Site icon Vistara News

International Women’s Day: ಕೊರೊನಾ ಕಾಲದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದು ಹೋರಾಡಿದ ಮಹಿಳೆಯರಿವರು

#image_title

ಬೆಂಗಳೂರು: ಕೊರೊನಾ ಸಾಂಕ್ರಾಮಿಕವು ಇಡೀ ವಿಶ್ವಕ್ಕೇ ಮಹಾಮಾರಿಯಾಗಿ ಕಾಡಿದೆ. ಎರಡು ವರ್ಷಗಳ ಕಾಲ ಜನರು ಈ ಸಂಕಷ್ಟದಲ್ಲಿ ಬೆಂದಿದ್ದಾರೆ. ಆರಂಭಿಕ ದಿನಗಳಲ್ಲಂತೂ ಕೊರೊನಾ ಎನ್ನುವ ಭಯದಿಂದಲೇ ಅನಾರೋಗ್ಯಕ್ಕೆ ತುತ್ತಾದವರೂ ಇದ್ದಾರೆ. ಅಂತಹ ಸಮಯದಲ್ಲೂ ಮುಖ್ಯ ಭೂಮಿಕೆಯಲ್ಲಿದ್ದುಕೊಂಡು ಜನರ ಸೇವೆ ಮಾಡಿದವರು ಅನೇಕರು. ಆ ಪಟ್ಟಿಯಲ್ಲಿ ಮೊದಲಿಗೆ ನಿಲ್ಲುವ ಮೂರು ಮಹಿಳೆಯರ ಕುರಿತಾದ ಪರಿಚಯ (International Women’s Day) ಇಲ್ಲಿದೆ. (ನ್ಯೂಸ್‌ 18 ಸಂಸ್ಥೆ ನಡೆಸಿರುವ ಸಂದರ್ಶನದಲ್ಲಿ ಸಿಕ್ಕ ಮಾಹಿತಿ)


ಪ್ರೀತಿ ಸೂದನ್‌

ಪ್ರೀತಿ ಸೂದನ್‌ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಅರ್ಥಶಾಸ್ತ್ರದಲ್ಲಿ ಎಂಫಿಲ್ ಹಾಗೂ ಸಾಮಾಜಿಕ ನೀತಿ ಮತ್ತು ಯೋಜನೆಯಲ್ಲಿ ಎಂಎಸ್ಸಿ ಪದವಿ ಪಡೆದವರು. ಅವರು ಅನೇಕ ಸರ್ಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಆಹಾರ ವಿತರಣಾ ಇಲಾಖೆಯ ಕಾರ್ಯದರ್ಶಿಯಾಗಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ರಕ್ಷಣಾ ಸಚಿವಾಲಯದಲ್ಲಿ ಸೇವೆ ಸಲ್ಲಿಸಿರುವ ಅನುಭವ ಅವರಿಗಿದೆ. ಕೊರೊನಾ ಸಮಯದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದುಕೊಂಡು, ಬೇರೆ ಬೇರೆ ಇಲಾಖೆಗಳೊಂದಿಗೆ ಸಂಪರ್ಕ ಸಾಧಿಸಿಕೊಂಡು ಕೆಲಸ ಮಾಡಿದವರಲ್ಲಿ ಇವರೂ ಒಬ್ಬರಾಗಿದ್ದಾರೆ.

“ಕೊರೊನಾದ ಆರಂಭಿಕ ದಿನಗಳನ್ನು ನಿಭಾಯಿಸುವುದು ನನ್ನ ವೃತ್ತಿಜೀವನದ ಅತ್ಯಂತ ಸವಾಲಿನ ಭಾಗವಾಗಿತ್ತು. ಆದರೆ ಅದೇ ಸಮಯವು ನನ್ನನ್ನು ಉತ್ತಮ ವ್ಯಕ್ತಿಯನ್ನಾಗಿ ಮಾಡಿದೆ” ಎಂದು ಪ್ರೀತಿ ಹೇಳಿಕೊಂಡಿದ್ದಾರೆ. “ಕೆಲಸ ಮಾಡುವ ಮಹಿಳೆಯರ ಮಕ್ಕಳು ಹೆಚ್ಚು ಸ್ವತಂತ್ರರಾಗಿರುತ್ತಾರೆ. ತಾಯಂದಿರು ಎದುರಿಸುತ್ತಿರುವ ಕೆಲಸದ ಒತ್ತಡಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಚೆನ್ನಾಗಿ ಹೊಂದಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ನೀವು ಇರುವ ಸ್ಥಳದಲ್ಲಿ, ಕಚೇರಿಯಲ್ಲಿ ಮತ್ತು ಮನೆಯಲ್ಲಿ ಉತ್ತಮ ಉದ್ದೇಶದೊಂದಿಗೆ ನಿಮ್ಮ ಕೈಲಾದಷ್ಟು ಕೆಲಸ ಮಾಡುತ್ತಿದ್ದರೆ ಎಲ್ಲವೂ ಕಾರ್ಯರೂಪಕ್ಕೆ ಬರುತ್ತವೆ ಎನ್ನುವುದು ನನ್ನ ನಂಬಿಕೆ”ಎಂದು ಅವರು ಹೇಳಿದ್ದಾರೆ.

ಡಾ. ಪ್ರಿಯಾ ಅಬ್ರಹಾಂ

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ) ಮುಖ್ಯಸ್ಥರಾಗಿರುವ ಪ್ರಿಯಾ ಅಬ್ರಹಾಂ ಅವರ ತಂಡವು SARS-CoV-2 ವೈರಸ್‌ನ್ನು ಗುರುತಿಸುವ ಕೆಲಸ ಮಾಡಿತು. ಈ ಬಗ್ಗೆ ಮಾತನಾಡಿರುವ ಅವರು, “ನಾವು ಕೊರೊನಾ ಬಗ್ಗೆ ಅಧ್ಯಯನಕ್ಕಾಗಿ ಎರಡು ತಂಡಗಳನ್ನು ರಚಿಸಿಕೊಂಡೆವು. ನಮ್ಮ ದೇಶಕ್ಕೆ ಸೋಂಕು ಕೆಲವೇ ದಿನಗಳಲ್ಲಿ ಬರುತ್ತದೆ ಎನ್ನುವುದು ನಮಗೆ ತಿಳಿದಿತ್ತು. ಆದರೆ ಮೊದಲನೇ ಪ್ರಕರಣ ಪತ್ತೆಯಾದಾಗ ಆ ವಿಚಾರವನ್ನು ಐಸಿಎಂಆರ್‌ಗೆ ತಿಳಿಸುವಾಗ ನನಗೆ ಯಾವುದೋ ದೊಡ್ಡ ಜವಾಬ್ದಾರಿಯೊಂದು ಹೆಗಲ ಮೇಲೆ ಇದೆ ಎಂದೆನಿಸಿತ್ತು. ವಿಜ್ಞಾನಿಗಳು ಮಾತ್ರವಲ್ಲ, ತಂತ್ರಜ್ಞರು ಮತ್ತು ಆಡಳಿತ ಸಿಬ್ಬಂದಿಗಳೆಲ್ಲರೂ ಅಗತ್ಯವನ್ನು ಮೀರಿ ಕೆಲಸ ಮಾಡಿದೆವು. ಎಲ್ಲರಿಗೂ ಮನೆಯಲ್ಲಿ ಪುಟ್ಟ ಪುಟ್ಟ ಮಕ್ಕಳಿದ್ದರು. ಆ ಸಮಯ ನಿಜಕ್ಕೂ ಕಷ್ಟಕರವಾಗಿತ್ತು” ಎಂದು ಡಾ. ಪ್ರಿಯಾ ಕೊರೊನಾ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

“ನಾನು ಕೂಡ ಒಬ್ಬ ತಾಯಿಯಾಗಿದ್ದೆ. ಕುಟುಂಬದ ಜತೆಯಲ್ಲಿ ಈ ಕೊರೊನಾ ಕಷ್ಟ ಕಾಲವನ್ನು ನಿಭಾಯಿಸುವುದು ಕಷ್ಟದ ಕೆಲಸವಾಗಿತ್ತು. ನನ್ನ ಪತಿ ನನಗೆ ಬೆಂಬಲ ನೀಡಿದರು. ಪೋಷಕರೂ ಕೂಡ ಜತೆ ನಿಂತರು” ಎಂದು ಅವರು ಹೇಳಿಕೊಂಡಿದ್ದಾರೆ. ಕೊರೊನಾ ಸಮಯದಲ್ಲಿ ಪ್ರಿಯಾ ಅವರು ಪುಣೆಯಲ್ಲಿ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದರು. ಸರ್ಕಾರಕ್ಕೆ ಕೊರೊನಾ ಸಾಂಕ್ರಾಮಿಕ ತಡೆಯುವುದಕ್ಕೆ ಬೆನ್ನೆಲುಬಾಗಿ ನಿಂತು ಕೆಲಸ ಮಾಡಿದರು.

ಡಾ. ರೇಣು ಸ್ವರೂಪ್‌


ಭಾರತದಲ್ಲಿ ಕೊರೊನಾ ಟೆಸ್ಟಿಂಗ್‌ ಸಾಧ್ಯವಾಗುವುದಕ್ಕೆ ಶ್ರಮಿಸಿದವರಲ್ಲಿ ಡಾ. ರೇಣು ಸ್ವರೂಪ್‌ ಮತ್ತು ಅವರ ತಂಡವಿದೆ. ಬೇರೆ ದೇಶಗಳಿಂದ ಟೆಸ್ಟಿಂಗ್‌ ಕಿಟ್‌ ಆಮದು ಮಾಡಿಕೊಳ್ಳುವುದರಿಂದ ಭಾರತ ಬೇರೆ ದೇಶಕ್ಕೆ ಟೆಸ್ಟಿಂಗ್‌ ಕಿಟ್‌ ರಫ್ತು ಮಾಡುವಷ್ಟು ಬೆಳೆಯಿತು ಎಂದರೆ ಅದರಲ್ಲಿ ಈ ತಂಡದ ಶ್ರಮ ದೊಡ್ಡದಿದೆ. ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದೊಂದಿಗೆ 30 ವರ್ಷಗಳ ಕಾಲ ದುಡಿದಿರುವ ರೇಣು ಅವರಿಗೆ ಅದೇ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಅನುಭವವೂ ಇದೆ. ಆ ಇಲಾಖೆಯ ಮೊದಲನೇ ಮಹಿಳಾ ಕಾರ್ಯದರ್ಶಿ ಎನ್ನುವ ಕೀರ್ತಿಯೂ ಅವರದ್ದೇ ಆಗಿದೆ.

“ಜೀವನದಲ್ಲಿ ಪ್ರತಿಯೊಬ್ಬರಿಗೂ ಸವಾಲುಗಳು ಎದುರಾಗುತ್ತವೆ. ಆದರೆ ಅದನ್ನು ಎದುರಿಸುವ ಮಾರ್ಗವನ್ನು ನಾವು ಕಂಡುಕೊಳ್ಳಬೇಕು. ನನ್ನ ವೃತ್ತಿ ಜೀವನ ಇನ್ನೇನು ಮುಗಿಯುತ್ತಿದೆ ಎನ್ನುವ ಸಮಯದಲ್ಲಿ ಕೋವಿಡ್‌ ಮಹಾಮಾರಿ ಬಂದಿತು. ನಮ್ಮ ದೇಶದಲ್ಲಿ ಕೊರೊನಾ ವಿರುದ್ಧ ಹೋರಾಡುವುದಕ್ಕೆ ವೈಜ್ಞಾನಿಕ ಸಹಾಯ ಮಾಡುವುದಕ್ಕೆ ನನಗೆ ಅವಕಾಶ ಸಿಕ್ಕಿತು ಎನ್ನುವ ಖುಷಿಯಿದೆ” ಎಂದು ರೇಣು ಹೇಳಿಕೊಂಡಿದ್ದಾರೆ.

Exit mobile version