ನವದೆಹಲಿ: ಅಮೆರಿಕದ ರಕ್ಷಣಾ ಸಂಸ್ಥೆ ನೀಡಿದ ಸುಳಿವಿನ ಮೇರೆಗೆ ಚುರುಕಿನ ಕಾರ್ಯಾಚರಣೆ ನಡೆಸಿದ ಮುಂಬಯಿ (Mumbai) ಪೊಲೀಸರು, ಆತ್ಮಹತ್ಯೆಗೆ ಮುಂದಾಗಿದ್ದ ಯುವಕನ ಪ್ರಾಣ ರಕ್ಷಣೆ ಮಾಡಿದ್ದಾರೆ. ʼನೋವಿಲ್ಲದೆ ಜೀವ ಕಳೆದುಕೊಳ್ಳುವುದು ಹೇಗೆʼ ಎಂಬ ಕುರಿತು ಗೂಗಲ್‌ನಲ್ಲಿ ಹುಡುಕಾಡುತ್ತಿದ್ದ ವ್ಯಕ್ತಿಯ ಬಗ್ಗೆ ಮತ್ತು ಆತನ ಐಪಿ ವಿಳಾಸ ಮತ್ತು ಲೊಕೇಶನ್ ಮಾಹಿತಿಯನ್ನು ಅಮೆರಿಕದ ರಾಷ್ಟ್ರೀಯ ಸಂಸ್ಥೆ-ಇಂಟರ್‌ಪೋಲ್(Interpol), ದೆಹೆಲಿಯಲ್ಲಿರುವ (Delhi) ತನ್ನ ಸಹವರ್ತಿಗಳಿಗೆ ಮಾಹಿತಿ ನೀಡಿತ್ತು(viral news).
ಅಮೆರಿಕದಿಂದ ಬಂದ ಮಾಹಿತಿಯನ್ನು ಆಧರಿಸಿ, ಆತ ಮುಂಬಯಿಯ ಕುರ್ಲಾದಲ್ಲಿರುವುದನ್ನು ಪೊಲೀಸ್ ಅಧಿಕಾರಿಗಳು ಪತ್ತೆ ಮಾಡಿದ್ದರು. ಐಟಿ ಕಂಪನಿಯೊಂದರ ಉದ್ಯೋಗಿಯಾಗಿರುವ ೨೫ ವರ್ಷದ ಆತನನ್ನು ಮಂಗಳವಾರ ಮಧ್ಯಾಹ್ನ ವಶಕ್ಕೆ ತೆಗೆದುಕೊಂಡ ಮುಂಬಯಿ ಅಪರಾಧ ವಿಭಾಗದ ಪೊಲೀಸರು, ಆಪ್ತ ಸಲಹೆ- ಸಾಂತ್ವನವನ್ನೂ ನೀಡಿದ್ದಾರೆ.
ಜೋಗೇಶ್ವರಿಯ ನಿವಾಸಿಯಾಗಿರುವ ಆತ ಖಾಸಗಿ ಐಟಿ ಸಂಸ್ಥೆಯೊಂದರ ಉದ್ಯೋಗಿ. ತನ್ನ ವಿದ್ಯಾಭ್ಯಾಸ ಮತ್ತಿತರ ಕಾರಣಗಳಿಗಾಗಿ ಆತ ಸಾಲ ಮಾಡಿದ್ದು, ತೀರಿಸಲು ಸಾಧ್ಯವಾಗದೆ ಖಿನ್ನತೆಗೆ ಜಾರಿದ್ದ. ಮನೆ ಸಾಲದ ಕಂತುಗಳನ್ನು ಕಟ್ಟಲು ಸಹ ಆತನಿಗೆ ಕಷ್ಟವಾಗಿದ್ದರಿಂದ, ನೋವಿಲ್ಲದೆ ಆತ್ಮಹತ್ಯೆಗೆ ಮಾರ್ಗಗಳನ್ನು ಆತ ಹುಡುಕುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Interpol | ದಾವೂದ್, ಹಫೀಜ್ ಎಲ್ಲಿ ಎಂಬ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಪಾಕ್‌ನ ತನಿಖಾ ಸಂಸ್ಥೆ ಅಧಿಕಾರಿ
ಅಪರಾಧ ವಿಭಾಗದ ಕಚೇರಿಗೆ ಆತನನ್ನು ಕರೆತಂದ ಪೊಲೀಸರು ಆಪ್ತ ಸಲಹೆಯನ್ನು ನೀಡಿದ್ದಾರೆ. ಈ ಹಿಂದೆಯೂ ಮೂರ್ನಾಲ್ಕು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಆತನನ್ನು ಈಗ ಪೋಷಕರ ವಶಕ್ಕೆ ಒಪ್ಪಿಸಲಾಗಿದ್ದು, ಮನೋಚಿಕಿತ್ಸಕರಿಂದ ನೆರವು ಪಡೆಯುವಂತೆ ಸೂಚಿಸಲಾಗಿದೆ.