಳಲ್ಲಿ ಹೂಡಿಕೆ ಮಾಡುವವರಿಗೆ ಅನುಕೂಲವಾಗಬಹುದು. ಆದರೆ ಸಾಲಗಳ ಇಎಂಐ ಹೆಚ್ಚಳವಾಗುವುದರಿಂದ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಮತ್ತು ಕಾರ್ಪೊರೇಟ್‌ ಸಾಲಗಳು ತುಟ್ಟಿಯಾಗಲಿದೆ. ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಗುರುವಾರ 188 ಅಂಕ ಕುಸಿದಿತ್ತು. ನಾಳೆ ಷೇರು ಮಾರುಕಟ್ಟೆಯಲ್ಲಿ ಏರಿಳಿತ ನಿರೀಕ್ಷಿಸಲಾಗಿದೆ.

Exit mobile version