Site icon Vistara News

Iron Ore: ರಾಜಸ್ಥಾನದ ಕರೌಲಿಯಲ್ಲಿ ಭಾರೀ ಪ್ರಮಾಣದ ಅದಿರು ನಿಕ್ಷೇಪಗಳು ಪತ್ತೆ!

Iron Ore deposits found in Karauli, Rajasthan

ನವದೆಹಲಿ: ರಾಜಸ್ಥಾನದ (Rajasthan) ಕರೌಲಿ ಜಿಲ್ಲೆಯ (Karauli District) ಹಿಂಡೋನ್ ಬಳಿ ಸುಮಾರು 1,888 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬಿಣದ ಅದಿರಿನ ಬೃಹತ್ ನಿಕ್ಷೇಪಗಳು ಪತ್ತೆಯಾಗಿವೆ(Iron Ore deposits). ಈ ಹಿನ್ನೆಲೆಯಲ್ಲಿ ಅದಿರು ನಿಕ್ಷೇಪ ಬ್ಲಾಕ್‌ಗಳ ಹರಾಜಿಗೆ ರಾಜಸ್ಥಾನದ ಗಣಿ ಇಲಾಖೆಯು ಸಿದ್ಧತೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಥಮಿಕ ಸೂಚನೆಗಳ ಪ್ರಕಾರ ಕರೌಲಿಯ ಹಿಂಡೋನ್ ಬಳಿಯ ಖೋಡಾ, ದಾಡರೋಲಿ, ತೋಡುಪುರ ಮತ್ತು ಲಿಲೋಟಿಯಲ್ಲಿ 840 ಟನ್‌ಗೂ ಹೆಚ್ಚು ಕಬ್ಬಿಣದ ಅದಿರು ನಿಕ್ಷೇಪಗಳಿವೆ ಎಂದು ಗಣಿ ಕಾರ್ಯದರ್ಶಿ ಆನಂದಿ ತಿಳಿಸಿದ್ದಾರೆ. ಕಬ್ಬಿಣದ ಅದಿರಿನ ಹೊಸ ನಿಕ್ಷೇಪಗಳು ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿ ಮತ್ತು ಉದ್ಯೋಗಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತವೆ ಎಂದು ಅವರು ಹೇಳಿದರು.

ಇಲಾಖೆಯು ನಡೆಸಿದ ಆರಂಭಿಕ ಪರಿಶೋಧನೆಯಲ್ಲಿ, ಕಬ್ಬಿಣದ ಅದಿರಿನ ಮ್ಯಾಗ್ನೆಟೈಟ್ ಮತ್ತು ಹೆಮಟೈಟ್ ಎರಡರ ಸೂಚನೆಗಳು ಕಂಡುಬಂದಿವೆ. ಕರೌಲಿಯ ಖೋಡಾದಲ್ಲಿ 462.3 ಹೆಕ್ಟೇರ್, ದಾಡರೋಳಿಯಲ್ಲಿ 754.38 ಹೆಕ್ಟೇರ್, ತೋಡುಪುರದಲ್ಲಿ 260.71 ಹೆಕ್ಟೇರ್ ಮತ್ತು ಲಿಲೋಟಿಯಲ್ಲಿ 410.94 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬಿಣದ ಅದಿರು ನಿಕ್ಷೇಪಗಳು ಪತ್ತೆಯಾಗಿವೆ.

ಸಂಯೋಜಿತ ಪರವಾನಗಿಯ ಹರಾಜು ಈ ಪ್ರದೇಶದಲ್ಲಿ ಮತ್ತಷ್ಟು ಅನ್ವೇಷಣೆಗೆ ಕಾರಣವಾಲಿದೆ ಮತ್ತು ಹೆಚ್ಚಿನ ಪರಿಶೋಧನೆಯು ಈ ಪ್ರದೇಶದಲ್ಲಿ ಕಬ್ಬಿಣದ ಅದಿರಿನ ಹೆಚ್ಚಿನ ನಿಕ್ಷೇಪಗಳನ್ನು ಪತ್ತೆ ಹಚ್ಚುವ ಸಾಧ್ಯತೆ ಇದೆ. ಕರೌಲಿಯಲ್ಲಿ ಕಬ್ಬಿಣದ ಅದಿರಿನ ಆವಿಷ್ಕಾರದಿಂದ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕೈಗಾರಿಕಾ ಹೂಡಿಕೆಗೆ ಹೆಚ್ಚಿನ ಬಲ ಬರಲಿದೆ ಮತ್ತು ಉಕ್ಕು ಮತ್ತು ಸಿಮೆಂಟ್ ಕೈಗಾರಿಕೆಗಳಿಗೆ ಉತ್ತೇಜನ ಸಿಗಲಿದೆ ಎಂದು ಅವರು ತಿಳಿಸಿದರು.

ಉಕ್ಕಿನ ಉದ್ಯಮ, ಕಲ್ಲಿದ್ದಲು ತೊಳೆಯುವುದು, ಫೆರೋಲಾಯ್, ಫೌಂಡರಿಗಳು, ಸೆರಾಮಿಕ್ ಮತ್ತು ಸಿಮೆಂಟ್ ಕೈಗಾರಿಕೆಗಳು ಸೇರಿದಂತೆ ಅನೇಕ ಕೈಗಾರಿಕೆಗಳು ವರ್ಷಗಳವರೆಗೆ ಕಚ್ಚಾ ವಸ್ತುಗಳನ್ನು ಪಡೆಯಲು ಸಾಧ್ಯವಾಗಲಿದೆ. ರಾಜ್ಯದಲ್ಲಿ ಈ ಕೈಗಾರಿಕೆಗಳಲ್ಲಿ ಹೂಡಿಕೆ ಮತ್ತು ಹೊಸ ಕೈಗಾರಿಕೆಗಳ ಸ್ಥಾಪನೆಯೊಂದಿಗೆ, ಉದ್ಯೋಗ ಮತ್ತು ಆದಾಯದ ಅವಕಾಶಗಳು ಅಭಿವೃದ್ಧಿಯಾಗುವ ನಿರೀಕ್ಷೆಗಳಿವೆ.

ರಾಜಸ್ಥಾನದಲ್ಲಿ ಹೆಚ್ಚಿನ ಕಬ್ಬಿಣದ ಅದಿರಿನ ನಿಕ್ಷೇಪಗಳನ್ನು ಕಂಡುಹಿಡಿಯುವ ಸಾಧ್ಯತೆಯ ದೃಷ್ಟಿಯಿಂದ, ಇತರ ಸ್ಥಳಗಳಲ್ಲಿಯೂ ಪರಿಶೋಧನಾ ಕಾರ್ಯಗಳು ನಡೆಯುತ್ತಿವೆ, ಜೈಪುರ, ಜುಂಜುನು, ಭಿಲ್ವಾರಾ, ಸಿಕಾರ್, ಅಲ್ವಾರ್ ಮುಂತಾದೆಡೆ ಕಬ್ಬಿಣದ ಅದಿರು ಗಣಿಗಾರಿಕೆ ಮತ್ತು ಪರಿಶೋಧನೆ ಕಾರ್ಯ ನಡೆಯುತ್ತಿದೆ ಎಂದು ಆನಂದಿ ಹೇಳಿದರು.

ಈ ಸುದ್ದಿಯನ್ನೂ ಓದಿ: Iron Ore Mining | ಕರ್ನಾಟಕದಲ್ಲಿ ಅದಿರು ಉತ್ಪಾದನೆ ಹೆಚ್ಚಳಕ್ಕೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ

Exit mobile version