ಬೆಂಗಳೂರು: ಮಾರ್ಚ್ 8ರಂದು ವಿಶ್ವಾದ್ಯಂತ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು (Women’s Day 2023) ಆಚರಿಸಲಾಗುತ್ತದೆ. ಲಿಂಗ ಪಕ್ಷ ಪಾತವನ್ನು ಹೊರಹಾಕಿ, ಉತ್ತಮ ಸಮಾಜ ನಿರ್ಮಾಣದ ದೃಷ್ಟಿಯಿಂದ ಪ್ರತಿ ವರ್ಷ ಈ ದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ. ಅಷ್ಟಕ್ಕೂ ಈ ದಿನದ ಹಿನ್ನೆಲೆಯೇನು? ಏನಿದರ ಮಹತ್ವ ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.
ಮಹಿಳಾ ದಿನಾಚರಣೆಯ ಇತಿಹಾಸ
ಮಹಿಳಾ ದಿನಾಚರಣೆ ಆರಂಭವಾಗಿದ್ದು 1909ರಲ್ಲಿ. ಅಮೆರಿಕದಲ್ಲಿ ಆ ವರ್ಷದ ಫೆ.28ರಂದು ಮಹಿಳಾ ದಿನಾಚರಣೆ ಆಗಿತ್ತು. ಅದರ ಹಿಂದಿನ ವರ್ಷ ಅಂದರೆ 1908ರಲ್ಲಿ ಗಾರ್ಮೆಂಟ್ ಕಾರ್ಮಿಕರ ಮುಷ್ಕರ ನಡೆದಿತ್ತು. ಅದರಲ್ಲಿ ಸಾಕಷ್ಟು ಮಹಿಳೆಯರು ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬಂತು. ಅದರ ಸ್ಮರಣಾರ್ಥವಾಗಿಯೇ ಅಮೆರಿಕ ಮೊದಲ ಮಹಿಳಾ ದಿನಾಚರಣೆ ಆಚರಿಸಿತು. 1945ರಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಸಮಾನತೆ ನೀಡಬೇಕೆಂದು ವಿಶ್ವಸಂಸ್ಥೆಯಲ್ಲಿ ಒಪ್ಪಂದವಾಯಿತು. ನಂತರ 1975ರ ಮಾರ್ಚ್ 8ರಂದು ವಿಶ್ವಸಂಸ್ಥೆಯು ಮೊದಲನೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯೆಂದು ಘೋಷಿಸಿತು. 1977ರಲ್ಲಿ ವಿಶ್ವಸಂಸ್ಥೆಯನ್ನು ಮತ್ತೊಂದು ನಿರ್ಣಯ ಅಂಗೀಕರಿಸಲಾಯಿತು. ಅದರ ಪ್ರಕಾರ ಈ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಜಾಗತಿಕ ರಜಾದಿನವಾಗಿ ಘೋಷಿಸಲಾಯಿತು.
ಇದನ್ನೂ ಓದಿ: Women’s Day Offer: ಮಹಿಳಾ ದಿನದ ನಿಮಿತ್ತ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ಮಹಿಳೆಯರಿಗೆ ಭರ್ಜರಿ ಕೊಡುಗೆ!
ಈ ವರ್ಷದ ಮಹಿಳಾ ದಿನಾಚರಣೆಯ ಥೀಮ್
ಪ್ರತಿ ವರ್ಷವೂ ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಮಹತ್ವ ಹೆಚ್ಚಿಸುವ ನಿಟ್ಟಿನಲ್ಲಿ ವಿಶೇಷ ಥೀಮ್‌ಗಳನ್ನು ನೀಡುತ್ತಾ ಬಂದಿದೆ. ಅದರಂತೆ ಈ ವರ್ಷದ ಮಹಿಳಾ ದಿನಾಚರಣೆಗೆ “ಡಿಜಿಟಲ್: ಲಿಂಗ ಸಮಾನತೆಗೆ ಆವಿಷ್ಕಾರ ಮತ್ತು ತಂತ್ರಜ್ಞಾನ” ಎನ್ನುವ ಥೀಮ್ ಕೊಡಲಾಗಿದೆ.
ಡಿಜಿಟಲ್ ತಂತ್ರಜ್ಞಾನದಲ್ಲಿ ಮಹಿಳೆಯರು
ಅಂತರರಾಷ್ಟ್ರೀಯ ದೂರಸಂಪರ್ಕ ಯೂನಿಯನ್(ಐಟಿಯು) 2022ರ ವರದಿಯ ಪ್ರಕಾರ, 69% ಪುರುಷರು ಅಂತರ್ಜಾಲ ಬಳಸುತ್ತಿದ್ದರೆ, 63% ಮಹಿಳೆಯರು ಅಂತರ್ಜಾಲವನ್ನು ಬಳಸುತ್ತಾರೆ.
ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್) ವರದಿಯ ಪ್ರಕಾರ 2050ರ ವೇಳೆಗೆ 75% ಉದ್ಯೋಗಗಳು ಎಸ್‌ಟಿಇಎಂ (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ) ಕ್ಷೇತ್ರಗಳಿಗೆ ಸಂಬಂಧಿಸಿರುತ್ತವೆ. ಆದರೆ ಇಂದು, ಕೃತಕ ಬುದ್ಧಿಮತ್ತೆಯ ಕೇವಲ ಶೇ.22 ಸ್ಥಾನಗಳಲ್ಲಿ ಮಹಿಳೆಯರಿದ್ದಾರೆ.
ಜೆಂಡರ್ ಸ್ನ್ಯಾಪ್‌ಶಾಟ್ ವರದಿಯ ಪ್ರಕಾರ, 2022ರಲ್ಲಿ 51 ದೇಶಗಳಲ್ಲಿ ಶೇ. 38 ಮಹಿಳೆಯರು ವೈಯಕ್ತಿಕವಾಗಿ ಆನ್‌ಲೈನ್ ಹಿಂಸಾಚಾರವನ್ನು ಅನುಭವಿಸಿದ್ದಾರೆ.
ಇದನ್ನೂ ಓದಿ: WPL 2023: ಮಹಿಳಾ ಪ್ರೀಮಿಯರ್ ಲೀಗ್ ಅಂಕ ಪಟ್ಟಿ
ಮಹಿಳಾ ದಿನಾಚರಣೆಗೆ ಯುನೆಸ್ಕೋ ಸಂದೇಶ
ಯುನೆಸ್ಕೋದ ಮಹಾನಿರ್ದೇಶಕಿಯಾಗಿರುವ ಆಡ್ರೆ ಅಜೌಲೆ ಈ ವರ್ಷದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ವಿಶ್ವದ ಹೆಣ್ಣು ಮಕ್ಕಳಿಗೆ ಸಂದೇಶ ಕೊಟ್ಟಿದ್ದಾರೆ. “ತಾಂತ್ರಿಕ ರೂಪಾಂತರದಿಂದ ಸಿಕ್ಕಿರುವ ಅವಕಾಶಗಳನ್ನು ಮಹಿಳೆಯರು ಮತ್ತು ಹುಡುಗಿಯರು ಉಪಯೋಗಿಸಿಕೊಳ್ಳುತ್ತಾರೆಯೇ ಎಂದು ನೋಡಿಕೊಳ್ಳಬೇಕಿದೆ ಹಾಗೆಯೇ ಈ ಕ್ಷೇತ್ರದಲ್ಲಿ ಹೆಣ್ಣಿಗೆ ಸಮಾನ ಸ್ಥಾನ ಸಿಗುವುದನ್ನು ಖಾತ್ರಿಪಡಿಸಿಕೊಳ್ಳಬೇಕಿದೆ. ಪುರುಷರಿಗೆ ಹೋಲಿಸಿದರೆ ನಾಲ್ಕು ಪಟ್ಟು ಕಡಿಮೆ ಮಹಿಳೆಯರು ಐಸಿಟಿ ಕೌಶಲ್ಯ ಹೊಂದಿದ್ದಾರೆ. ಟೆಕ್ ಕಂಪನಿಗಳಲ್ಲೂ ಕೂಡ ಕೇವಲ ಶೇ.20 ಮಹಿಳೆಯರಿದ್ದಾರೆ. ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲೂ ಮಹಿಳೆಯರು ಸಾಕಷ್ಟು ಹಿಂದಿದ್ದಾರೆ. ಹಾಗಾಗಿ ಈ ವರ್ಷ ಇದೇ ವಿಚಾರವನ್ನು ಕೇಂದ್ರೀಕರಿಸಿಕೊಂಡು ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.